ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥೆಯ ಬದಲಾವಣೆಗೆ ಜನತೆಯ ಜವಾಬ್ದಾರಿ ಮುಖ್ಯ: ಕಾಗೇರಿ

Last Updated 5 ಮಾರ್ಚ್ 2022, 11:27 IST
ಅಕ್ಷರ ಗಾತ್ರ

ರಾಯಚೂರು: ದೇಶದಲ್ಲಿ ಪ್ರಸ್ತುತ ಚುನಾವಣೆ, ರಾಜಕೀಯ ವ್ಯವಸ್ಥೆ ಜನರ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದು, ಯುವಕರು, ಪ್ರಗತಿಪರರು, ಹಿರಿಯರು ಪ್ರಶ್ನಿಸುವ ಜೊತೆಗೆ ವ್ಯವಸ್ಥೆಯ ಸುಧಾರಣೆಗೆ ತಮ್ಮ ಜವಾಬ್ದಾರಿ ತೋರಬೇಕಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಘ, ರಾಯಚೂರು ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶನಿವಾರ ಆಯೋಜಿಸಿದ್ದ 'ಚುನಾವಣಾ ಸುಧಾರಣಾ ಕ್ರಮಗಳು' ಕುರಿತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

40 ವರ್ಷಗಳ ಹಿಂದೆ ರಾಜಕೀಯ ವ್ಯವಸ್ಥೆ, ಜನಪ್ರತಿನಿಧಿಗಳು ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು. ವಿಧಾನಸಭೆ, ಪರಿಷತ್ತಿನಲ್ಲಿ ಜನಪರವಾದ ಚರ್ಚೆ ನಡೆಯುತ್ತಿತ್ತು. ಆದರೆ ಈಗ ಇದರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ವಿಶ್ವದಲ್ಲಿಯೇ ಮಾದರಿ ಪ್ರಜಾಪ್ರಭುತ್ವ ಹೊಂದಿದ ದೇಶ ನಮ್ಮದು. ಆದರೆ ಶಾಸಕಾಂಗದ ಕಾರ್ಯನಿರ್ವಹಣೆ ಜನರ ವಿಶ್ವಾಸದಿಂದ ಕೆಲಸ ಮಾಡುತ್ತಿಲ್ಲ. ಕಾರ್ಯಾಂಗ ಶಾಸಕಾಂಗದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ನ್ಯಾಯಾಂಗ ಮೌಢ್ಯಾಚರಣೆಗೆ ಒಳಗಾಗಿದೆ. ಸಮಾಜದ‌ಲ್ಲಿ ಅಪಸ್ವರ, ಕಹಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಪತ್ರಿಕಾರಂಗವು ಸಂವಿಧಾನದ ಆಶಯದ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣದಿಂದ ಸುಧಾರಣೆ ಸಾಧ್ಯ ಆದರೆ ಖಾಸಗೀಕರಣ, ಪಾಶ್ಚಾತ್ಯೀಕರಣ, ವ್ಯಾಪಾರೀಕರಣದಿಂದ ನಲುಗಿದೆ. ಆದರ್ಶ, ಮೌಲ್ಯಯುತ ಶಿಕ್ಷಣ ದೊರೆಯದೇ ಅಂಕಗಳಿಗೆ ಸೀಮಿತವಾಗಿದೆ. ಯುವಕರು ಈ ದೇಶದ ಶಕ್ತಿ. ದೇಶದ ಅಭಿವೃದ್ಧಿಯ ಕನಸು ಕಾಣಬೇಕು. ಸ್ವಾಮಿ ವಿವೇಕಾನಂದರ ಸ್ಫೂರ್ತಿಯಿಂದ ಸಂವಿಧಾನದ ಅಶೋತ್ತರ ಕಾಪಾಡುವ ನಿಟ್ಟಿನಲ್ಲಿ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಅಂಕಗಳು, ಸರ್ಟಿಫಿಕೇಟ್ ಪಡೆಯಲು ಓದದೇ ವ್ಯವಸ್ಥೆಯ ಬದಲಾವಣೆಗೆ ಹರಿಕಾರರಾಗಬೇಕು. ಯುವಕರು, ಹಿರಿಯರು, ಸಾಹಿತಿಗಳು ಸಮಾಜದ ವ್ಯವಸ್ಥೆ ಬದಲಾವಣೆಗೆ ತಮ್ಮನ್ನು ತೊಡಗಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆಗ ದ್ರೋಹ ಮಾಡಿದಂತೆ ಎಂದು ಹೇಳಿದರು.

ದೇಶದಲ್ಲಿ ಅನೇಕ ಸವಾಲಿನ ಮಧ್ಯೆ ವಿಜ್ಞಾನ–ತಂತ್ರಜ್ಞಾನ, ಕೃಷಿ, ಶಿಕ್ಷಣದಲ್ಲಿ ಅನೇಕ ಮಹತ್ತರ ಸಾಧನೆ ಮಾಡಿದೆ. ದೇಶದ ಆಹಾರ ಉತ್ಪಾದನೆಯಲ್ಲಿ ಮೆಲುಗೈ ಸಾಧಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ವಿಶ್ವದ ಮುಂಚೂಣಿ ದೇಶಗಳ ಪೈಕಿ ಭಾರತ ಲಸಿಕೆ ಕಂಡು ಹಿಡಿದಿದ್ದು ಹೆಮ್ಮೆಯ ವಿಷಯ. ದೇಶದ ಪ್ರಜೆಗಳು ಕೀಳರಮೆ ಪಡೆಯದೇ ಸಮಸ್ಯೆ, ಸವಾಲುಗಳನ್ನು ಮೆಟ್ಟಿ ಹೋರಾಟ ಮಾಡಿ ಸುಧಾರಣೆಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT