ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ: ಇಷ್ಟಾರ್ಥ ಸಿದ್ಧಿಯ ಕಣಿವೆ ಆಂಜನೇಯ

ಗೋವಿಂದರಾಜು.ವಿ
Published 9 ಜೂನ್ 2024, 5:14 IST
Last Updated 9 ಜೂನ್ 2024, 5:14 IST
ಅಕ್ಷರ ಗಾತ್ರ

ಹಾರೋಹಳ್ಳಿ: ಹಸಿರ ಹೊದಿಕೆ ನಡುವೆ ಸಮತಟ್ಟಾದ ದಟ್ಟ ಅರಣ್ಯ ಪ್ರದೇಶ. ಸುತ್ತಲೂ ಬೆಟ್ಟಗಳಿಂದ ಆವೃತವಾಗಿರುವ ಪ್ರದೇಶದಲ್ಲಿ ನೆಲೆ ನಿಂತಿರುವುದೇ ಕಣಿವೆ ಆಂಜನೇಯ. ‌

ಹಾರೋಹಳ್ಳಿ ತಾಲ್ಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗುಳಿ ಬಳಿ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನವಿದೆ. ಇದು ಭಕ್ತರ ಆರಾಧ್ಯ ದೈವ. ನಿಷ್ಠೆಯಿಂದ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ ಈಡೇರುತ್ತದೆ ಎಂಬುದು ಜನರ ನಂಬಿಕೆ.

ದೇಗುಲ ಹಿನ್ನೆಲೆ: ಪಕ್ಕದ ಊರಿನ ವ್ಯಕ್ತಿಯೊಬ್ಬರು ಹಸು ಮೇಯುವಾಗ ತಪ್ಪಿಸಿಕೊಳ್ಳುತ್ತದೆ. ಎಷ್ಟೇ ಹುಡುಕಿದರೂ ಹಸು ಸಿಗುವುದಿಲ್ಲ. ಅಲ್ಲಿನ ಕಲ್ಲಿನ ವಿಗ್ರಹಕ್ಕೆ ಪ್ರತಿದಿನ ಪೂಜೆ ಮಾಡುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಅದರಂತೆ ಹಸು ಸಿಗುತ್ತದೆ. ಅದರಂತೆ ಆ ವ್ಯಕ್ತಿ ಗುಡಿ ನಿರ್ಮಿಸಿ ಪೂಜೆ ಮಾಡಲು ಆರಂಭಿಸಿಸುತ್ತಾರೆ ಎಂದು ಸ್ಥಳೀಯ ನಿವಾಸಿ ಸಿ.ಕೆ ನಂಜುಂಡಯ್ಯ ದೇವಸ್ಥಾನದ ಐಹಿತ್ಯ ಕುರಿತು ವಿವರಿಸಿದರು.

ನ್ಯಾಯದ ಕಟ್ಟೆ: ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಯಾವುದಾದರೂ ಸಮಸ್ಯೆ ಉಂಟಾದರೆ ಈ ದೇಗುಲಕ್ಕೆ ಬಂದು ಪರಿಹರಿಸಿಕೊಳ್ಳುತ್ತಾರೆ.

ವಿವಿಧ ಶುಭ ಕಾರ್ಯ: ದೇವಾಲಯದ ಸುತ್ತಮುತ್ತಲ 35ಕ್ಕೂ ಹೆಚ್ಚು ಗ್ರಾಮದ ಜನರು ಇಲ್ಲಿ ಮದುವೆ ಶುಭ ಕಾರ್ಯ ಮಾಡುತ್ತಾರೆ. ಜತೆಗೆ ರಾಜಕೀಯ ಸಭೆ, ಸಮಾರಂಭ ಕೂಡ ಹೆಚ್ಚಾಗಿ ನಡೆಯುತ್ತದೆ. ಚಿಕ್ಕದಾಗಿ ಸಮುದಾಯ ಭವನವೂ ಇದೆ. ನೀರಿಗಾಗಿ ಪಕ್ಕದಲ್ಲೇ ಕೆರೆ ಇದೆ. ಕುಡಿಯುವ ನೀರಿಗಾಗಿ ಸಿಹಿ ನೀರಿನ ಬಾವಿಯೂ ಇದೆ.

ಸಂತಾನ ಪ್ರಾಪ್ತಿ ನಂಬಿಕೆ: ಮದುವೆ ವಿಳಂಬ, ಮಕ್ಕಳಾಗದವರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹರಕೆ ತೀರಿಸುತ್ತಾರೆ.

ಸಾವಿರಾರು ವರ್ಷಗಳ ಹಿಂದೆ ಉದ್ಭವಗೊಂಡಿರುವ ಆಂಜನೇಯಮೂರ್ತಿಗೆ ಇಲ್ಲಿ ಚಿಕ್ಕದಾಗಿ ಗುಡಿ ಕಟ್ಟಿ ಪೂಜಿಸಲಾಗುತ್ತಿತ್ತು. ನಂತರ ವೀರೇಗೌಡನದೊಡ್ಡಿ ಮತ್ತು ಕೊಟ್ಟಗಾಳು ಗ್ರಾಮಸ್ಥರು ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ದೇವಾಲಯ ಅಭಿವೃದ್ಧಿ ಮಾಡಿದ್ದಾರೆ. ಜೀರ್ಣೋದ್ಧಾರ ಸಮಿತಿಯಲ್ಲಿ ಅಂಗರಹಳ್ಳಿ ಮಾಯಣ್ಣ ಎಂಬುವರು ಇದಕ್ಕೆ ಹೆಚ್ಚು ಶ್ರಮಿಸಿದ್ದಾರೆ.

ಈ ಸ್ಥಳವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿದರೆ ರಾಮನಗರ ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣ ಹಾಗೂ ಧಾರ್ಮಿಕ ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಯಾಗುತ್ತದೆ. ಇಲ್ಲಿಗೆ ಬರಲು ಬಿಡದಿ, ರಾಮನಗರ ಹಾಗೂ ಕನಕಪುರದಿಂದ ಉತ್ತಮ ರಸ್ತೆ ಸಂಪರ್ಕವಿದ್ದು ಬಸ್‌ ಸೌಲಣಭ್ಯವಿದೆ.

ಅರಣ್ಯ ಇಲಾಖೆ ಸಾರ್ವಜನಿಕ ಅನುಕೂಲಕ್ಕೆ ಕೆಲಸ ಮಾಡಲು ತೊಂದರೆ ಕೊಡುತ್ತಿದೆ. ದೇವಸ್ಥಾನ ಮತ್ತಷ್ಟು ಅಭಿವೃದ್ಧಿಪಡಿಸುವುದು ತೊಂದರೆಯಾಗುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು.
ಚಂದ್ರಶೇಖರ್, ಕೊಟ್ಟಗಾಳು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT