ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿ: ಮರಗಳ ಮಾರಣಹೋಮ

Last Updated 20 ಜೂನ್ 2021, 4:56 IST
ಅಕ್ಷರ ಗಾತ್ರ

ಮಾಗಡಿ: ಬೆಂಗಳೂರಿನ ನೈಸ್ ರಸ್ತೆಯಿಂದ ಮಾಗಡಿ ಮಾರ್ಗವಾಗಿ ಬೆಸ್ತರಪಾಳ್ಯ, ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ತಾಳೆಕೆರೆ ಹ್ಯಾಂಡ್‌ಪೋಸ್ಟ್‌ವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ನೂರಾರು ಮರಗಳು ನೆಲಕ್ಕುರುಳಿವೆ.

ಚತುಷ್ಪಥ ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆದಿದೆ. ಇದು ಪಟ್ಟಣದ ಜನರಿಗೆ ಭವಿಷ್ಯದಲ್ಲಿ ಕಂಟಕ ತರಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಎರಡು ಬದಿಗಳಲ್ಲಿ ಮಾವು, ಬೇವು, ಹುಣಸೆ, ಹಿಪ್ಪೆ, ಆಲ, ಹೊಂಗೆ, ಬೇಲ, ಅರಳಿ, ನೇರಳೆ, ಬೂರುಗ, ಗುಲ್‌ಮೊಹರ್‌ ಸೇರಿದಂತೆ ವಿವಿಧ ಜಾತಿಯ ಮರಗಳು
ಬೆಳೆದಿದ್ದವು.

ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡಿದ್ದ ಮರಗಳು ದಾರಿಹೋಕರಿಗೆ ನೆರಳು ನೀಡಿದ್ದವು. ರಸ್ತೆ ಬದಿಯಲ್ಲಿ ಬೆಳೆದಿದ್ದ ಹೆಮ್ಮರಗಳು ಹಳ್ಳಿಗಾಡಿನ ಜನತೆಗೆ ಹಣ್ಣು, ಕಾಯಿ, ಬೀಜ ಒದಗಿ ಆರ್ಥಿಕ ಅಭಿವೃದ್ಧಿಗೂ
ಸಹಕಾರಿಯಾಗಿದ್ದವು.

ಆಧುನಿಕತೆಯ ಭರಾಟೆಯಲ್ಲಿ ವ್ಯಾಪಾರೀಕರಣ ಮತ್ತು ಉದ್ಯಮಪತಿಗಳ ಅನುಕೂಲಕ್ಕಾಗಿ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ನಡೆದಿದೆ. ಕೊರೊನಾ ಸಂಕಟದ ನಡುವೆ ಮರಗಳನ್ನು ಕತ್ತರಿಸಿರುವುದರಿಂದ ತಾಲ್ಲೂಕಿನ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಈಗಾಗಲೇ ಬೆಟ್ಟ, ಗುಡ್ಡ, ಕಾಡುಮೇಡು, ಹಳ್ಳಕೊಳ್ಳ, ಕೆರೆಕಟ್ಟೆ, ಕಲ್ಯಾಣಿ, ಗೋಮಾಳಗಳ ಕಬಳಿಕೆಯಾಗಿದೆ. ಈಗ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ ಎಂಬುದು ಪರಿಸರವಾದಿಗಳ ದೂರು.

ಯಂತ್ರಗಳ ಸಹಾಯದಿಂದ ಕ್ಷಣಾರ್ಧದಲ್ಲಿ ಬೃಹತ್ ಮರಗಳನ್ನು ಕಡಿದು ಉರುಳಿಸಲಾಗಿದೆ. ಪಟ್ಟಣದ ಕೋಟೆಯ ದಕ್ಷಿಣ ದಿಕ್ಕಿನಲ್ಲಿ ಇರುವ ಕಂದಕದ ಪಕ್ಕದಲ್ಲಿ 35 ವರ್ಷಗಳಿಂದಲೂ ಪಕ್ಷಿಗಳು, ಪ್ರಾಣಿಗಳಿಗೆ ಆಶ್ರಯ ತಾಣವಾಗಿದ್ದ ಅರಳಿಮರ, ಬೂರುಗದ ಮರಗಳು ನೋಡು ನೋಡುತ್ತಿದ್ದಂತೆಯೇ ಧರೆಗೆ ಉರುಳಿದವು. ತುಂಡುಗಳಾಗಿ ಲಾರಿಯ ಮೇಲೇರಿದವು.

ಮರಗಳನ್ನು ಯಂತ್ರಗಳ ಸಹಾಯದಿಂದ ಕತ್ತರಿಸುತ್ತಿದ್ದಾಗ, ಮರದಲ್ಲಿ ಕಟ್ಟಿದ್ದ ಗೂಡುಗಳಲ್ಲಿ ಇದ್ದ ಪಕ್ಷಿಗಳ ಮರಿಗಳು ಮತ್ತು ಮೊಟ್ಟೆಗಳು ಧರೆಗೆ ಉರುಳಿದ್ದವು. ಇದನ್ನು ಗಮನಿಸಿದ ಪಕ್ಷಿಗಳು ದಿಕ್ಕಿಲ್ಲದಂತೆ ಆಕಾಶದಲ್ಲಿ ಹಾರಾಡುತ್ತಾ ವಂಶದ ಕುಡಿಗಳನ್ನು ಉಳಿಸಿಕೊಳ್ಳಲು ಚೀರಾಟ ನಡೆಸಿದ್ದವು.

ಪಟ್ಟಣದ ಹೊಸಪೇಟೆ ಸರ್ಕಲ್‌ನಿಂದ ಕೋಟೆರಾಮೇಶ್ವರ ನಗರ, ಬಿ.ಕೆ. ರಸ್ತೆ, ಸೋಮೇಶ್ವರ ಗುಡಿ, ಚಂದೂರಾಯನಹಳ್ಳಿ, ಕಲ್ಯಾ, ಹುಚ್ಚಹನುಮೇಗೌಡನ ಪಾಳ್ಯ, ಹೊಸಪಾಳ್ಯದವರೆಗೆ 15 ಕಿ.ಮೀ ರಸ್ತೆಯುದ್ದಕ್ಕೂ ಸೂರ್ಯನ ಬೆಳಕು ಭೂಮಿಗೆ ಬೀಳದೆ ಸದಾಕಾಲ ನೆರಳಿನಿಂದ ಕೂಡಿ, ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳನ್ನು ಕತ್ತರಿಸಿದ್ದಾರೆ. ರಸ್ತೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕಾದರೆ ಏನಿಲ್ಲವೆಂದರೂ 20 ವರ್ಷಗಳು ಬೇಕಾಗಬಹುದು ಎಂಬುದು ಜನರ ಅಭಿಪ್ರಾಯ.

‘ಗುಡೇಮಾರನಹಳ್ಳಿ ರಸ್ತೆ, ತಿರುಮಲೆ ರಸ್ತೆಗಳಲ್ಲಿ ಇದ್ದ ನೂರಾರು ಬೃಹತ್ ಗಾತ್ರದ ಮರಗಳನ್ನು ಕತ್ತರಿಸಿ 6 ವರ್ಷಗಳಾಯಿತು. ಅರಣ್ಯ ಇಲಾಖೆ ಅಥವಾ ಜನಪ್ರತಿನಿಧಿಗಳು ಒಂದೇ ಒಂದು ಸಸಿ ನೆಟ್ಟಿಲ್ಲ. ಇನ್ನು ಮುಂದೆ ಬಿ.ಕೆ. ರಸ್ತೆ ಬಿಕೋ ಎನ್ನಲಿದೆ. ಪಕ್ಷಿ, ಪ್ರಾಣಿಗಳ ಬದುಕಿಗೂ ಕಂಟಕ
ಎದುರಾಗಲಿದೆ’ ಎಂದು ಪರಿಸರವಾದಿ ರವಿಕಿರಣ್ ಅವರು ನೋವು
ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT