ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಅಂಗನವಾಡಿ ಬೀಗ ಮುರಿದು ಸಾಮಗ್ರಿ ಸ್ಥಳಾಂತರ

Published 19 ಡಿಸೆಂಬರ್ 2023, 16:15 IST
Last Updated 19 ಡಿಸೆಂಬರ್ 2023, 16:15 IST
ಅಕ್ಷರ ಗಾತ್ರ

ಕವಿತಾಳ: ಕಾರ್ಯಕರ್ತೆ ಅನುಪಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರದ ಬೀಗ ಮುರಿದ ಅಧಿಕಾರಿಗಳು ಅಲ್ಲಿನ ಸಾಮಗ್ರಿಗಳನ್ನು ಶಾಲಾ ಕೊಠಡಿಗೆ ಸ್ಥಳಾಂತರಿಸಿ ಅದರ ಬೀಗದ ಕೈಯನ್ನು ಬೇರೊಬ್ಬರಿಗೆ ನೀಡಿದ ಘಟನೆ ಮಸ್ಕಿ ತಾಲ್ಲೂಕಿನ ಚಿಲ್ಕರಾಗಿ ಗ್ರಾಮದಲ್ಲಿ ಈಚೆಗೆ ನಡೆದಿದೆ.

ಗ್ರಾಮದಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಕಳೆದ 20 ವರ್ಷಗಳಿಂದ ತಗಡಿನ ಶೀಟ್‍ ಮೇಲ್ಚಾವಣಿಯ ಶೆಡ್‍ ಆಕಾರದ ಕೊಠಡಿಯಲ್ಲಿ ಕೇಂದ್ರ ನಡೆಯುತ್ತಿದೆ. ಮುಳ್ಳು, ಗಿಡ ಗಂಟಿಗಳಲ್ಲಿ ಮುಚ್ಚಿ ಹೋಗಿದ್ದ ಈ ಕೇಂದ್ರದ ಚಿತ್ರ ತೆಗೆದು ಸಾರ್ವಜನಿಕರು ಅಧಿಕಾರಿಗೆ ಕಳುಹಿಸಿದ್ದರು ಎನ್ನಲಾಗಿದೆ.

ಕಾರ್ಯಕರ್ತೆ ಅನಾರೋಗ್ಯದ ನಿಮಿತ್ತ ಸಹಾಯಕಿಯೊಂದಿಗೆ ಶನಿವಾರ ಲಿಂಗಸುಗೂರಿನ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಕೇಂದ್ರಕ್ಕೆ ಭೇಟಿ ನೀಡಿದ ಸಿಡಿಪಿಒ ನಾಗರತ್ನ ಮತ್ತು ಮೇಲ್ವಿಚಾರಕಿ ನೀಲಮ್ಮ ಅವರು ಅಂಗನವಾಡಿ ಕೇಂದ್ರದ ಬೀಗ ಮುರಿದು ಅದರಲ್ಲಿದ್ದ ಸಾಮಗ್ರಿಗಳನ್ನು ಶಾಲಾ ಕೊಠಡಿಗೆ ಸ್ಥಳಾಂತರಿಸಿ ಕೊಠಡಿಯ ಬೀಗದ ಕೈಯನ್ನು ಶಾಲೆಯ ಅಡುಗೆ ಸಹಾಯಕಿ ಬಳಿ ನೀಡಿ ತೆರಳಿದ್ದಾರೆ.

ಆಸ್ಪತ್ರೆಯಿಂದ ವಾಪಸಾದ ಕಾರ್ಯಕರ್ತೆ ಹೊಸ ಕೊಠಡಿಯ ಕೀಲಿ ಕೈ ಇಲ್ಲದ ಕಾರಣ ಹಳೆ ಕಟ್ಟಡದಲ್ಲಿಯೇ ಮಕ್ಕಳನ್ನು ಕೂಡಿಸಿದ್ದಾರೆ. ಆಹಾರ ಧಾನ್ಯ ಮತ್ತು ಅಡುಗೆ ಸಾಮಗ್ರಿ ಇಲ್ಲದ ಕಾರಣ ತಮ್ಮ ಮನೆಯಲ್ಲಿಯೇ ಉಪಾಹಾರ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದಾರೆ.

‘ಕಳೆದ 19 ವರ್ಷಗಳಿಂದ ಹಳೆ ಕಟ್ಟಡದಲ್ಲಿಯೇ ಕೇಂದ್ರ ನಡೆಸಿದ್ದೇನೆ. ಗಿಡ–ಗಂಟಿ ಬೆಳೆದಿರುವುದರಿಂದ ವಿಷ ಜಂತುಗಳ ಹಾವಳಿ ಇದೆ ಎಂದು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಅನಾರೋಗ್ಯದ ನಿಮಿತ್ತ ಸಹಾಯಕಿಯನ್ನು ಕರೆದಕೊಂಡು ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಬಂದ ಅಧಿಕಾರಿಗಳು ಬೀಗ ಮುರಿದು ಸಾಮಗ್ರಿಗಳನ್ನು ಸ್ಥಳಾಂತರಿಸಿದ್ದಾರೆ. ಇನ್ನೂ ಹದಿನೈದು ದಿನಗಳಲ್ಲಿ ನಿವೃತ್ತಿಯಾಗುತ್ತಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತಮಗೆ ಅವಮಾನ ಮಾಡಿದ್ದಾರೆ’ ಎಂದು ಕಾರ್ಯಕರ್ತೆ ಹೇಳಿದರು.

‘ಕಾರ್ಯಕರ್ತೆ, ಸ್ಥಳೀಯರು ಮತ್ತು ಬಾಲ ವಿಕಾಸ ಸಮಿತಿಗೆ ಮಾಹಿತಿ ನೀಡದೆ ಅಂಗನವಾಡಿ ಕೇಂದ್ರದ ಬೀಗ ಮುರಿದು ಸಾಮಗ್ರಿ ಸ್ಥಳಾಂತರಿಸಿರುವುದು ಸರಿಯಲ್ಲ. ಕಾರ್ಯಕರ್ತೆ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಈ ಬಗ್ಗೆ ಕೇಳಿದರೆ ಸಿಡಿಪಿಒ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಎಐಟಿಯುಸಿ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಸಂಗಯ್ಯಸ್ವಾಮಿ ಚಿಂಚಿರಿಕಿ ಹೇಳಿದರು.

‘ಕಟ್ಟಡದ ಸಮಸ್ಯೆ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ಸಿಡಿಪಿಒ ಅವರಿಗೆ ಸೂಚಿಸಿದ್ದೆ, ಬೀಗ ಮುರಿದು ಶಾಲಾ ಕೊಠಡಿಗೆ ಸ್ಥಳಾಂತರಿಸಿದ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ’ ಎಂದು ಉಪ ನಿರ್ದೇಶಕ ಎಂ.ಎನ್.ಚೇತನಕುಮಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT