ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬರ ಘೋಷಣೆಯಲ್ಲೂ ತಾರತಮ್ಯ

Published 15 ಸೆಪ್ಟೆಂಬರ್ 2023, 4:50 IST
Last Updated 15 ಸೆಪ್ಟೆಂಬರ್ 2023, 4:50 IST
ಅಕ್ಷರ ಗಾತ್ರ

ರಾಯಚೂರು: ಮಳೆ ಕೊರತೆಯಿಂದಾಗಿ ಬೆಳೆ ನಷ್ಟದ ಭೀತಿ ಎದುರಾದ ಬೆನ್ನಲ್ಲೇ ರಾಜ್ಯದ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯ 7 ತಾಲ್ಲೂಕುಗಳ ಪೈಕಿ ನಾಲ್ಕು ತೀವ್ರ ಬರ ಪೀಡಿತ ಹಾಗೂ 2 ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಣೆ ಮಾಡಿದ್ದು, ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು, ರಾಯಚೂರು, ಸಿರವಾರ ಹಾಗೂ ಮಾನ್ವಿ ತಾಲ್ಲೂಕನ್ನು ತೀವ್ರ ಬರ ಪೀಡಿತ ಹಾಗೂ ದೇವದುರ್ಗ ಹಾಗೂ ಮಸ್ಕಿ ತಾಲ್ಲೂಕನ್ನು ಸಾಧಾರಣ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಿಂಧನೂರು ತಾಲ್ಲೂಕನ್ನು ಎರಡೂ ಪಟ್ಟಿಯಿಂದ ಕೈ ಬಿಡಲಾಗಿದೆ. ಸರ್ಕಾರದ ಈ ನಿಲುವಿಗೆ ಸಿಂಧನೂರಿನ ಅನೇಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಹತ್ತಿ, ತೊಗರಿ ಹಾಗೂ ಭತ್ತ ಹೆಚ್ಚಾಗಿ ಬೆಳೆಯಲಾಗಿದ್ದು ಸರಿಯಾದ ಪ್ರಮಾಣದಲ್ಲಿ ಮಳೆ ಬಾರದ ಕಾರಣ ರೈತರು ಬೆಳೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿಯಾಗಿ ಸಮೀಕ್ಷೆ, ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಿ ನೀಡಿರುವ ವರದಿಯ ಆಧಾರದ ಮೇಲೆ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ಶೇ 29 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ ಎಂದು ಮಾಹಿತಿ ಸಂಗ್ರಹಿಸಲಾಗಿದೆ. ರೈತರು ಸ್ವಯಂ ಪ್ರೇರಿತರಾಗಿ ಆ್ಯಪ್ ಮೂಲಕ ಬೆಳೆಯ ಮಾಹಿತಿ ನೀಡಿದ್ದಾರೆ. ಇನ್ನುಳಿದಂತೆ ಪ್ರತಿ ತಾಲ್ಲೂಕಿನ ಆಯ್ದ 135 ಜನರ ಆಯ್ದ ಬೆಳೆಗಳ ಮಾಹಿತಿ ಸಂಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಘೋಷಿತ ಬರಪೀಡಿತ ಪ್ರದೇಶಗಳಲ್ಲಿ ತಾಲ್ಲೂಕು ಬೆಳೆ ನಷ್ಟದ ಅನುಗುಣವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣೆ (ಎಸ್‌ಡಿಆರ್ ಎಫ್) ನಿಯಮಗಳ ಅನ್ವಯ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ವೈಜ್ಞಾನಿಕ ಸಮೀಕ್ಷೆ ನಡೆಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಸಿಂಧನೂರು ತಾಲ್ಲೂಕು ನೀರಾವರಿ ಪ್ರದೇಶ ಹೊಂದಿದರೂ ಕೆಳಭಾಗದ ರೈತರ ಬೆಳೆಗಳಿಗೆ ಸರಿಯಾಗಿ ನೀರು ತಲುಪಿಲ್ಲ. ಮಳೆಯ ಕೊರತೆಯಿಂದಾಗಿ ಭತ್ತ ಬೆಳೆದೆ ರೈತರು ನಷ್ಟಕ್ಕೆ ಈಡಾಗಿದ್ದಾರೆ. ಬರ ಪೀಡಿತ ಘೋಷಣೆಗೆ ಎನ್‌ಡಿಆರ್‌ಎಫ್ ಮಾನದಂಡಗಳು ಅವೈಜ್ಞಾನಿಕವಾಗಿದೆ. ಒಣ ಭೂಮಿಯ ಸ್ಥಿತಿ ಗಮನಿಸದೇ ಬರಪೀಡಿತ ತೀರ್ಮಾನ ಮಾಡಲಾಗಿದೆ. ಈ ಮಾನದಂಡಗಳು ಬದಲಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದ್ದಾರೆ.

ಸಿಂಧನೂರಿನಲ್ಲಿ ರೈತರು ಹೆಚ್ಚಾಗಿ ಭತ್ತ ಬೆಳೆದಿದ್ದು ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಮೇಲ್ಭಾಗದಲ್ಲಿ ಅಕ್ರಮ ನಡೆಯುತ್ತಿರುವ (ನೀರು ದುರ್ಬಳಕೆ) ಕಾರಣ ಕೆಳ ಭಾಗದ ರೈತರಿಗೆ ಸರಿಯಾಗಿ ನೀರು ತಲುಪಿಲ್ಲ. ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾದ ಕಾರಣ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದೇ ಸಮಸ್ಯೆಯಾಗಿದೆ.

ಸರ್ಕಾರ ಬರಪೀಡಿತ ಪ್ರದೇಶ ಪಟ್ಟಿಯಿಂದ ಸಿಂಧನೂರು ತಾಲ್ಲೂಕಿನ ಹೆಸರು ಕೈಬಿಟ್ಟಿರುವುದು ಸರಿಯಲ್ಲ. ಬೆಳೆ ಸಮೀಕ್ಷೆ ಮಾಡುವಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಸ್ಥಳೀಯ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಸರ್ಕಾರ ನಿರ್ಲಕ್ಷ್ಯ ಮಾಡಿದೆ’ ಎಂದು ಕೆಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಂಧನೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆಯಿಂದ ರಾಜ್ಯ ಸರ್ಕಾರ ಕೈಬಿಟ್ಟಿರುವುದು ಎನ್‌ಡಿಆರ್‌ಎಫ್‌ನ ಕೆಲವು ಮಾನದಂಡಗಳು ಅಡ್ಡಿಯಾಗಿರಬಹುದು. ಜೂನ್ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಅನೇಕರು ಭತ್ತದ ಬದಲು ಸೂರ್ಯಕಾಂತಿ, ಹತ್ತಿ ಬೆಳೆದಿದ್ದಾರೆ. ನೀರಾವರಿ ಪ್ರದೇಶದ ಹೊರತಾಗಿಯೂ ಖುಷ್ಕಿ ಪ್ರದೇಶವಿದೆ. ಮಳೆ ಕೊರತೆಯಿಂದ ಬೆಳೆ ಕುಂಠಿತವಾಗಿದೆ. ಸರ್ಕಾರದ ನಿಯಮದಂತೆ ನಾವು ಕೆಲಸ ಮಾಡಬೇಕಿದೆ. ನ
ಜೀರ್ ಅಹ್ಮದ್ ನಾಗಲಾಪುರು, ಸಿಂಧನೂರಿನ ಕೃಷಿ ಅಧಿಕಾರಿ.
ಪಟ್ಟಿಯಲ್ಲಿ ಇಲ್ಲದ ಮಸ್ಕಿ: ಕಿಡಿ
ಮಸ್ಕಿ: ತಾಲ್ಲೂಕಿನಾದ್ಯಂತ ಮಳೆಯಾಗದ ಕಾರಣ ಬರಗಾಲ ಉಂಟಾಗಿದೆ. ಸರ್ಕಾರವು ಬಿಡುಗಡೆ ಮಾಡಿದ ಬರಗಾಲ ತಾಲ್ಲೂಕು ಪಟ್ಟಿಯಲ್ಲಿ ಮಸ್ಕಿ ತಾಲ್ಲೂಕು ಕೈಬಿಟ್ಟಿರುವುದು ಖಂಡನೀಯ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆರೋಪಿಸಿದ್ದಾರೆ. ಗುರುವಾರ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶೇಕಡಾ 70 ರಷ್ಟು ಬರಗಾಲ ತಾಲ್ಲೂಕಿನಲ್ಲಿ ಇದ್ದರೂ ಸಹ ಸ್ಥಳೀಯ ಶಾಸಕರು ಹಾಗೂ ತಾಲ್ಲೂಕು ಆಡಳಿತ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಸಾಧಾರಣ ಬರಗಾಲ ಪೀಡಿತ ಪಟ್ಟಿಯಲ್ಲಿ ಮಸ್ಕಿ ಸೇರಿಸಿ ಅನ್ಯಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT