ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | '3ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಏಮ್ಸ್ ಹೋರಾಟ'

Published 13 ಮೇ 2024, 15:46 IST
Last Updated 13 ಮೇ 2024, 15:46 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಜಿಲ್ಲೆಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೀಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಸೋಮವಾರ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿತು. 

ಹೋರಾಟ ಬೆಂಬಲಿಸಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಪಂಪಣ್ಣ ನೆರವಿ ಮಾತನಾಡಿ, ‘ರಾಯಚೂರಿಗೆ ಏಮ್ಸ್ ನೀಡುವಂತೆ ಈಗಾಗಲೇ ಎರಡು ವರ್ಷದಿಂದ ಸುದೀರ್ಘ ಹೋರಾಟ ನಡೆಸಲಾಗಿದೆ. ಇನ್ನೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಇನ್ನೂ ಮುಂದಾದರೂ ಸರ್ಕಾರ ಏಮ್ಸ್ ಮಂಜೂರು ಮಾಡದಿದ್ದರೆ ದೆಹಲಿಯಲ್ಲಿ ನಮ್ಮ ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಇಂದಿಗೆ ಹೋರಾಟ ಶುರುವಾಗಿ 732ನೇ ಪೂರೈಸಿದೆ. ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿಯಿಂದ ವಂಚಿತಗೊಂಡ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕು. ಕೇಂದ್ರ ಸರ್ಕಾರ ನಮ್ಮ ಸಹನೆ ಪರೀಕ್ಷಿಸುವುದನ್ನು ಬಿಟ್ಟು ಹೋರಾಟವನ್ನು ಗೌರವಿಸಬೇಕು ಎಂದರು.

ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಗಣಸಿ ಕೂಡಲೇ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದಾಗಿ ಘೋಷಣೆ ಮಾಡಿ ಅಧಿಸೂಚನೆ ಪ್ರಕಟಿಸಬೇಕು. ಇಲ್ಲದಿದ್ದರೆ ದೆಹಲಿಗೆ ಬಂದು ಅಲ್ಲಿ ನಮ್ಮ ಹೋರಾಟವನ್ನು ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಬಲ್ ಇಂಜಿನ್ ಸರ್ಕಾರ ಇದ್ದಾಗಲೇ ಹೋರಾಟ ನಡೆಸಿದ್ದೆವು. ಆದರೂ ನಮ್ಮ ಬೇಡಿಕೆ ಈಡೇರಲಿಲ್ಲ. ಎರಡು ವರ್ಷವಾದರೂ ನಮ್ಮ ಹೋರಾಟದ ಬಲ ಕುಗ್ಗಿಲ್ಲ. ಜೂನ್ 4ರ ಫಲಿತಾಂಶದ ಬಳಿಕ ಹೋರಾಟದ ಸ್ವರೂಪ ತೀವ್ರಗೊಳಿಸಲಾಗುವುದು. ಇನ್ನಾದರೂ ಏಮ್ಸ್ ಹೋರಾಟಕ್ಕೆ ಎಲ್ಲ ಜನಪ್ರತಿನಿಧಿಗಳು ಹಳೆಯದನ್ನು ಮರೆತು ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಹೋರಾಟ ಸಮಿತಿ ಸಂಚಾಲಕ ಅಶೋಕ ಜೈನ್ ಮನವಿ ಮಾಡಿದ್ದಾರೆ.

ಹೋರಾಟದ ಸಂಚಾಲಕರಾದ ಬಸವರಾಜ ಕಳಸ, ಮುಖಂಡರಾದ ಕಾಮರಾಜ ಪಾಟೀಲ, ಡಾ.ಎಸ್.ಎಸ್.ಪಾಟೀಲ, ವಕೀಲ ಎಸ್ ಮಾರೆಪ್ಪ, ರಮೇಶ್ ರಾವ್ ಕಲ್ಲೂರಕರ್, ಗುರುರಾಜ ಕುಲಕರ್ಣಿ, ಜಗದೀಶ ಪುರತಿಪ್ಲಿ, ನರಸಪ್ಪ ಬಾಡಿಯಾಳ, ಮಹಾವೀರ, ಬಸವರಾಜ, ಪ್ರಭು ನಾಯಕ, ಬಿ.ಶ್ಯಾಮ್, ವೀರಭದ್ರ ಗೌಡ, ರೂಪ ಶ್ರೀನಿವಾಸ್ ನಾಯಕ, ಶ್ರೀನಿವಾಸ್ ಕಲವಲದೊಡ್ಡಿ, ವೀರಭದ್ರಯ್ಯ ಸ್ವಾಮಿ  ಪಾಲ್ಗೊಂಡಿದ್ದರು.

ಸಾಮಗ್ರಿಗಳ ಕಳವು: ಹೋರಾಟಗಾರರು ಕೆಲವೊಮ್ಮೆ ಹಗಲಿರುಳೆನ್ನದೆ ಹೋರಾಟ ಮಾಡುತ್ತಿದ್ದಾರೆ. ಹೋರಾಟದ ಟೆಂಟ್‍ನಲ್ಲಿ ಅಗತ್ಯ ವಸ್ತುಗಳನ್ನು ಶೇಖರಿಸಿಡಲಾಗುತ್ತಿದೆ. ಆದರೆ ಕಳೆದ ಕೆಲ ದಿನಗಳಿಂದ ಇಲ್ಲಿಯೂ ಸಾಮಗ್ರಿಗಳ ಕಳುವಾಗಿದೆ. ಬೆಡ್‍ಗಳು ವಾಟರ್ ಕ್ಯಾನ್‍ಗಳು ಕಳುವಾಗಿದ್ದರೆ ಈಚೆಗೆ ಮೈಕ್‍ಗೆ ಬಳಸುವ ಅಂದಾಜು ₹20 ಸಾವಿರ ಮೌಲ್ಯದ ಎಂಪ್ಲಿಫಾಯರ್ ಕೂಡ ಕಳುವಾಗಿದೆ. ಕಬ್ಬಿಣದ ಸರಪಳಿಯಿಂದ ಕಟ್ಟಿದ್ದರೂ ಕಳ್ಳರು ಮುರಿದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪಶ್ಚಿಮ ಠಾಣೆಗೆ ಮೇ 1ರಂದೇ ದೂರು ನೀಡಿದ್ದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT