ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಸದ ಸಮಸ್ಯೆ; ಪಕ್ಷಾತೀತವಾಗಿ ತರಾಟೆ

ಚನ್ನಪಟ್ಟಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
Published 29 ಆಗಸ್ಟ್ 2023, 5:13 IST
Last Updated 29 ಆಗಸ್ಟ್ 2023, 5:13 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದಲ್ಲಿ ಕಸದ ಸಮಸ್ಯೆಯೂ ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿದ ನಗರಸಭೆಯ ಸದಸ್ಯರು, ಪಕ್ಷಾತೀತವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ಪಕ್ಷಾತೀತವಾಗಿ ಕಸದ ಸಮಸ್ಯೆ ಬಗ್ಗೆ ದನಿ ಎತ್ತಿದ ಸದಸ್ಯರು, ಮೂರ್ನಾಲ್ಕು ದಿನಗಳಿಂದಲೂ ಕಸ ವಿಲೇವಾರಿ ಮಾಡಿಲ್ಲ. ಕೆಲವೆಡೆ ಒಂದು ವಾರದಿಂದಲೂ ಕಸ ತೆಗೆದಿಲ್ಲ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಎಂದು ಗುಡುಗಿದರು.

ಸಭೆಯ ಆರಂಭದಲ್ಲೇ ಮಾತನಾಡಿದ ಕಾಂಗ್ರೆಸ್ ಸದಸ್ಯ ವಾಸಿಲ್ ಆಲಿಖಾನ್, ‘ದಿನ ಕಳೆದಂತೆ ಕಸದ ಸಮಸ್ಯೆ ತೀವ್ರವಾಗುತ್ತಿದೆ. ಜನರು ಮನೆಯ ಬಳಿ ಬಂದು ಪ್ರಶ್ನಿಸುತ್ತಿದ್ದಾರೆ. ಕಸದ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆ? ಮೊದಲು ಕಸದ ವಿಚಾರ ಬಗೆಹರಿಸಿ’ ಎಂದು ಆಗ್ರಹಿಸಿದರು. ಇದಕ್ಕೆ ಎಲ್ಲ ಸದಸ್ಯರು ದನಿಗೂಡಿಸಿದರು.

‘ಕಸ ವಿಲೇವಾರಿಗೆ ಸ್ಥಳದ ಸಮಸ್ಯೆ ಎದುರಾಗಿತ್ತು. ಈಗ ಜಾಗ ಗುರುತಿಸಲಾಗಿದೆ. ಕೆಲ ದಿನದ ನಂತರ ಪರಿಹಾರ ಸಿಗಲಿದೆ’ ಎಂದು ಪೌರಾಯುಕ್ತ ಪುಟ್ಟಸ್ವಾಮಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಲವು ಸದಸ್ಯರು, ಜಾಗದ ಸಮಸ್ಯೆ ಇದ್ದರೆ ಈ ಸಭೆಯಲ್ಲಿ ಪರಿಹಾರ ಹುಡುಕಿ. ತಹಶೀಲ್ದಾರ್ ಅನ್ನು ಸಭೆಗೆ ಕರೆಸಿ ಜಾಗದ ಸಮಸ್ಯೆ ಪರಿಹರಿಸಿ ಎಂದು ಆಗ್ರಹಿಸಿದರು.

ಬಿಜೆಪಿ ಸದಸ್ಯೆ ಜಯಮಾಲಾ ಮಾತನಾಡಿ, ‘ಕಸದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಕ್ಷೇತ್ರದ ಶಾಸಕರ ಜೊತೆ ಸಭೆ ನಿಗದಿ ಪಡಿಸಿ. ನಗರದ ಸಮಸ್ಯೆಗಳ ಬಗ್ಗೆ ಅವರಿಗೂ ಅರಿವಾಗಲಿ’ ಎಂದರು. ಇದಕ್ಕೆ ಅಧಿಕಾರಿಗಳ ಮೌನವೇ ಉತ್ತರವಾಯಿತು.

ಸದಸ್ಯ ಶ್ರೀನಿವಾಸ್ ಮೂರ್ತಿ ಮಾತನಾಡಿ, ‘ಕಂದಾಯ ಇಲಾಖೆ ಸೇರಿದಂತೆ ಯಾವ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಜನಪ್ರತಿನಿಧಿಗಳಾದ ನಮಗೂ ಗೌರವ ನೀಡುತ್ತಿಲ್ಲ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಕೇಳುವವರೇ ಇಲ್ಲದಂತಾಗಿದೆ. ಇದಲ್ಲದೆ ಇ ಖಾತೆ ಮಾಡಿಸಿಕೊಳ್ಳಲು ಆನ್‌ಲೈನ್‌ ನೋಂದಣಿ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ವಿಚಾರ ಸದಸ್ಯರ ಗಮನಕ್ಕೆ ಬಂದಿಲ್ಲ. ಇನ್ನೂ ಜನರಿಗೆ ಈ ವಿಚಾರ ಹೇಗೆ ತಿಳಿಯುತ್ತದೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯ ಮಂಜುನಾಥ್ ಮಾತನಾಡಿ, ‘ನಗರದ ಕೆಲವೆಡೆ ಟೆಂಡರ್ ಕರೆಯದೆ ಕಾಮಗಾರಿ ನಡೆಸಲಾಗುತ್ತಿದೆ. ಸಭೆಯ ಅನುಮತಿ ಪಡೆದು ಲಕ್ಷಾಂತರ ರೂಪಾಯಿ ಕಾಮಗಾರಿ ನಡೆಸಲಾಗುತ್ತಿದೆ. ಇದೇ ರೀತಿಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೂ ಪ್ರಯತ್ನಿಸಿ. ನಗರಸಭೆಯ ಹಣವನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವುದು ಬೇಡ’ ಎಂದರು. ಈ ವಿಚಾರದಲ್ಲಿ ವಾದ–ವಿವಾದ ನಡೆದವು.

ನಂತರ ಸಭೆಯಲ್ಲಿ ನೀರಿನ ಸಮಸ್ಯೆ, ಫುಟ್‌ಪಾತ್‌ ವ್ಯಾಪಾರ ತೆರವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಉಪಾಧ್ಯಕ್ಷೆ ಹಸೀನಾ ಪರ್ವೀನ್, ಅಧಿಕಾರಿಗಳು, ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT