ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಶುಚಿತ್ವವಿಲ್ಲದಿದ್ದರೆ ಆಹಾರವೂ ವಿಷಯುಕ್ತ: ಡಾ. ಅರುಣಕುಮಾರ್‌ ಎ.

Last Updated 15 ಅಕ್ಟೋಬರ್ 2018, 13:13 IST
ಅಕ್ಷರ ಗಾತ್ರ

ರಾಯಚೂರು: ಊಟದ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಕೈ ಶುಚಿತ್ವವಿಲ್ಲದಿದ್ದರೆ ಸೇವಿಸುವ ಆಹಾರವೆಲ್ಲವೂ ವಿಷಯುಕ್ತವಾಗಿ ಹೊಟ್ಟೆ ಸೇರುತ್ತದೆ ಎಂದು ನವೋದಯ ದಂತ ಮಹಾವಿದ್ಯಾಲಯದ ಸಮುದಾಯ ದಂತ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ್‌ ಎ. ಹೇಳಿದರು.

ನಗರದ ಹರಿಜನವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌. ರೆಡ್ಡಿ ಅವರ ನೇತೃತ್ವದಲ್ಲಿ ನವೋದಯ ದಂತ ಮಹಾವಿದ್ಯಾಲಯದ ಸಮುದಾಯ ದಂತ ವಿಭಾಗದಿಂದ ಸೋಮವಾರ ಏರ್ಪಡಿಸಿದ್ದ ’ವಿಶ್ವ ಕೈ ಶುಚಿತ್ವ ದಿನ’ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಷಯುಕ್ತ ಆಹಾರದಿಂದ ಕೆಲವು ಸಲ ವಾಂತಿಭೇದಿ ಆಗುವ ಸಾಧ್ಯತೆ ಇದೆ. ಕೇವಲ 15 ರಿಂದ 20 ಸೆಕೆಂಡುಗಳ ಕಾಲ ಸೋಪಿನಿಂದ ಕೈ ಸ್ಚಚ್ಛಗೊಳಿಸುವ ಪ್ರಕ್ರಿಯೆಯನ್ನು ಅಡುಗೆ ತಯಾರಿಸುವ ಮೊದಲು, ಇನ್ನೊಬ್ಬರಿಗೆ ಊಟ ಬಡಿಸುವ ಪೂರ್ವ ಮಾಡಬೇಕು ಎಂದರು.

ಶುಚಿತ್ವ ಕಾಪಾಡಿಕೊಂಡರೆ ಬಹಳಷ್ಟು ರೋಗಗಳನ್ನು ದೂರ ಇಡಬಹುದು. ಶಾಲಾ ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ತುಂಬಾ ಅಗತ್ಯವಿದೆ. ಕೈ ತೊಳೆಯುವುದು ಸಣ್ಣ ವಿಚಾರ ಎಂದು ನಿರ್ಲಕ್ಷ್ಯ ವಹಿಸಬಾರದು. ಹೊಟ್ಟೆಗೆ ಸೇರುವ ಪ್ರತಿ ಆಹಾರದ ಕಣದ ಮೇಲೆ ಕೈ ಸ್ಪರ್ಶ ಪ್ರತ್ಯೇಕ್ಷ ಅಥವಾ ಪರೋಕ್ಷವಾಗಿ ಇದ್ದೇ ಇರುತ್ತದೆ ಎಂದು ಮನವರಿಕೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವೋದಯ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ ಹುಣಸಗಿ ಮಾತನಾಡಿ, ಮೊಬೈಲ್‌ನಿಂದ ಸೋಂಕುಗಳು ತಗಲುತ್ತವೆ ಎಂಬುದು ಇತ್ತೀಚೆಗೆ ತಿಳಿದು ಬಂದಿದೆ. ಶುಚಿತ್ವಕ್ಕೆ ಎಲ್ಲರೂ ಮಹತ್ವ ನೀಡಬೇಕು. ರೋಗರುಜಿನಗಳನ್ನು ಒಂದು ಹಂತದಲ್ಲಿ ತಡೆಗಟ್ಟುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ. ಊಟ ಅಥವಾ ಇನ್ನಿತರೆ ಯಾವುದೇ ಆಹಾರ ಪದಾರ್ಥ ಸೇವಿಸುವ ಪೂರ್ವ ಕೈ ತೊಳೆದುಕೊಳ್ಳುವ ವಿಧಾನವನ್ನು ಮಕ್ಕಳಿಗೆ ಪಾಲಕರು ಕಲಿಸಿಕೊಡಬೇಕು. ಅದಕ್ಕಿಂತ ಮೊದಲು ಕುಟುಂಬದಲ್ಲಿನ ಹಿರಿಯರು ಕೈ ತೊಳೆಯುವ ಪದ್ಧತಿ ರೂಢಿಸಿಕೊಂಡರೆ, ಮಕ್ಕಳು ಅನುಸರಿಸುತ್ತವೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಲ್ಪ ಮುಖ್ಯ ಅತಿಥಿಯಾಗಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಔಷಧ ವಿಭಾಗದ ಪ್ರಕಾಶ್‌ ನಿರೂಪಿಸಿದರು.

ನವೋದಯ ದಂತ ಮಹಾವಿದ್ಯಾಲಯದ ಗೃಹದಂತ ವಿಭಾಗದ ವೈದ್ಯರ ತಂಡವು ಮೂಕಾಭಿನಯ ಹಾಗೂ ನೃತ್ಯದ ಮೂಲಕ ‘ಕೈ ಅಶುಚಿತ್ವದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮ’ಗಳನ್ನು ಜನರಿಗೆ ಮನದಟ್ಟಾಗುವ ರೀತಿಯಲ್ಲಿ ಪ್ರದರ್ಶಿಸಿದರು.

ಆರೋಗ್ಯ ಕೇಂದ್ರದ ದಂತ ವೈದ್ಯರಾದ ಡಾ. ಶಿವಕುಮಾರ ಹಾಗೂ ಡಾ. ಅಭಿಷೇಕ ಪಾಟೀಲ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

ಸಮುದಾಯ ದಂತ ವಿಭಾಗದ ಪ್ರಾಧ್ಯಾಪಕರಾದ ಡಾ. ಸುರೇಶಬಾಬು, ಡಾ. ಜಹೀರ್‌ ಅಹ್ಮದ್‌, ಡಾ. ಸೋಮನಾಥರೆಡ್ಡಿ ಕೆ., ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಅನಿಲ ಬಾಬು, ಅಂಗನವಾಡಿ ಮೇಲ್ವಿಚಾರಕಿ ಮೂಕಾಂಬಿಕ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮುಖ್ಯಸ್ಥೆ ಎಚ್‌.ಪದ್ಮ ಇದ್ದರು.

ಪ್ರಾತ್ಯಕ್ಷಿಕೆ ವಿವರಣೆ

ಕಾರ್ಯಕ್ರಮದಲ್ಲಿ ಹಾಜರಿದ್ದ ವಿವಿಧ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಾರ್ವಜನಿಕರಿಗೆ ಕೈ ತೊಳೆಯುವುದು ಹೇಗೆ ಎನ್ನುವ ವಿಧಾನವನ್ನು ಡಾ. ಅರುಣಕುಮಾರ್‌ ಎ. ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

ಸ್ನಾತಕೋತ್ತರ ವಿದ್ಯಾರ್ಥಿ ಡಾ. ನಾಸಿ ಇಸ್ಮಾಯಿಲ್‌ ಅವರು ವಿಡಿಯೋ ಪ್ರದರ್ಶಿಸಿ ಶುಚಿತ್ವದ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT