ಶನಿವಾರ, ನವೆಂಬರ್ 23, 2019
17 °C
ನಾಡಿನ ವೀರಶೈವ ಮಠಗಳಲ್ಲಿ ಪ್ರಮುಖ ಸ್ಥಾನ * ಸಮಾಜದಲ್ಲಿ ಸಾಮರಸ್ಯ ಮೂಡಿಸಿದ ಶರಣರು

ಅರಿವಿನ ಬೆಳಕು ಗುಮ್ಮಸಂದ್ರದ ರುದ್ರಮುನೇಶ್ವರ ಮಠ

Published:
Updated:
Prajavani

ಮಾಗಡಿ: ಹಲವು ಮಹತ್ವಗಳನ್ನು ಒಡಲ್ಲಲ್ಲಿ ಇರಿಸಿಕೊಂಡಿರುವ ಪುಣ್ಯಭೂಮಿ ಮಾಗಡಿ. ಧರ್ಮಪ್ರಭು ಕೆಂಪೇಗೌಡರ ಗುರುಮಠ ಗುಮ್ಮಸಂದ್ರದ ರುದ್ರಮುನೇಶ್ವರ ಮಠ ನಾಡಿನ ವೀರಶೈವ ಮಠಗಳಲ್ಲಿ ಪ್ರಮುಖ ಸ್ಥಾನ ಗಳಿಸಿದೆ. ಕಲ್ಯಾಣ ಕ್ರಾಂತಿ ನಂತರ ದಕ್ಷಿಣದೆಡೆಗೆ ಹರಿದು ಬಂದ ಶರಣ ಪರಂಪರೆ ಗುಮ್ಮಸಂದ್ರದಲ್ಲಿ ಗುರುಮಠ ಸ್ಥಾಪಿಸಿತು. ಅಂದು ಹಚ್ಚಿದ್ದ ಅರಿವಿನ ಜ್ಯೋತಿ ಇಂದಿಗೂ ಬೆಳಕು ನೀಡುತ್ತಿದೆ.

ಮಾತಿನಲ್ಲಿ ಸತ್ವವಿರಬೇಕು, ತತ್ವವಿರಬೇಕು. ಅದರಂತೆ ನಡೆದವರು ರುದ್ರಮುನೇಶ್ವರರು. ಮಾತೆಂಬುದು ಜ್ಯೋತಿರ್ಲಿಂಗ ಎಂಬ ಅಲ್ಲಮಪ್ರಭು ವಾಣಿ ಇಲ್ಲಿ ಸತ್ಯ ಮಾಡಿ ತೋರಿಸಿದ್ದಾರೆ. ಅವರು ಬರೀ ಮಾತಿನ ಕೋಶ ಆಗಿರಲಿಲ್ಲ. ಕೃತಿಕೋಶ, ಜೀವಂತ ವಿಶ್ವಕೋಶವಾಗಿದ್ದವರು. ಅವರ ಮಾತುಗಳ ಮೂಲ ಬುದ್ಧಿಯಲ್ಲ, ಹೃದಯ. ಆ ಮಾತುಗಳಲ್ಲಿ ಪ್ರತಿಭೆ ಮತ್ತು ಪಾಂಡಿತ್ಯದ ಜತೆಗೆ ಸಂಸ್ಕೃತಿ ವಿಚಾರವಿತ್ತು, ವಿವೇಕವಿತ್ತು. ಅಪಾರ ಜ್ಞಾನದ ತಪೋನಿಧಿಗಳಾಗಿದ್ದರು ಎಂದು ಮಠಾಧೀಶ ಚಂದ್ರಶೇಖರಸ್ವಾಮೀಜಿ ಮಠದ ಪರಂಪರೆ ಕುರಿತು ಮಾಹಿತಿ ಹಂಚಿಕೊಂಡರು.

ರುದ್ರಮುನೇಶ್ವರ ಸ್ವಾಮೀಜಿ ಕೆಂಪೇಗೌಡರಿಗೆ ಮಾರ್ಗದರ್ಶನ ನೀಡಿದ ಮಹನೀಯ ಗುರು. ಈ ಭಾಗದಲ್ಲಿ 67ಶರಣ ಮಠಗಳ ಸ್ಥಾಪನೆಗೆ ಕಾರಣರಾದವರು. ಶರಣೆ ಸೋಮ್ಮಕ್ಕನಿಗೆ ಧೀಕ್ಷೆ ನೀಡಿ ಮಠ ಸ್ಥಾಪನೆಗೆ ಶ್ರಮಿಸಿದರು. ಬಸವಾದಿ ಶರಣರು ಕಂಡುಕೊಂಡಿದ್ದ ಜೀವನ ಪ್ರೀತಿ ಎಲ್ಲರಿಗೂ ಹಂಚಿದರು. ಕೆಂಪೇಗೌಡ ಅವರನ್ನು ಬಾಲ್ಯದಿಂದಲೂ ಧರ್ಮಪ್ರಭುವನ್ನಾಗಿಸಿ ಲೋಕಕಲ್ಯಾಣಕ್ಕೆ ದುಡಿಯಲು ಅಣಿಗೊಳಿಸಿದ ಪ್ರಮುಖರು. 

ಇವರ ತತ್ವಾದರ್ಶ ಇತರರ ಬದುಕಿಗೆ ಪ್ರೇರಣೆ. ಮಠದಲ್ಲಿ ಸಕಲರಿಗೂ ಆಶ್ರಯ ಒದಗಿಸಿದ್ದರು. ಕಾಲು ನಡಿಗೆಯಲ್ಲಿ ಸುತ್ತಲಿನ ಪುರ, ವ್ಯಾಸರಾಯನಪಾಳ್ಯ, ಪರಂಗಿಚಿಕ್ಕನಪಾಳ್ಯ, ಸುಂಕುತಿಮ್ಮನಪಾಳ್ಯ ಹಳ್ಳಿಗಳಿಗೆ ಜೋಳಿಗೆ ಹಿಡಿದು ಹೋಗಿ ಭಿಕ್ಷೆ ಜತೆಗೆ ಅಕ್ಷರ ವಂಚಿತ ಸಮುದಾಯಗಳ ಮಕ್ಕಳನ್ನು ಕರೆತಂದು ಮಠದಲ್ಲಿ ಪೊರೆಯುತ್ತಿದ್ದರು. ಪ್ರೀತಿಯ ಸಿಂಚನಗೈದು ಅಕ್ಷರ, ಅರಿವು ಕಲಿಸುತ್ತಿದ್ದರು. ಅನ್ನದ ಮಾರ್ಗ ತೋರಿಸಿದ ಗುರುವಾಗಿ ಬಾಳಿದವರು.

ಅವರ ಶಿಷ್ಯರಾದ ಗಂಗಾಧರ ಶಿವಯೋಗಿ ಮಠದ ಉಸ್ತುವಾರಿ ವಹಿಸಿಕೊಂಡು 60ವರ್ಷ ಕಾಲ ಸಮಾಜದಲ್ಲಿ ಸಾಮರಸ್ಯ ಮೂಡಿಸಿ ಶರಣ ಪರಂಪರೆ ಮುಂದುವರಿಸಿದರು. ಅವರ ನಂತರ ಮಠದ ಪೀಠಾಧಿಪತಿ ಸಂಪಿಗೆ ಚಂದ್ರಶೇಖರಸ್ವಾಮೀಜಿ ಮಠದ ಏಳಿಗೆಗೆ ದುಡಿದರು. ಅವರು ಮಹಾನ್‌ ತತ್ವಜ್ಞಾನಿ ಆಗಿದ್ದರು. ಹುಟ್ಟಿನಿಂದ ಅಂಧರಾಗಿದ್ದರೂ ಕೂಡ ಆಧ್ಯಾತ್ಮಿಕ ಮಹತ್ವ ಅರಿತವರು. ಸರ್ಪಭೂಷಣ ಶಿವಯೋಗಿ ಕೈವಲ್ಯ ಕಲ್ಪವಲ್ಲರಿ ಮತ್ತು ಮುಪ್ಪಿನ ಷಡಕ್ಷರಿ ತತ್ವಚಿಂತನೆ ಕೇಳಿಸಿಕೊಂಡು ವ್ಯಾಖ್ಯಾನ ಮಾಡುತ್ತಿದ್ದರು. ಲಿಂಗ ಪೂಜಾನಿಷ್ಠರಾಗಿದ್ದ ಅವರು, 80ರ್ಷಗಳ ಕಾಲ ಜೀವಿಸಿದ್ದರು.

ಗುಮ್ಮಸಂದ್ರದ ರುದ್ರಮುನೇಶ್ವರ ಮಠದ ಆವರಣದಲ್ಲಿ ಮೂರು ತಲೆಮಾರುಗಳ ಸ್ವಾಮೀಜಿಗಳ ಗದ್ದುಗೆಗಳಿಗೆ ಇಂದಿಗೂ ಪೂಜೆ ನಡೆಯುತ್ತದೆ. ಶ್ರೀಮಠದ ನಾಲ್ಕನೆ ಪೀಠಾಧ್ಯಕ್ಷರಾಗಿ ಶರಣರಾದ ನಂಜಮ್ಮ ಸಿದ್ದಗಂಗಪ್ಪ ಅವರ 7ನೇ ಪುತ್ರ ಚಂದ್ರಶೇಖರ ಸ್ವಾಮೀಜಿ ಮಠದ ಪರಂಪರೆ ಈಗ ಮುಂದುವರಿಸಿದ್ದಾರೆ.

ಕಂಚುಗಲ್ ಬಂಡೇಮಠದ ಲಿಂಗೈಕ್ಷ ಶಿವರುದ್ರ ಸ್ವಾಮೀಜಿ ಶಿಕ್ಷಣ ಕಲಿತವರು. ಕನಕಪುರದ ದೇಗುಲಮಠ ಮತ್ತು ಸಿದ್ದಗಂಗಾಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಡಾ.ಶಿವಕುಮಾರಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಂಸ್ಕೃತ ವೇದಾಂತ ಅಭ್ಯಾಸ ಮಾಡಿದವರು. 1977ರಲ್ಲಿ ಗುಮ್ಮಸಂದ್ರ ಮಠದ ಪೀಠಾಧ್ಯಕ್ಷರಾದರು. ಶರಣರ ತತ್ವಾನಿಷ್ಠರಾಗಿದ್ದುಕೊಂಡು ಮನೆ – ಮನೆಗಳಲ್ಲಿ ಶಿವಾನುಭವ, ಅನುಭಾವದೊಂದಿಗೆ ಧಾರ್ಮಿಕ ಚಿಂತನಾ‌ಗೋಷ್ಠಿ ನಡೆಸಿಕೊಂಡು ಬರುತ್ತಿದ್ದಾರೆ. ಗ್ರಾಮವಾಸ್ತವ್ಯ ಮಾಡಿ ಭಕ್ತರ ಸಹಕಾರೊಂದಿಗೆ ಮಠದ ಜೀರ್ಣೋದ್ಧಾರ ಮಾಡಿಸಿದ್ದಾರೆ.

ಶರಣರು ಪ್ರತಿಯೊಬ್ಬರ ಹೃದಯದಲ್ಲಿ ದೇವರ ದರ್ಶನ ಪಡೆದವರು ಎಂಬುದನ್ನು ಮರೆಯಬಾರದು. ಶರಣರ ಮಠಗಳಲ್ಲಿ ಹಡುಕಿದರೆ ಅಕ್ಕಿ, ಬೇಳೆ, ಬೆಲ್ಲ, ರುದ್ರಾಕ್ಷಿ, ವಿಭೂತಿ ಸಿಕ್ಕಬಹುದು. ಕೆಲ ಆಶ್ರಮಗಳಲ್ಲಿ ಚಿನ್ನ– ಬೆಳ್ಳಿ ಸಿಗುತ್ತದೆ. ಮಾಧ್ಯಮಗಳು ಮೌಢ್ಯ ಬಿತ್ತಿದರೆ, ಮಠಗಳು ಅರಿವು ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಚಂದ್ರಶೇಖರಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದದರು.

ಪ್ರತಿಕ್ರಿಯಿಸಿ (+)