ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ವಿದ್ಯುತ್ ಗ್ರಾಹಕರಿಗೆ ಗೃಹಜ್ಯೋತಿಯ ‘ಬಿಸಿ’

Published 18 ಮೇ 2024, 7:40 IST
Last Updated 18 ಮೇ 2024, 7:40 IST
ಅಕ್ಷರ ಗಾತ್ರ

ರಾಯಚೂರು: ಎರಡು ತಿಂಗಳ ಅವಧಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಜಿಲ್ಲೆಯ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಏತನ್ಮಧ್ಯೆಯೇ ಧಗೆ ಹಾಗೂ ಸೆಕೆಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಫ್ಯಾನ್‌, ಕೂಲರ್‌, ಎಸಿ ಹಾಗೂ ರೆಫ್ರಿಜಿರೇಟರ್ ಅತಿಯಾಗಿ ಬಳಸಿದ ಗೃಹಜ್ಯೋತಿಯ ಫಲಾನುಭವಿಗಳಿಗೆ ಜೆಸ್ಕಾಂ ಬಿಲ್‌ ‘ಶಾಕ್‌’ ನೀಡಿದೆ.

ಜಿಲ್ಲೆಯಲ್ಲಿ ರಾಯಚೂರು ನಗರ, ರಾಯಚೂರು ಗ್ರಾಮೀಣ ಹಾಗೂ ಸಿಂಧನೂರು ಸೇರಿ ಮೂರು ಉಪ ವಿಭಾಗಗಳಲ್ಲಿ ಜೆಸ್ಕಾಂನ ಕಾರ್ಯನಿರ್ವಹಣೆ ಹಂಚಿ ಹೋಗಿದೆ. ಗೃಹಜ್ಯೋತಿ ಯೋಜನೆಯ ಹೆಚ್ಚು ಲಾಭ ಪಡೆದವರೇ ನಗರ, ಪಟ್ಟಣದ ಜನರು. ಇದೀಗ ಹೆಚ್ಚು ವಿದ್ಯುತ್‌ ಬಳಕೆ ಮಾಡಿ ಯೋಜನೆಯ ಲಾಭದ ಮಿತಿ ಕಳೆದುಕೊಂಡವರ ಸಂಖ್ಯೆಯೂ ನಗರದಲ್ಲೇ ಇದೆ.

ರಾಯಚೂರು ಗ್ರಾಮೀಣ ಉಪ ವಿಭಾಗ ರಾಯಚೂರು ತಾಲ್ಲೂಕಿನ ಯರಗೇರಾ, ಶಕ್ತಿನಗರ, ಮಾನ್ವಿ, ಸಿರವಾರ, ಕವಿತಾಳ ಹಾಗೂ ದೇವದುರ್ಗ ತಾಲ್ಲೂಕನ್ನು ಒಳಗೊಂಡಿದೆ. 1,45,989 ಗ್ರಾಹಕರಿದ್ದು, ಆ ಪೈಕಿ 1,09,957 ಗ್ರಾಹಕರು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಮಾರ್ಚ್‌ನಲ್ಲಿ 1629 ಗ್ರಾಹಕರು 200 ಯೂನಿಟ್‌ಕ್ಕಿಂತ ಅಧಿಕ ವಿದ್ಯುತ್ ಬಳಸಿ ಯೋಜನೆಯಿಂದ ಹೊರ ಬಂದಿದ್ದರೆ, ಏಪ್ರಿಲ್‌ನಲ್ಲಿ ಒಟ್ಟು 3,365 ಗ್ರಾಹಕರು ಯೋಜನೆಯಿಂದ ಹೊರ ಬಿದ್ದಿದ್ದಾರೆ.

ರಾಯಚೂರು ನಗರ ವಿಭಾಗದಲ್ಲಿ ಮಾರ್ಚ್‌ನಲ್ಲಿ 48,217 ಹಾಗೂ ಏಪ್ರಿಲ್‌ನಲ್ಲಿ 49,469 ಗ್ರಾಹಕರು ಗೃಹಜ್ಯೋತಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಸಂಖ್ಯೆ 97,686ಕ್ಕೆ ಏರಿದೆ. ಬೇಸಿಗೆ ಧಗೆಯಲ್ಲಿ ಹೆಚ್ಚು ವಿದ್ಯುತ್‌ ಬಳಕೆ ಮಾಡಿರುವ ಕಾರಣ ಶೇ 15ರಿಂದ 20ರಷ್ಟು ಗ್ರಾಹಕರು ಯೋಜನೆಯ ಲಾಭ ಪಡೆದುಕೊಳ್ಳುವ ಅರ್ಹತೆ ಕಳೆದುಕೊಂಡಿದ್ದಾರೆ.

ಬೇಸಿಗೆ ಆರಂಭವಾದ ನಂತರ ಫ್ಯಾನ್‌, ಕೂಲರ್‌, ಎಸಿ ನಿರಂತರವಾಗಿ ಆನ್‌ ಇರುವ ಕಾರಣ ವಿದ್ಯುತ್ ಬಳಕೆ ಹೆಚ್ಚಾಗಿದೆ. ಹೀಗಾಗಿ 200 ಯೂನಿಟ್‌ ವಿದ್ಯುತ್ ಬಳಸಿ ಯೋಜನೆಯಿಂದ ಸಹಜವಾಗಿಯೇ ಸ್ಕಿಪ್‌ ಆಗಿದ್ದಾರೆ ಎಂದು ಜೆಸ್ಕಾಂ ರಾಯಚೂರು ನಗರ ಉಪ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಸಿಂಧನೂರು ಜೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 67,575 ಗ್ರಾಹಕರು ಇದ್ದಾರೆ. ಆ ಪೈಕಿ 59,478 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಏಪ್ರಿಲ್‌ನಲ್ಲಿ 200 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಬಳಸಿ 8099 ಗ್ರಾಹಕರು ಯೋಜನೆಯ ಲಾಭ ಪಡೆದುಕೊಳ್ಳುವ ಅರ್ಹತೆ ಕಳೆದುಕೊಂಡಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೊಳಿಸಿದ ಗೃಹಜ್ಯೋತಿ ಯೋಜನೆಯ ಪೂರ್ಣ ಲಾಭ ಪಡೆದಿದ್ದೇವೆ. ಬಿಸಿಲಿನ ಧಗೆಯಿಂದಾಗಿ ಫ್ಯಾನ್‌ ಹಾಗೂ ಕೂಲರ್‌ ಹೆಚ್ಚು ಬಳಸಿದ ಕಾರಣ ಸಹಜವಾಗಿಯೇ ಯೂನಿಟ್‌ ಬಳಕೆ ಹೆಚ್ಚಾಗಿದೆ. ಉಚಿತ ವಿದ್ಯುತ್‌ ಪಡೆಯುವ ಮಿತಿಯಿಂದ ಹೊರ ಬಿದ್ದಿರುವುದು ವಿದ್ಯುತ್‌ ಬಿಲ್‌ ಕೈಸೇರಿದಾಗಲೇ ಗೊತ್ತಾಗಿ ಶಾಕ್‌ ಆಗಿದೆ’ ಎಂದು ಖಾಸಗಿ ನೌಕರ ಕೊಟ್ರಪ್ಪ ಹೇಳಿದರು.

ಯೋಜನೆಯಲ್ಲಿ ಒಬ್ಬ ಗ್ರಾಹಕನಿಗೆ 200 ಯೂನಿಟ್‌ ವಿದ್ಯುತ್ ಬಳಸಲು ಅವಕಾಶ ಇದೆ. ಹಿಂದಿನ ವರ್ಷ ಬಳಸಿದ ಯೂನಿಟ್‌ಗಳ ಸರಾಸರಿ ಆಧರಿಸಿ ಕೆಲವರಿಗೆ ಇಂತಿಷ್ಟು ಯೂನಿಟ್‌ಗಳನ್ನು ನಿಗದಿಪಡಿಸುವ ಜತೆಗೆ ಅದರ ಮೇಲೆ 10 ಯೂನಿಟ್‌ ಹೆಚ್ಚುವರಿ ಬಳಸಲು ಅವಕಾಶ ನೀಡಲಾಗಿದೆ. ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಅಧಿಕ ವಿದ್ಯುತ್‌ ಬಳಸಿ ಅನೇಕರು ಗರಿಷ್ಠ ಯೂನಿಟ್‌ ಬಳಕೆ ಮಿತಿಯ ಅರ್ಹತೆ ಕಳೆದುಕೊಂಡಿದ್ದಾರೆ. ಮೇನಲ್ಲಿ ಅಧಿಕ ಪ್ರಮಾಣದಲ್ಲಿ ಬಳಸಿರುವವರಿಗೆ ಜೂನ್‌ನಲ್ಲಿ ಕೈಸೇರಲಿರುವ ಬಿಲ್‌ ಜೊತೆ ಆಘಾತ ಕಾದಿದೆ.

‘ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಎರಡು ತಿಂಗಳ ಅವಧಿಯಲ್ಲಿ ನಾವೇ ಅಧಿಕ ಪ್ರಮಾಣದಲ್ಲಿ ವಿದ್ಯುತ್‌ ಬಳಕೆ ಮಾಡಿದ್ದೇವೆ. ಬಳಕೆ ಮೀತಿ ದಾಟಿರುವ ಕಾರಣ ಬಿಲ್‌ ಪಾವತಿಸುವುದು ಅನಿವಾರ್ಯವಾಗಿದೆ’ ಎಂದು ಡ್ಯಾಡಿ ಕಾಲೊನಿ ನಿವಾಸಿ ಚಂದ್ರಶೇಖರ ತಿಳಿಸಿದರು. ‘ಬೇಸಿಗೆಯಲ್ಲಿ ಮೂರು ತಿಂಗಳು ಬಿಲ್ ಕಟ್ಟಿದರೂ ಉಳಿದ 9 ತಿಂಗಳ ಅವಧಿಯಲ್ಲಿ ಯೋಜನೆಯ ಲಾಭ ಪಡೆಯಲು ಅವಕಾಶ ಇದೆ ಎನ್ನುವುದು ಸಮಾಧಾನದ ಸಂಗತಿ’ ಎಂದು ಪ್ರೇಮಲತಾ ರೆಡ್ಡಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT