ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿ ಅನುಷ್ಠಾನಗೊಳಿಸಿದ ಶ್ರೇಯಸ್ಸು ಕಾಂಗ್ರೆಸ್‌ ಸರ್ಕಾರಕ್ಕೆ: ಸಚಿವ ಬೋಸರಾಜು

ಫಲಾನುಭವಿಗಳ ಸಮಾವೇಶ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಇಂದು
Published 13 ಮಾರ್ಚ್ 2024, 16:22 IST
Last Updated 13 ಮಾರ್ಚ್ 2024, 16:22 IST
ಅಕ್ಷರ ಗಾತ್ರ

ರಾಯಚೂರು: ‘ದೇಶದಲ್ಲೇ ಮೊದಲ ಬಾರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಶ್ರೇಯಸ್ಸು ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲುತ್ತದೆ. ವಿರೋಧ ಪಕ್ಷಗಳ ಅಪಪ್ರಚಾರದ ಮಧ್ಯೆಯೂ ಜನರಿಗೆ ಯೋಜನೆಗಳ ಲಾಭ ತಲುಪಿಸಲಾಗಿದೆ’ ಎಂದು ಸಣ್ಣ ನೀರಾವರಿ ಹಾಗೂ‌ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.

‘ಐದು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ರಾಯಚೂರು ಜಿಲ್ಲೆಯ ಫಲಾನುಭವಿಗಳಿಗೆ ಒಂಬತ್ತು ತಿಂಗಳ ಅವಧಿಯಲ್ಲಿ ₹ 352.44 ಕೋಟಿಗೂ ಅಧಿಕ ಮೊತ್ತವನ್ನು ಪಾವತಿಸಲಾಗಿದೆ. ಸಮರ್ಪಕ ಜಾಗೃತಿ ಮೂಡಿಸುವ ದಿಸೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮಾ.14ರಂದು ಸಮಾವೇಶ ಆಯೋಜಿಸಲಾಗಿದೆ’ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಬಿಜೆಪಿ ಮುಖಂಡರು ಕಾಂಗ್ರೆಸ್‌ ಸುಳ್ಳು ಹೇಳುತ್ತಿದೆ ಎಂದು ಅಪಪ್ರಚಾರ ಮಾಡಿದರು. ಆದರೆ ಕಾಂಗ್ರೆಸ್‌ ವಿರೋಧ ಪಕ್ಷಗಳ ಟೀಕೆ ಟಿಪ್ಪಣೆಗಳಿಗೆ ತಲೆ ಕಡೆಸಿಕೊಳ್ಳದೇ ನುಡಿದಂತೆ ನಡೆದು ದಾಖಲೆ ಸೃಷ್ಟಿಸಿದೆ‘ ಎಂದರು.

‘2023ರ ಜೂನ್‌ 23ರಿಂದ ಗೃಹ ಜ್ಯೋತಿ ಆರಂಭವಾಗಿದ್ದು, ಜಿಲ್ಲೆಯ ಫಲಾನುಭವಿಗಳಿಗೆ ₹90.97 ಕೋಟಿ ಮೊತ್ತದ ವಿದ್ಯುತ್‌ ರಿಯಾಯಿತಿ ಒದಗಿಸಲಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ 324.73 ಲಕ್ಷ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಸಾರಿಗೆ ಸಂಸ್ಥೆಗೆ ₹ 118 ಕೋಟಿ ಪಾವತಿ ಮಾಡಲಾಗಿದೆ‘ ಎಂದು ಮಾಹಿತಿ ನೀಡಿದರು.

‘ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿಕೊಡಲು ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಅಕ್ಕಿಕೊಡಲು ನಿರಾಕರಿಸಿತು. ಹೀಗಾಗಿ 5 ಕೆ.ಜಿ ಅಕ್ಕಿ ಹಾಗೂ ಇನ್ನುಳಿದ 5 ಕೆ.ಜಿ ಅಕ್ಕಿ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಜಿಲ್ಲೆಯ 22.54 ಲಕ್ಷಕ್ಕೂ ಅಧಿಕ ಫಲಾನುಭವಿಗಳು ₹ 450.97 ಕೋಟಿ ಮೊತ್ತದ ಲಾಭ ಪಡೆದಿದ್ದಾರೆ’ ಎಂದು ಹೇಳಿದರು.

‘ರಾಯಚೂರು ಜಿಲ್ಲೆಯಲ್ಲಿ ಯುವನಧಿ ಯೋಜನೆ ಅಡಿಯಲ್ಲಿ ಪದವಿ ಹಾಗೂ ಡಿಪ್ಲೊಮಾ ಪದವಿ ಪಡೆದ 2325 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಜನವರಿಯಿಂದ ₹ 1.34 ಕೋಟಿ ಪಾವತಿಸಲಾಗಿದೆ. ಮಧ್ಯವರ್ತಿಗಳು ಇಲ್ಲದೇ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಗ್ಯಾರಂಟಿ ಯೋಜನೆಗಳ ಸಮಪರ್ಕ ಅನುಷ್ಠಾನಕ್ಕೆ ಪ್ರತಿವಾರ ಸಭೆ ನಡೆಸಲಾಗುತ್ತಿದೆ. ತಾಂತ್ರಿಕ ಸಮಸ್ಯೆಗಳಿದ್ದರೂ ಅವುಗಳ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ‘ ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ:

ಕೃಷ್ಣಾ ನದಿಯಿಂದ ಗಣೆಕಲ್  ಕೆರೆಗೆ ನೀರುಣಿಸುವ ಅಪ್ರಾಳ ಏತ ನೀರಾವರಿ ಯೋಜನೆ ಉದ್ಘಾಟನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ನಗರದ ಹೊರ ವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಮಾ.14ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಯೋಜನೆಗಳ‌ ಫಲಾನುಭವಿಗಳ ಸಮಾವೇಶದ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ‌ ಉಪ ಮುಖ್ಯಮಂತ್ರಿ‌ ಡಿ.ಕೆ. ಶಿವಕುಮಾರ ಹೊಸ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವ ಬೋಸರಾಜು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ, ಸೇರಿ ಕೆಲ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಕ್ಕೆ ಈಗಾಗಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಸಿಲು ಇರುವ ಕಾರಣ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದೆ ಎಂದು ತಿಳಿಸಿದರು.

ಕೆಕೆಆರ್‌ಡಿಬಿ ಅಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒಟ್ಟು ₹ 35 ಕೋಟಿ ಅನುಮಾನ ಮಂಜೂರಾಗಿದೆ. ವಿಮಾನ ನಿಲ್ದಾಣ ಅಭಿವೃದ್ಧಿಗೆ ₹ 16 ಕೋಟಿ ಬಿಡುಗಡೆ ಮಾಡಲಾಗಿದೆ. ಮನ್ಸಲಾಪುರ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ₹ 25 ಕೋಟಿ ಕೊಡಲಾಗಿದೆ. ನಗರದಲ್ಲಿ ಸಿಸಿಟಿವಿ ಅಳವಡಿಕೆಗೆ ₹ 1 ಕೋಟಿ ಒದಗಿಸಲಾಗಿದೆ. ಹೊಸ ಡಿಸಿ ಕಚೇರಿ ಲ್ಯಾಂಡ್‌ಸ್ಕೇಪ್‌ಗೆ ಪ್ರತ್ಯೇಕವಾಗಿ ₹ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

ಶಾಸಕ ಹಂಪಯ್ಯ ನಾಯಕ, ರವಿ ಪಾಟೀಲ, ಬಸವರಾಜ ರೆಡ್ಡಿ, ಶಾಂತಪ್ಪ, ಶಾಲಂ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT