ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ರಾಜಕೀಯದಿಂದ ಪ್ರಜಾಪ್ರಭುತ್ವ ನಾಶ: ಸಚಿವ ಕೃಷ್ಣ ಬೈರೇಗೌಡ

ಸಂವಾದದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ
Published 4 ಮೇ 2024, 16:02 IST
Last Updated 4 ಮೇ 2024, 16:02 IST
ಅಕ್ಷರ ಗಾತ್ರ

ರಾಯಚೂರು: ‘ಬದುಕಿನ ವಿಷಯಗಳ ಮೇಲೆ ರಾಜಕೀಯ ನಡೆಯಬೇಕು. ಸತ್ಯ, ವಾಸ್ತವ ಸಂಗತಿಗಳನ್ನು ಮರೆಮಾಚಿ ಸುಳ್ಳುಗಳ ಮೇಲೆ ರಾಜಕೀಯ ನಡೆದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.‌

ಎದ್ದೇಳು ಕರ್ನಾಟಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ, ಬಡತನ, ಬೆಲೆ ಏರಿಕೆಯಿಂದ ಸಾಮಾನ್ಯ, ದುಡಿಯುವ ವರ್ಗ, ರೈತರ ಪರಿಸ್ಥಿತಿ ಗಂಭೀರವಾಗಿದೆ. ಬಡವರ ದುಡಿಮೆ ಪರೋಕ್ಷವಾಗಿ ಜಿಎಸ್‌ಟಿ ಮೂಲಕ ಕೆಲವೇ ಕೆಲವು ಶ್ರೀಮಂತರ ಜೇಬು ತಲುಪುತ್ತಿದೆ. ಬಡವ–ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದೆ. ರೈತರ ಸಾಲಮನ್ನಾ ಮಾಡದೇ ಉದ್ಯಮಿಗಳ ಸಾಲಮನ್ನಾ ಮಾಡಲಾಗಿದೆ’ ಎಂದು ತಿಳಿಸಿದರು.

‘ದೇಶದಲ್ಲಿಯೇ ಅತಿ ಹೆಚ್ಚು ಜಿಎಸ್‌ಟಿ ನೀಡುವುದರಲ್ಲಿ ಕರ್ನಾಟಕ ಮುಂದಿದೆ. ರಾಜ್ಯಕ್ಕೆ ಪ್ರತಿ ವರ್ಷ ₹32 ಸಾವಿರ ಕೋಟಿ ತೆರಿಗೆ ಖೋತಾ ಅಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ತೆರಿಗೆ ಪಾಲು ಸರಿಯಾಗಿ, ವೈಜ್ಞಾನಿಕವಾಗಿ ಹಂಚಿಕೆ ಮಾಡದೇ ಮಲತಾಯಿ ಧೋರಣೆ ಮಾಡುತ್ತಿದೆ. ಚಿನ್ನದ ಮೊಟ್ಟೆ ಇಡುವ ಕರ್ನಾಟಕ ರಾಜ್ಯ ಸರಿಯಾದ ಪಾಲು ಕೇಳಿದರೆ ಬಿಜೆಪಿ ದೇಶ ಒಡೆಯುವವರು, ಭಿಕ್ಷುಕರು ಎಂದು ಹೀಯಾಳಿಸುತ್ತದೆ. ನಮ್ಮ ರಾಜ್ಯದ 26 ಜನ ಬಿಜೆಪಿ ಸಂಸದರು ತುಟಿ ಪಿಟಕ್ ಎನ್ನುವುದಿಲ್ಲ’ ಎಂದು ದೂರಿದರು.

‘ಅನುದಾನ ಹಂಚಿಕೆ, ಬರ ಪರಿಹಾರ ನೀಡುವಲ್ಲಿ ಕೇಂದ್ರ ತಾರತಮ್ಯ ಮಾಡಿದೆ. ಕೇಂದ್ರದ ಜೊತೆ ಹೋರಾಟ ಮಾಡಿ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆದಿದ್ದು ಇದೇ ಮೊದಲು. ಭವಿಷ್ಯದಲ್ಲಿ ಕರ್ನಾಟಕ ಮಾದರಿಯಾಗಲಿದೆ’ ಎಂದು ಹೇಳಿದರು.

‘ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಲೆ ಕಾಯ್ದೆ (ಎಂಎಸ್‌ಪಿ) ಜಾರಿ ಮಾಡುವುದಾಗಿ ಅಧಿಕಾರಕ್ಕೆ ಬಂದು ಆನಂತರ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ 10 ವರ್ಷದ ಆಡಳಿತ ಅವಧಿಯಲ್ಲಿ ಎಂಎಸ್‌ಪಿ ಶೇ 82ರಷ್ಟು ಹೆಚ್ಚಾಗಿದೆ. ಹಿಂದಿನ ಯುಪಿಎ 8 ವರ್ಷಗಳ ಅವಧಿಯಲ್ಲಿ ಶೇ 162ರಷ್ಟು ಬೆಳವಣಿಗೆಯಾಗಿತ್ತು. ಎಂಎಸ್‌ಪಿ ಜಾರಿಗೆ ಹೋರಾಟ ಮಾಡಿದರೆ ರೈತರನ್ನು ಖಲಿಸ್ತಾನಿಗಳೆಂದು ಅವಮಾನಿಸುತ್ತಾರೆ’ ಎಂದು ಕಿಡಿಕಾರಿದರು.

‘ದಲಿತ, ಪ್ರಗತಿಪರ ಹಾಗೂ ರೈತ ಮುಖಂಡರು ಸಚಿವರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT