ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು | ಉದ್ಯಾನದಲ್ಲಿ ಕಿಡಿಗೇಡಿಗಳ ಉಪಟಳ: ಬೇಸತ್ತ ನಾಗರಿಕರು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಿರ್ಮಾಣ
Published 5 ಜೂನ್ 2024, 16:16 IST
Last Updated 5 ಜೂನ್ 2024, 16:16 IST
ಅಕ್ಷರ ಗಾತ್ರ

ಲಿಂಗಸುಗೂರು: ಪಟ್ಟಣದ ಸಾರ್ವಜನಿಕ ಉದ್ಯಾನ ಕಿಡಿಗೇಡಿಗಳ ತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಕಿಡಿಗೇಡಿಗಳ ಉಪಟಳದಿಂದ ಬೇಸತ್ತ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹6.43 ಕೋಟಿ ಅನುದಾನದಡಿ ಉದ್ಯಾನ ನಿರ್ಮಿಸಲಾಗಿತ್ತು. ಇದು ಕಲ್ಯಾಣ ಕರ್ನಾಟಕ ಭಾಗದ ಹೈಟೆಕ್‍ ಉದ್ಯಾನ ಎಂಬ ಕೀರ್ತಿ ಪಡೆದಿದೆ. ಕೆರೆಗುಂಟ ಗ್ರಿಲ್‍ ಅಳವಡಿಕೆ, 960 ಮೀಟರ್ ಉದ್ದನೆಯ ಪಾದಚಾರಿ ಮಾರ್ಗ, ಲೈಟಿಂಗ್‍, ವೈವಿಧ್ಯಮಯ ಹೂ, ಬಳ್ಳಿ, ಗಿಡ–ಮರಗಳು, ಹಚ್ಚ ಹಸಿರಿನ ಲಾನ್‍ ಉದ್ಯಾನದ ಸೌಂದರ್ಯಕ್ಕೆ ಮೆರುಗು ನೀಡುವಂತಿವೆ.

2023ರಲ್ಲಿ ಲೋಕಾರ್ಪಣೆಗೊಂಡ ಉದ್ಯಾನ, ಮೇಲುಸ್ತುವಾರಿ ಮತ್ತು ನಿರ್ವಹಣೆ ಕೊರತೆ ಕಾರಣಕ್ಕೆ ಹಾಳಾಗುತ್ತಿದೆ.  ಅಲ್ಲಲ್ಲಿ ಗಿಡ–ಬಳ್ಳಿಗಳು ಒಣಗುತ್ತಿವೆ. ಕೆರೆ ದಂಡೆಯಲ್ಲಿ ಮುಳ‍್ಳು–ಕಂಟಿ ಬೆಳೆದು ವಾಯುವಿಹಾರಕ್ಕೆ ಅಡ್ಡಿಯಾಗಿವೆ. ಈ ಮಧ್ಯೆ ಕೆಲ ಯುವಕರು ಬೈಸಿಕಲ್‍, ಬೈಕ್‍, ಕುದುರೆ ಓಡಿಸುವುದು, ಎಲ್ಲೆಂದರಲ್ಲಿ ಮದ್ಯಪಾನ ಮಾಡಲು ಕುಳಿತುಕೊಂಡು ಅಸಡ್ಡೆ ಪ್ರದರ್ಶನ ಮಾಡುತ್ತಿದ್ದಾರೆ.

ಸಮಸ್ಯೆ ಕುರಿತು ಪುರಸಭೆ, ಪೊಲೀಸ್‍, ಕಂದಾಯ ಇಲಾಖೆ ಅಧಿಕಾರಿಗಳ ಗಮನ ಸೆಳೆದರು ಪ್ರಯೋಜನವಾಗಿಲ್ಲ ಎಂಬುದು ಸಾಮೂಹಿಕ ಆರೋಪ.

‘ಕೋಟ್ಯಂತರ ಹಣ ಖರ್ಚು ಮಾಡಿ ಹೈಟೆಕ್‍ ಮಾದರಿ ಉದ್ಯಾನ ನಿರ್ಮಿಸಲಾಗಿದೆ. ಕಣ್ಮನ ಸೆಳೆಯುವ ಉದ್ಯಾನ ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವಲ್ಲಿ ತಾಲ್ಲೂಕು ಆಡಳಿತ ನಿರ್ಲಿಪ್ತ ಧೋರಣೆ ಅನುಸರಿಸುತ್ತಿದೆ. ಕಿಡಿಗೇಡಿಗಳ ಉಪಟಳ, ಅಟ್ಟಹಾಸಕ್ಕೆ ಬೇಸತ್ತ ಬಹುತೇಕರು ಉದ್ಯಾನದತ್ತ ಸುಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಮುತುವರ್ಜಿ ವಹಿಸಬೇಕು’ ಎಂದು ಸಮಾಜ ಸೇವಕ ಚೆನ್ನಬಸವ ವಿಠಲಾಪುರ ಮನವಿ ಮಾಡಿದ್ದಾರೆ.

ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಮಾತನಾಡಿ, ‘ತಮಗೆ ಕ್ಷೇತ್ರದ ಜನತೆ ಆಶೀರ್ವದಿಸಿ ಅಧಿಕಾರ ನೀಡಿದಾಗ ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೈಟೆಕ್‍ ಉದ್ಯಾನ ನಿರ್ಮಾಣಕ್ಕೆ ಶ್ರಮಿಸಿದ್ದೆ. ಆಡಳಿತ ವ್ಯವಸ್ಥೆ ಉಳಿಸಿ, ಸಂರಕ್ಷಿಸಿಕೊಂಡು ಹೋಗುವಲ್ಲಿ ವಿಫಲವಾಗಿದೆ. ಕೆಲಸಗಾರನನ್ನು ಕಳೆದುಕೊಂಡ ಜನತೆ ಈಗ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಕಾದು ನೋಡಿ ಬೀದಿಗಿಳಿಯುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT