ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ಗಂಟು ರೋಗ; ಹೆಚ್ಚಿದ ಸಾವು

ಜಾನುವಾರು ಸಂತೆ ನಿಷೇಧಿಸಿದರೂ ಹತೋಟಿಗೆ ಬರದ ‘ಲಂಪಿಸ್ಕಿನ್‌’
Last Updated 23 ನವೆಂಬರ್ 2022, 5:13 IST
ಅಕ್ಷರ ಗಾತ್ರ

ಮುದಗಲ್: ಹೋಬಳಿ ವ್ಯಾಪ್ತಿಯಲ್ಲಿ ಜಾನುವಾರುಗಳ ಚರ್ಮ ಗಂಟು ರೋಗ (ಲಂಪಿಸ್ಕಿನ್‌) ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಜೊತೆಗೆ ಅವುಗಳ ಸಾವಿನ ಸಂಖ್ಯೆ ಕೂಡ ಏರುತ್ತಿದೆ. ಇಲ್ಲಿಯವರೆಗೆ 11 ಜಾನುವಾರು ಸಾವನ್ನಪ್ಪಿವೆ.

ಮುದಗಲ್‌ ಹೋಬಳಿ ಪ್ರದೇಶದಲ್ಲಿ ರೋಗ ತೀವ್ರ ಸ್ವರೂಪ ಪಡೆದು ಕೊಂಡಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜಾನುವಾರುಗಳಿಗೆ ಅತಿಯಾದ ಜ್ವರ, ಕಣ್ಣಿನಲ್ಲಿ ನೀರು ಸೋರುವುದು, ನಿಶ್ಯಕ್ತಿ, ಕಾಲುಗಳಲ್ಲಿ ಬಾವು, ಕುಂಟುವುದು, ಚರ್ಮದ ಮೇಲೆ ದಪ್ಪದ ಗಂಟುಗಟ್ಟುವುದು, ನಂತರ ಗಂಟು ಒಡೆದು ಗಾಯವಾಗುವ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಜಾನುವಾರುಗಳು ಸಾಯುತ್ತಿವೆ.

ಚರ್ಮ ಗಂಟು ರೋಗ ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಮುದಗಲ್‌ ಪಟ್ಟಣದಲ್ಲಿ ನಡೆಯುತ್ತಿದ್ದ ಜಾನುವಾರು, ಕುರಿ, ಮೇಕೆ ಸಂತೆಗಳನ್ನು ಮೂರು ತಿಂಗಳ ಹಿಂದೆಯೇ ನಿಷೇಧಿಸಿದ್ದಾರೆ. ಆಗ ಸಾವಿನ ಸಂಖ್ಯೆ ಕಡಿಮೆ ಇತ್ತು. ಕಳೆದ ಒಂದು ತಿಂಗಳಿಂದ ತೀವ್ರವಾಗಿ ಹರಡುತ್ತಿದೆ.

‘ತಾಲ್ಲೂಕಿನಲ್ಲಿ 1,100 ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿದೆ.11 ಜಾನುವಾರು ಮೃತಪಟ್ಟಿವೆ. ರೋಗಕ್ಕೆ ನಿರ್ದಿಷ್ಟ ಔಷಧಿ ಇಲ್ಲ. ರೋಗ ಇದ್ದ ಜಾನುವಾರುಗೆ ಕಚ್ಚಿದ ಸೊಳ್ಳೆ ಆರೋಗ್ಯವಂತ ಜಾನುವಾರಿಗೆ ಕಚ್ಚಿದಾಗ ಹರಡುತ್ತದೆ. ರೋಗ ಕಾಣಿಸಿಕೊಂಡು 7 ದಿನದವರೆಗೆ ಜಾನುವಾರು ಜೀವಂತವಾಗಿ ಇರುತ್ತದೆ. ಅಷ್ಟರಲ್ಲಿ ರೈತರು ಪಶು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು’ ಎನ್ನುತ್ತಾರೆ ಲಿಂಗಸುಗೂರು ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ. ರಾಚಪ್ಪ.

‘ರೋಗ ನಿರೋಧಕ ಶಕ್ತಿ ಕಡಮೆ ಇದ್ದ ಜಾನವಾರು ಮೃತಪಡುತ್ತವೆ. ಸರಿಯಾಗಿ ಚಿಕಿತ್ಸೆ ಕೊಡಿಸಿದ ಮೇಲು ಮೃತಪಟ್ಟರೆ ಸರ್ಕಾರದಿಂದ ₹15-20 ಸಾವಿರದವರೆಗೆ ಪರಿಹಾರ ದೊರೆಯತ್ತದೆ. ರೋಗದ ಬಗ್ಗೆ ತಾಲ್ಲೂಕಿನಲ್ಲಿ ಪಂಚಾಯಿತಿ ಅಧಿಕಾರಿ ಗಳ ಸಯೋಗದಲ್ಲಿ ಜಾಗೃತಿ ಮೂಡಿಸಿ ದ್ದೇವೆ’ ಎಂದು ಅವರು ತಿಳಿಸಿದರು.

ಸೋಮವಾರ ಸಮೀಪದ ಉಪ್ಪಾರ ನಂದಿಹಾಳ ಗ್ರಾಮದ ಮಾಬುಪಾಷಾ ಕನಸಾವಿ ಎಂಬುವರ ಎತ್ತು ಚರ್ಮಗಂಟು ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದೆ. ಇದರಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಪಶು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.

‘ಉಳುಮೆ ಮಾಡುವ ಹೋರಿ, ಹಾಲು ಕೊಡುವ ಹಸು, ಎಮ್ಮೆ ಸೇರಿದಂತೆ ಎಲ್ಲಾ ವಯೋಮಾನದ ಜಾನುವಾರುಗಳಿಗೆ ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಒಂದಕ್ಕೆ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮತ್ತೊಂದಕ್ಕೆ ಬಂದಿರುತ್ತದೆ. ರೋಗ ಆರಂಭದಲ್ಲಿ ಸಾವಿನ ಪ್ರಮಾಣ ಕಡಿಮೆ ಇತ್ತು. ಈಗ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ’ ಎಂದು ರೈತ ಬಸವರಾಜ ಆತಂಕ ವ್ಯಕ್ತಪಡಿಸಿದರು.

‘ಹಾಲು ಕೊಡುವ ಹಸುಗಳು ಸಾವನ್ನಪ್ಪಿದರೆ ರೈತರ ಜೀವನ ಕ್ರಮವೇ ಏರುಪೇರಾಗುತ್ತದೆ. ತಾಲ್ಲೂಕಿನಲ್ಲಿ ಪಶುಪಾಲನೆ ಇಲಾಖೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ರೋಗಪೀಡಿತ ಜಾನುವಾರುಗಳಿಗೆ ಚುಚ್ಚುಮದ್ದು ಕೊಡಿಸಿ, ರೈತರ ನೆರವಿಗೆ ನಿಲ್ಲುತ್ತಿಲ್ಲ’ ಎಂದು ರೈತರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT