ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಕ್ಷೇತ್ರ: ಡಾಕ್ಟರ್ ಮುಂದಿವೆ ಅಭಿವೃದ್ಧಿ–ರಾಜಕೀಯದ ಸವಾಲು

ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವರೇ; ಜಿಲ್ಲೆಗೆ ಮೆಟ್ರೊ, ಹೃದ್ರೋಗ ಆಸ್ಪತ್ರೆ ತರುವರೇ...?
Published 11 ಜೂನ್ 2024, 5:28 IST
Last Updated 11 ಜೂನ್ 2024, 5:28 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಮುಂದೆ ಅಭಿವೃದ್ಧಿ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಹಲವು ಸವಾಲುಗಳಿವೆ. ಕ್ಷೇತ್ರವನ್ನು ಮೂರು ಸಲ ಪ್ರತಿನಿಧಿಸಿರುವ ಪ್ರಬಲ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ವಿರುದ್ಧ ದಾಖಲೆಯ ಗೆಲುವು ಪಡೆದಿರುವ ಡಾಕ್ಟರ್ ಹಾದಿ ಸುಗಮವಾಗೇನು ಇಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವುದರಿಂದ, ಬಿಜೆಪಿಯಿಂದ ಗೆದ್ದಿರುವ ಮಂಜುನಾಥ್ ಅವರಿಗೆ ನಿರೀಕ್ಷಿತ ಸಹಕಾರ ಸಿಗದಿರಬಹುದು ಎಂಬ ಮಾತುಗಳಿವೆ. ಆದರೆ, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿರುವುದರಿಂದ ಕೇಂದ್ರ ಸರ್ಕಾರದ ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶಗಳಿವೆ.  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಹೋದರರನ್ನು ಸೋಲಿಸಿ ಮಂಜುನಾಥ್ ಅವರಿಗೆ ಜಯದ ಮಾಲೆ ಹಾಕಿರುವ ಜನ ಸಹ ಅವರಿಂದ ಹೆಚ್ಚಿನ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.

ತಪ್ಪಿದ ಸಚಿವ ಸ್ಥಾನ: ‘ಮಂಜುನಾಥ್ ಗೆದ್ದರೆ ಕೇಂದ್ರದಲ್ಲಿ ಸಚಿವರಾಗಲಿದ್ದಾರೆ’ ಎಂಬ ಮಾತುಗಳು ಚುನಾವಣಾ ಪ್ರಚಾರದುದ್ದಕ್ಕೂ ಕೇಳಿ ಬರುತ್ತಿದ್ದವು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಮಂಜುನಾಥ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ, ಅವರ ಬಾಮೈದ ಮಂಡ್ಯದಿಂದ ಗೆದ್ದಿರುವ ಜೆಡಿಎಸ್‌ ನಾಯಕರೂ ಆದ ಎಚ್‌.ಡಿ. ಕುಮಾರಸ್ವಾಮಿ ಅವರು, ಕೇಂದ್ರದ ಮೋದಿ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ.

ಎಚ್‌ಡಿಕೆ ಸಚಿವರಾಗಿರುವುದು, ಮಂಜುನಾಥ್ ಅವರಿಗೂ ಒಂದು ರೀತಿಯಲ್ಲಿ ಬಲ ತಂದು ಕೊಟ್ಟಿದೆ. ಕೈಗಾರಿಕಾಭಿವೃದ್ಧಿಗೆ ಸಂಬಂಧಿಸಿದ ಕೇಂದ್ರ ಮಟ್ಟದ ಯೋಜನೆಗಳನ್ನು ಎಚ್‌ಡಿಕೆ ಮೂಲಕ ಕ್ಷೇತ್ರ ತರಲು ಅವಕಾಶ ಸಿಕ್ಕಿದೆ. ಅದರ ಸದುಪಯೋಗಪಡಿಸಿಕೊಂಡು, ಸ್ಥಳೀಯ ರಾಜಕಾರಣವನ್ನು ಎದುರಿಸಿ ಕ್ಷೇತ್ರದ ಅಭಿವೃದ್ಧಿಗೆ ಹೇಗೆ ಮುನ್ನುಡಿ ಬರೆಯುತ್ತಾರೆಂದು ಕಾದು ನೋಡಬೇಕಿದೆ.

ನಿರೀಕ್ಷೆಯ ಭಾರವಿದೆ: ‘ಚುನಾವಣೆಯಲ್ಲಿ ಸೋಲು–ಗೆಲುವು ಸಹಜ. ಆದರೆ, ಕ್ಷೇತ್ರದಲ್ಲಿ ಮೂರು ಸಲ ಗೆದ್ದು 10 ವರ್ಷ 8 ತಿಂಗಳು ಸಂಸದರಾಗಿದ್ದ ಸುರೇಶ್ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆ ವಿಷಯವನ್ನು ಅಲ್ಲಗಳೆಯುವಂತಿಲ್ಲ. ನರೇಗಾದಡಿ ದೇಶದಲ್ಲೇ ಅತಿ ಹೆಚ್ಚು ಕಾಮಗಾರಿಗಳು ಜಿಲ್ಲೆಯಲ್ಲಿ ನಡೆದಿವೆ. ಕುಡಿಯುವ ನೀರಿನ ಯೋಜನೆ, ವಸತಿ ಯೋಜನೆ, ಕೆರೆ ಮತ್ತು ಕಟ್ಟೆಗೆ ನೀರು ಹರಿಸುವುದು, ಬಡವರಿಗೆ ನಿವೇಶನ ಹಂಚಿಕೆಗೆ ಕ್ರಮ ಸೇರಿದಂತೆ ಹಲವು ಕೆಲಸಗಳನ್ನು ಮಾಡಿದ್ದಾರೆ. ಇಷ್ಟೆಲ್ಲ ಕೆಲಸ ಮಾಡಿದರೂ ಮತದಾರರು ಸುರೇಶ್ ಅವರನ್ನು ಸೋಲಿಸಿ ಇವರನ್ನು ಗೆಲ್ಲಿಸಿದ್ದಾರೆಂದರೆ, ಅವರಿಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಜನ ನಿರೀಕ್ಷಿಸುತ್ತಿದ್ದಾರೆ ಎಂದರ್ಥವಲ್ಲವೆ’ ಎಂದು ಈ ಸಲ ಮಂಜುನಾಥ್ ಬೆಂಬಲಿಸಿದ ಸ್ಥಳೀಯ ನಿವಾಸಿ ಗೋವಿಂದರಾಜು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಅಧಿಕಾರಿಯಂತೆ ಉಳಿಯದಿರಲಿ: ‘ಮಂಜುನಾಥ್ ಅವರು ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಸಂಸದರಾಗಿರುವ ಅವರಿಂದ ಹೆಚ್ಚಿನ ನಿರೀಕ್ಷೆ ಇದೆ. ಕ್ಷೇತ್ರದಲ್ಲಿ ಓಡಾಡಿ ಜನರ ಕಷ್ಟ–ಸುಖ ಆಲಿಸಬೇಕು. ಅವರ ಪ್ರತಿ ಕಾರ್ಯವೈಖರಿಯನ್ನು ಡಿ.ಕೆ ಸಹೋದರರು ಸೇರಿದಂತೆ, ಕ್ಷೇತ್ರದಲ್ಲಿರುವ ಕಾಂಗ್ರೆಸ್ ಶಾಸಕರು ಗಮನಿಸುತ್ತಲೇ ಇರುತ್ತಾರೆ. ಹಾಗಾಗಿ, ಪ್ರಗತಿ ಪರಿಶೀಲನೆ ಸಭೆ ಸೇರಿದಂತೆ ಸಭೆ–ಸಮಾರಂಭಗಳಲ್ಲಿ ಭಾಗವಹಿಸುತ್ತಾ ತಮ್ಮನ್ನು ಗೆಲ್ಲಿಸಿದ ಜನರ ಜೊತೆಗಿರಬೇಕು. ಇಲ್ಲದಿದ್ದರೆ, ಇದೇ ಜನ ಮುಂದಿನ ಚುನಾವಣೆಯಲ್ಲಿ ಮಂಜುನಾಥ್ ಅವರಿಗೂ ಪಾಠ ಕಲಿಸುವುದರಲ್ಲಿ ಎರಡು ಮಾತಿಲ್ಲ’ ಎಂದು ವ್ಯಾಪಾರಿ ರುದ್ರೇಶ್ ಹೇಳಿದರು.

ಜನರ ನಿರೀಕ್ಷೆಗಳೇನು?

* ಜಿಲ್ಲೆಯ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿ ಯೋಜನೆ ಕಾರ್ಯಗತಗೊಳ್ಳುವಂತೆ ಮಾಡುವುದು. ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ಕೊಡದೆ ಅಡ್ಡಗಾಲು ಹಾಕುತ್ತಿದೆ ಎಂದು ರಾಜ್ಯ ಸರ್ಕಾರ ದೂರುತ್ತಲೇ ಬಂದಿದೆ. ಗ್ರಾಮಾಂತರದ ಪ್ರತಿನಿಧಿಯಾಗಿ ಮಂಜುನಾಥ್ ಅವರು ಕೇಂದ್ರ ಸರ್ಕಾರದಿಂದ ಯೋಜನೆಗೆ ಅನುಮತಿ ಕೊಡಿಸಿದರೆ ರಾಜ್ಯ ಸರ್ಕಾರ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಲಿದೆ.

* ಮನೆ ಮನೆಗೆ ನಳದ ಮೂಲಕ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ಜಾರಿಯಾಗಿದೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ ಎಂಬ ಆರೋಪಗಳಿವೆ. ಯೋಜನೆಯನ್ನು ತಹಬದಿಗೆ ತಂದು ಜನರಿಗೆ ಕುಡಿಯುವ ನೀರು ಪೂರೈಸಬೇಕಿದೆ.

* ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು ದುರಸ್ತಿಗಾಗಿ ಕಾಯುತ್ತಿವೆ. ಕೆಲ ಹಳ್ಳಿಗಳು ಇಂದಿಗೂ ರಸ್ತೆಯನ್ನೇ ಕಂಡಿಲ್ಲ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ರಸ್ತೆ ನಿರ್ಮಾಣವಾಗಬೇಕಿದೆ.

* ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿ ವರ್ಷ ದಾಟಿದರೂ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಪೂರ್ಣ ಸರ್ವೀಸ್ ರಸ್ತೆ ಪಾದಚಾರಿಗಳು ರಸ್ತೆ ದಾಟಲು ಸ್ಕೈ ವಾಕ್ ಪ್ರಾಣಿಗಳು ರಸ್ತೆ ದಾಟಲು ಹಸಿರುಪಥ ನಿರ್ಮಾಣ ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದ ಹಲವು ಕೆಲಸಗಳು ಬಾಕಿ ಇವೆ. ಹೆದ್ದಾರಿಯ ಉಳಿಕೆ ಕಾಮಗಾರಿ ಪೂರ್ಣಗೊಳಿಸಬೇಕಿದೆ.

* ಬೆಂಗಳೂರಿಗೆ ಹೊಂದಿಕೊಂಡಿರುವ ಬಿಡದಿಯು ಪ್ರಮುಖ ಕೈಗಾರಿಕಾ ಪ್ರದೇಶವಾಗಿದ್ದು ಇಲ್ಲಿಗೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಬಿಡದಿಗೆ ಮೆಟ್ರೊ ಬರಲು ನೆರವಾಗಬೇಕು.

* ರಾಮನಗರ ಜಿಲ್ಲೆಯಲ್ಲಿ ಬಿಡದಿ ಹೊರತುಪಡಿಸಿದರೆ ಜಿಲ್ಲಾ ಕೇಂದ್ರವಾದ ರಾಮನಗರ ಮಾಗಡಿ ಸೇರಿದಂತೆ ಉಳಿದೆಡೆ ಕೈಗಾರಿಕೆಗಳ ಅಭಿವೃದ್ಧಿಯಾಗಿಲ್ಲ. ಕೈಗಾರಿಕಾ ಪ್ರದೇಶ ಸಹ ಇಲ್ಲ. ರಾಜಧಾನಿ ಪಕ್ಕ ಇರುವ ಜಿಲ್ಲೆಗೆ ಕೈಗಾರಿಕೆಗಳನ್ನು ತಂದು ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಬೇಕು.

* ಜಿಲ್ಲೆಯ ಆರೋಗ್ಯ ವ್ಯವಸ್ಥೆಗೂ ಚಿಕಿತ್ಸೆ ಬೇಕಿದೆ. ಕಟ್ಟಡವಿದ್ದರೆ ವೈದ್ಯರು ಮತ್ತು ಸಿಬ್ಬಂದಿ ಇಲ್ಲ. ಇಬ್ಬರಿರುವೆಡೆ ಕಟ್ಟಡವಿಲ್ಲ ಎಂಬಂತಹ ಸ್ಥಿತಿ ಇದೆ. ಹೃದ್ರೋಗ ಕ್ಯಾನ್ಸರ್ ನರರೋಗದಂತಹ ರೋಗಿಗಳು ಬೆಂಗಳೂರಿಗೆ ಹೋಗುವುದು ಸಾಮಾನ್ಯವಾಗಿದೆ. ಹಾಗಾಗಿ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕೇಂದ್ರ ಮತ್ತು ಸರ್ಕಾರದ ನೆರವಿನಿಂದ ಹೃದ್ರೋಗ ಆಸ್ಪತ್ರೆ ಮಂಜೂರು ಮಾಡಿಸಬೇಕು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು.

* ಈ ಭಾಗದ ಪ್ರಮುಖ ಬೆಳೆಗಳಾದ ರೇಷ್ಮೆ ಮಾವು ಹಾಗೂ ತೆಂಗು ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಸರ್ಕಾರದಿಂದ ನೆರವು ಒದಗಿಸಬೇಕು. ಬೆಳೆಗಳಿಗೆ ಬೆಂಬಲ ಬೆಲೆಯ ಖಾತ್ರಿ ಕೊಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT