ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಟವೆಲ್‌ ಅಪವಿತ್ರಗೊಳಿಸಬೇಡಿ

ರಾಜ್ಯ ರೈತ ಸಂಘದ ವಿಭಾಗೀಯ ಮಟ್ಟದ ಸಭೆಯಲ್ಲಿ ಮನವಿ
Last Updated 17 ಸೆಪ್ಟೆಂಬರ್ 2021, 2:52 IST
ಅಕ್ಷರ ಗಾತ್ರ

ಮಾಗಡಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಸೆ.27ರಂದು ನಡೆಯಲಿರುವ ಭಾರತ್ ಬಂದ್‌ಗೆ ತಾಲ್ಲೂಕಿನ ಎಲ್ಲಾ ರೈತರು, ಕಾರ್ಮಿಕರು, ಪ್ರಗತಿಪರ ಸಂಘಟನೆಗಳು ಬೆಂಬಲಿಸಿ ಬಂದ್ ಯಶಸ್ವಿಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

ಪಟ್ಟಣದ ಸಿದ್ಧಾರೂಢ ಆಶ್ರಮದಲ್ಲಿ ಗುರುವಾರ ನಡೆದ ರಾಜ್ಯ ರೈತ ಸಂಘದ ವಿಭಾಗೀಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಹಸಿರು ಟವೆಲ್ ತ್ಯಾಗ, ಬಲಿದಾನದ ಸಂಕೇತ. ಅಪವಿತ್ರಗೊಳಿಸಬೇಡಿ. ಹಸಿರು ಟವೆಲ್ ಹಾಕಿಕೊಂಡು ನಕಲಿ ರೈತ ಹೋರಾಟಗಾರರ ಬಗ್ಗೆ ಸದಾ ಜಾಗೃತಿ ಮೂಡಿಸಬೇಕು. ಹರಿದ ನಿಕ್ಕರ್ ಹಾಕಿಕೊಂಡು ಹೊಲದಲ್ಲಿ ದುಡಿಯುವ ರೈತರ ರಕ್ಷಣೆ ಅಗತ್ಯ. ಭೂಮಿಗೂ ರೈತರಿಗೂ ಭಾವನಾತ್ಮಕ ಸಂಬಂಧವಿದೆ. ಭೂಮಿತಾಯಿ ರೈತರ ಕೈಯಲ್ಲಿದ್ದರೆ ಚೆನ್ನ’ ಎಂದರು.

‘ರೈತರಿಗೆ ಸರಳ ಕಾನೂನಿನ ತಿಳಿವಳಿಕೆ ಇರಬೇಕು. ಭೂಮಿಯ ಬಳಕೆ ಬಗ್ಗೆ ಕಾನೂನು ರಚನೆಯಾಗಬೇಕು. ದೇಶದ ನಿಜವಾದ ಸಂಸ್ಕೃತಿ ಎಂದರೆ ಅದು ರೈತನ ಜನಪರ ನಿಲುವು. ಭೂಸ್ವಾಧೀನ ಮಾಡಿಕೊಂಡು 5 ವರ್ಷದಲ್ಲಿ ಕಾರ್ಖಾನೆ ಆರಂಭಿಸದಿದ್ದರೆ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು ಎಂದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ವರದಿ ತಿಳಿಸಿದೆ’ ಎಂದರು.

ವಿರೋಧಿಗಳಲ್ಲ: ‘ರೈತ ಚಳವಳಿ ಅಭಿವೃದ್ಧಿ ವಿರೋಧಿಯಲ್ಲ. ಭೂಮಿ ಕಿತ್ತುಕೊಳ್ಳಲು ಬಂದ ರಾಕ್ಷಸಿಗಳನ್ನು ಹಿಮ್ಮೆಟ್ಟಿಸಿ. ಹೆದ್ದಾರಿಗಳ ಅಭಿವೃದ್ಧಿ ಹೆಸರಿನಲ್ಲಿ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಮಕ್ಕಳೆ ಗುತ್ತಿಗೆ ಹಿಡಿದಿದ್ದಾರೆ. ಪಶ್ಚಿಮ ಘಟ್ಟದ ಮೇಲೆ ಅತ್ಯಾಚಾರ ನಡೆಯುತ್ತಿದೆ. ಬೆಟ್ಟಗುಡ್ಡ, ಹಳ್ಳಕೊಳ್ಳಗಳನ್ನು ಕಬಳಿಸಿ ರೆಸಾರ್ಟ್‌ ಮಾಡಿಕೊಂಡು ಮೋಜು ಮಸ್ತಿ ಮಾಡುತ್ತಿರುವ ರಾಜಕಾರಿಣಿಗಳು ಮತ್ತು ಲಂಚಕೋರ ಅಧಿಕಾರಗಳ ದುಷ್ಟಕೂಟದ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ’ ಎಂದರು.

ರೈತ ಸಂಘದ ಮುಖಂಡ ಮಂಡ್ಯದ ಮಧುಚಂದನ್, ರಾಜ್ಯ ಸಂಘದ ಉಪಧ್ಯಕ್ಷ ಮಲ್ಲಯ್ಯ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಚನ್ನಪಟ್ಟಣದ ರಾಮಣ್ಣ, ತಿಮ್ಮೇಗೌಡ, ರವಿ, ರಾಜಣ್ಣ ಮಾತನಾಡಿದರು.

ಜಿಲ್ಲಾ ಶಾಖೆಯ ಉಪಾಧ್ಯಕ್ಷ ಪಟೇಲ್ ಹನುಮಂತಯ್ಯ, ಚಕ್ರಬಾವಿ ಗಿರೀಶ್, ಹೊಂಬಾಳಮ್ಮನಪೇಟೆ ರವಿಕುಮಾರ್, ವಿಶ್ವನಾಥ ಪುರದ ಷಡಕ್ಷರಿ, ನಿಂಗಣ್ಣ, ಮತ್ತ ಗ್ರಾಮದ ಹನುಮಂತರಾಯಪ್ಪ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT