ಮಂಗಳವಾರ, ನವೆಂಬರ್ 19, 2019
29 °C
ಸೂಕ್ತ ಕ್ರಮಕ್ಕೆ ಕೋಡಿಹಳ್ಳಿ ಗ್ರಾ.ಪಂ ಸದಸ್ಯರ ಒತ್ತಾಯ

ಕೆರೆ ಅಂಗಳಕ್ಕೆ ಕೋಳಿ ತ್ಯಾಜ್ಯ

Published:
Updated:
Prajavani

ಕೋಡಿಹಳ್ಳಿ (ಕನಕಪುರ): ಇಲ್ಲಿನ ಕೆರೆ, ಹಳ್ಳ ಮತ್ತು ನದಿಗಳಿಗೆ ಕೋಳಿ ಹಾಗೂ ಕಸದ ತ್ಯಾಜ್ಯ ಸುರಿದು ಮಲಿನ ಮಾಡಲಾಗುತ್ತಿದೆ. ಇದನ್ನು ತಡಗಟ್ಟಬೇಕೆಂದು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ಇಲ್ಲಿನ ಕೋಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ವೆಂಕಟರಮಣೇಗೌಡ, ಚಲುವರಾಜು ಮಾತನಾಡಿ, ಪ್ಲಾಸ್ಟಿಕ್‌ ಮುಕ್ತಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.

ಕಟ್ಟಡ ತ್ಯಾಜ್ಯವನ್ನು ರಸ್ತೆ ಬದಿ ಕೆರೆಯಂಗಳದಲ್ಲಿ ಸುರಿಯಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ. ಇದನ್ನು ಮೀರಿದವರಿಗೆ ಕಾನೂನಿನಡಿ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್‌ ಮಾತನಾಡಿ, ಪಂಚಾಯಿತಿಯಿಂದ ಈಗಾಗಲೇ ಕಸ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಆದರೆ, ಜನ ಸ್ವಚ್ಛತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಜಾಗೃತಿ ಮೂಡಿಸುವುದು ಅವಶ್ಯ ಎಂದು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್‌ ಮಾತನಾಡಿ, ಪಂಚಾಯಿತಿ ಸಿಬ್ಬಂದಿಗೆ ಹಲವು ತಿಂಗಳಿನಿಂದ ವೇತನ ನೀಡಿಲ್ಲ. ತೆರಿಗೆ ಹಣದಲ್ಲಿ ಸಂಬಳ ನೀಡಬೇಕಿದೆ. ವಾರ್ಡ್‌ಗಳಲ್ಲಿ ಜನರು ಕಂದಾಯ ಪಾವತಿಸುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಸದಸ್ಯೆ ರಾಜೇಶ್ವರಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೆಲವರು ಸ್ವಂತ ಬಂಡವಾಳ ಹಾಕಿಕೊಂಡು ಚೆಕ್‌ ಡ್ಯಾಂ ಸೇರಿದಂತೆ ಹಲವು ಸಮುದಾಯ ಕಾಮಗಾರಿ ಮಾಡಿದ್ದಾರೆ. ಆದರೆ, ಕೂಲಿ ಮೊತ್ತ ಮಾತ್ರ ಬಂದಿದ್ದು ಸಾಮಗ್ರಿ ವೆಚ್ಚ ಬಂದಿಲ್ಲ. ಕೂಡಲೇ ನರೇಗಾದಲ್ಲಿ ಹಣ ಬಿಡುಗಡೆಯಾಗುವಂತೆ ಗಮನ ನೀಡಬೇಕೆಂದು  ಮನವಿ ಮಾಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌ ಮಾತನಾಡಿ, ನರೇಗಾ ಯೋಜನೆಯಲ್ಲಿ ಉತ್ತಮ ಸಾಧನೆ  ಆಗಿದೆ. ಅತಿ ಹೆಚ್ಚು ಚೆಕ್‌ ಡ್ಯಾಂ‌ಗಳು ನಿರ್ಮಾಣಗೊಂಡಿದ್ದು ಅಂತರ್ಜಲ ಹೆಚ್ಚಳವಾಗಿದೆ. ಹಣದ ‌‌ವಿಳಂಬದಿಂದ ಕಾಮಗಾರಿ ನಿರ್ಮಾಣ ಮಂದಗತಿಯಲ್ಲಿ ಸಾಗಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ.ಕೃಷ್ಣಮೂರ್ತಿ, ಪಂಚಾಯಿತಿ ಲೆಕ್ಕ ಸಹಾಯಕ ಮೋಹನ್‌, ಕರವಸೂಲಿಗಾರ ಶಿವಶಂಕರ್‌, ಸಿಬ್ಬಂದಿ ಇದ್ದರು.

ಪ್ರತಿಕ್ರಿಯಿಸಿ (+)