ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹತ್ತು ವರ್ಷದ ಸಾಧನೆ- ಸಂಸದ ಶ್ವೇತಪತ್ರ ಹೊರಡಿಸಲಿ: ಸಿ.ಪಿ. ಯೋಗೇಶ್ವರ

ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ ಸವಾಲು
Published 18 ಮಾರ್ಚ್ 2024, 6:24 IST
Last Updated 18 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ಚನ್ನಪಟ್ಟಣ: ಹತ್ತು ವರ್ಷದ ಅವಧಿಯಲ್ಲಿ ಡಿ.ಕೆ. ಸುರೇಶ್‌ ಸಂಸದರ ಅನುದಾನದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸವಾಲು ಹಾಕಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷದ ಅವಧಿಯಲ್ಲಿ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ. ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದರು.

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಡಿ.ಕೆ. ಸುರೇಶ್ ಸಂಸದರಾಗುತ್ತಿರಲಿಲ್ಲ. ಆಗಲೆ ಸುರೇಶ್ ಅವರನ್ನು ಮನೆಗೆ ಕಳುಹಿಸುತ್ತಿದ್ದೆ. ಅಂದು ಅವರಿಗೆ ಅದೇ ನಾನು ಮಾಡಿದ ಸಹಕಾರ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಮಂಜುನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಮ್, ಪಿಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಹಾಪ್ ಕಾಮ್ಸ್ ದೇವರಾಜು, ಪಂಚಮಿ ಪ್ರಸನ್ನ, ಅಜಯ್, ತೂಬಿನಕೆರೆ ರಾಜು, ಶಿವು, ಮುದ್ದುಕೃಷ್ಣ, ವಿ.ಬಿ.ಚಂದ್ರು, ಜಯರಾಂ, ಇತರರು ಹಾಜರಿದ್ದರು.

ಮೈತ್ರಿ ಸಮ್ಮಿಲನ ಕಾರ್ಯಕ್ರಮ ರದ್ದು: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ (ಮಾರ್ಚ್‌ 19) ನಡೆಯಬೇಕಿದ್ದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸಮ್ಮಿಲನ ಕಾರ್ಯಕ್ರಮ ಮುಂದೂಡಿರುವುದಾಗಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು ತಿಳಿಸಿದ್ದಾರೆ.

ಮಂಗಳವಾರ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸಮ್ಮಿಲನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅನಾರೋಗ್ಯದ ಕಾರಣ ಸಮಾವೇಶ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಈ ಬಗ್ಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹತಾಶರಾಗಿ ಉಡುಗೊರೆ ಹಂಚಿಕೆ

‘ಸುರೇಶ್ ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಜನರಿಗೆ ಕುಕ್ಕರ್ ಹಣ ಸೀರೆ ಕೂಪನ್ ಗೃಹ ಬಳಕೆಯ ವಸ್ತುಗಳನ್ನು ಉಡುಗೊರೆ ನೀಡುವ ಅಗತ್ಯ ಏನಿತ್ತು’ ಎಂದು ಯೋಗೇಶ್ವರ ಪ್ರಶ್ನಿಸಿದರು. ಡಾ.ಮಂಜುನಾಥ್ ಅವರು ನನಗೆ ಸಮರ್ಥ ಎದುರಾಳಿಯಲ್ಲ ಎಂದು ಡಿ.ಕೆ. ಸುರೇಶ್ ಹೇಳಿಕೊಳ್ಳುತ್ತಿದ್ದಾರೆ. ಇದು ಹತಾಶೆಯ ಹೇಳಿಕೆ. ಡಿ.ಕೆ ಸಹೋದರರನ್ನು ಬುಡ ಸಮೇತ ಕಿತ್ತೆಸೆಯಬೇಕು ಎನ್ನುವ ಉದ್ದೇಶದಿಂದ ಡಾ. ಮಂಜುನಾಥ ಅವರಂಥ ಒಬ್ಬ ಸಂಸ್ಕಾರವಂತ ಸಹೃದಯಿಯನ್ನು ಕಣಕ್ಕೆ ಇಳಿಸಿದ್ದೇವೆ. ಅವರ ಬಗ್ಗೆ ಆಪಾದನೆ ಮಾಡಲು ಏನೂ ಇಲ್ಲ. ಅವರ ಬಗ್ಗೆ ಮಾತನಾಡಲು ಡಿ.ಕೆ ಸಹೋದರರಿಗೆ ಯೋಗ್ಯತೆಯೂ ಇಲ್ಲ. ಇದರಿಂದ ಸಹೋದರರು ಬಹಳ ಹತಾಶರಾಗಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT