ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆಗೆ ಬೆಳೆ ಹಾನಿ: ರೈತರ ಸಂಕಷ್ಟ

ಮುದಗಲ್‌: 19,489 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆ ಬಿತ್ತನೆಯ ಗುರಿ
Last Updated 20 ಅಕ್ಟೋಬರ್ 2022, 6:33 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಬೆಳೆಗಳಿಗೆ ಶೀತ ಬಾಧೆ ಆವರಿಸಿದರೆ, ಹಿಂಗಾರು ಬಿತ್ತನೆಗೆ ಬಿಡುವು ಇಲ್ಲದರಿಂದ ರೈತರಲ್ಲಿ ಆತಂಕ ಎದುರಾಗಿದೆ.

ಸತತ ಮಳೆಯಿಂದಾಗಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ. ತೊಗರಿ ಬೆಳೆಗಳ ನಿರ್ವಹಣೆಗೆ ತೊಂದರೆಯಾಗಿದೆ. ಗಿಡಗಳಿಗೆ ಔಷಧ ಸಿಂಪಡಣೆಗೆ ಆಳುಗಳ ಕೂಲಿ ವೆಚ್ಚವೂ ಏರಿದೆ. ಹೆಚ್ಚು ವೇತನ ನೀಡಿದರೂ ಆಳುಗಳು ಸಿಗುತ್ತಿಲ್ಲ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ
ತೆಂಗು ಫಸಲಿನಲ್ಲಿಯೂ ಕಾಯಿ ಕಟ್ಟದಿರುವ ಸಮಸ್ಯೆ ಕಾಡುತ್ತದೆ ಎನ್ನುತ್ತಾರೆ ರೈತರು.

ಅಕ್ಟೋಬರ್ ತಿಂಗಳು ಆರಂಭ ದಿಂದಲೇ ಹಿಂಗಾರು ಬಿತ್ತನೆಗೆ ರೈತರು ಮುಂದಾಗಿದ್ದರು. ಆದರೆ ನಿರಂತರ ಮಳೆಯಿಂದಾಗಿ ಬಿತ್ತನೆ ಕಾರ್ಯ ಮುಂದೂಡಿದ್ದಾರೆ. ಇದರಿಂದಾಗಿ ಬೆಳೆಯ ಫಸಲು ಸಹ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

ಕಡಲೆ, ಜೋಳ, ಕುಸುಬೆ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ, ಪ್ರಮುಖ ಹಿಂಗಾರು ಬೆಳೆಗಳು. 19,489 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದೆ. ಕೃಷಿ ಇಲಾಖೆ 1,741 ಕ್ವಿಂಟಲ್ ಕಡಲೆ ಬೀಜವನ್ನು ಈಗಾಗಲೇ ವಿತರಿಸುವ ಕಾರ್ಯ ಆರಂಭಿಸಿದೆ. ಹೊಲದಲ್ಲಿ ನೀರು ತುಂಬಿದ್ದು, ಭೂಮಿ ಸಿದ್ಧತೆಗೆ ಹಿನ್ನಡೆಯಾಗಿ ಪರಿಣಮಿಸಿದೆ. ಹೊಲಗಳಲ್ಲಿ ಹಚ್ಚಿದ ಮೆಣಸಿನ ಕಾಯಿ ಸಸಿಗಳು ಹಾಳಾಗಿವೆ.

ಜಾನುವಾರುಗಳಿಗೆ ತೊಂದರೆ: ಸತತ ಮಳೆಗೆ ಜಾನುವಾರಗಳು ತೊಂದರೆ ಅನುಭವಿಸುತ್ತಿವೆ. ಕುರಿಗಳ ಕಾಲು ಕುಂಟು ಬಿದ್ದಿವೆ. ಇದು ಅಲ್ಲದೆ ಇನ್ನಿತರ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಕುರಿಗಾರರು ಔಷಧಗಳು ಹಾಕಿ ಸುಸ್ತು ಆಗಿದ್ದಾರೆ. ನಿರಂತರ ಮಳೆಯಿಂದ ಜಾನುವಾರುಗಳು ಮೈಯಲು ತೊಂದರೆಯಾಗುತ್ತಿದೆ.

ಭೂಮಿಯಲ್ಲಿದ್ದ ಅತಿಯಾದ ತೇವಾಂಶ ಕಡಿಮೆಯಾದ ನಂತರ ಬಿತ್ತನೆ ಕಾರ್ಯ ಆರಂಭಿಸಬೇಕು
ಎಂದು ಕಾಯುತ್ತಿದ್ದೇವೆ ಎಂದು ರೈತ ಬಾಲಪ್ಪ ತಿಳಿಸಿದರು.

ಸತತ ಮಳೆಯಿಂದ ಬೆಳೆ ಹಾನಿಗೆ ಒಳಪಟ್ಟ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಎಎಪಿ ಮುಖಂಡ ಕುಪ್ಪಣ್ಣ ಮಾಣಿಕ್ ಒತ್ತಾಯಿಸಿದರು.

ಹಿಂಗಾರು ಬಿತ್ತನೆಗೆ ಇನ್ನೂ 15 ದಿನ ಅವಕಾಶ‌‌ವಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲ. ಸಾಗುವಳಿ ಮಾಡಲು ಕೃಷಿಕರು ಕಡಲೆ, ಜೋಳ, ಕುಸುಬೆ, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜ ಖರೀದಿಸಿದ್ದಾರೆ ಎಂದು ಕೃಷಿ ಇಲಾಖೆಯ ಮುದಗಲ್ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಆಕಾಶ್ ದಾನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT