ಲಿಂಗಸುಗೂರು: ತಾಲ್ಲೂಕಿನ ಐತಿಹಾಸಿಕ ಪುಣ್ಯ ಕ್ಷೇತ್ರಗಳ ಪೈಕಿ ಒಂದಾದ ಯರಡೋಣಿ ರಾಮತೀರ್ಥ ಕುಂಡ ಮತ್ತು ದೇವಸ್ಥಾನ ಅಳಿವಿನಂಚಿಗೆ ತಲುಪಿದೆ.
ಅಯೋಧ್ಯೆ ಮಂದಿರಕ್ಕೆ ನೀಡಿದ ಮಹತ್ವ ರಾಮನ ನಂಟು ಹೊಂದಿದ ಯರಡೋಣಿ ರಾಮತೀರ್ಥಕ್ಕೂ ಕಲ್ಪಿಸಬೇಕು ಎಂಬುದು ಈ ಭಾಗದ ಭಕ್ತರ ಆಶಯ.
ವನವಾಸ ಸಂದರ್ಭದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣನೊಂದಿಗೆ ಮಂದಾದ್ರಗಿರಿ ಅರಣ್ಯ ಪ್ರದೇಶದಿಂದ ಹೊರಡುವ ವೇಳೆ ಯರಡೋಣಿ ಬಳಿಯ ಈಗಿನ ರಾಮತೀರ್ಥದ ಬಳಿ ತಂಗಿದ್ದರು. ಶ್ರೀರಾಮ ಕಲ್ಲುಬಂಡಿಗೆ ಬಿಲ್ಲಿನಿಂದ ಬಾಣ ಬಿಟ್ಟು ಬಂದ ನೀರಿನಿಂದ ಬಾಯಾರಿಕೆ ನೀಗಿಸಿಕೊಂಡಿದ್ದರು ಎಂಬುದು ಇಲ್ಲಿನ ಪೌರಾಣಿಕ ಕಥೆ.
ಮಂದಾದ್ರಗಿರಿ ತಪ್ಪಲು ಪ್ರದೇಶದಿಂದ ಆಂಜನಾದ್ರಿ ಬೆಟ್ಟದತ್ತ ಶ್ರೀರಾಮ ಪ್ರಯಾಣ ಬೆಳೆಸಿದ್ದ ಎಂಬ ದಂತ ಕತೆಗಳು ಇಲ್ಲಿವೆ.
ಐತಿಹಾಸಿಕ ಪ್ರಸಿದ್ಧ ಕಲ್ಲು ಬಂಡಿಯಿಂದ ಸುಡು ಬಿಸಿಲು, ಬರಗಾಲದಂತ ಸಂದರ್ಭದಲ್ಲಿ ಬತ್ತದ ಕಲ್ಲು ಗುಂಡಿಯ ಮಧ್ಯದ ನೀರಿನ ಜರಿ ಇದೆ. ಶ್ರೀರಾಮನ ಜನ್ಮ ಭೂಮಿಯಂತೆ ವನವಾಸದ ವೇಳೆ ತಂಗಿದ್ದ ರಾಮತೀರ್ಥ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂಬುದು ರಾಮಭಕ್ತರ ಮನವಿ ಆಗಿದೆ.
ರಾಮ ವನವಾಸದ ವೇಳೆ ತಂಗಿದ್ದ ಗುಹೆ, ಪೂಜೆಗಾಗಿ ಸ್ಥಾಪಿಸಿದ ಈಶ್ವರ ಮೂರ್ತಿ, ಇತರೆ ಸಮುಚ್ಛಯಗಳಿವೆ. ಕೆಲ ವರ್ಷಗಳ ಹಿಂದೆ ಸ್ಥಳೀಯರು ಆಧುನಿಕತೆ ಟಚ್ ನೀಡಿದ್ದಾರೆ. ರಾಮತೀರ್ಥ ನೀರು ಸೇವನೆ, ಸ್ನಾನ ಮಾಡುವುದರಿಂದ ರೋಗಗಳು ವಾಸಿ ಆಗುತ್ತವೆ ಎಂಬುದು ಪ್ರತೀತಿ.
ಪುಣ್ಯ ಕ್ಷೇತ್ರ ಪ್ರವಾಸಿ ತಾಣವನ್ನಾಗಿಸುವಲ್ಲಿ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳಿಗೆ ಮುಕ್ತಿ ದೊರಕಬೇಕಿದೆ.
‘ಶತಮಾನಗಳಿಂದ ನಮ್ಮ ಕುಟುಂಬಸ್ಥರು ರಾಮತೀರ್ಥದ ಮೇಲುಸ್ತುವಾರಿ ಪೂಜಾ ಕೈಂಕರ್ಯ ಮಾಡಿಕೊಂಡು ಬಂದಿದ್ದೇವೆ. ಸ್ಥಳೀಯರ ಸಹಾಯ, ಸಹಕಾರದಿಂದ ಸಂರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಸಂಪೂರ್ಣ ನಶಿಸಿ ಹೋಗುವ ಹಾಗೂ ಒತ್ತುವರಿ ಆಗುವ ಮುಂಚೆ ಸರ್ಕಾರ ಶ್ರೀರಾಮ ತಂಗಿದ್ದ ಎಂದು ಹೇಳಲಾಗುವ ಈ ಕ್ಷೇತ್ರದ ರಕ್ಷಣೆಗೆ ಮುಂದಾಗಬೇಕು’ ಎಂದು ಯರಡೋಣಿ ರಾಮತೀರ್ಥ ಕ್ಷೇತ್ರದ ಪೂಜಾರಿ ವಿಶ್ವನಾಥ ತಿಳಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.