ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡೆನೂರು: ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಹಿರೇಭಾಸ್ಕರ ಅಣೆಕಟ್ಟು

ನೀರಿನ ಹರಿವು ಕಡಿಮೆಯಾಗಿರುವುದರಿಂದ ಗೋಚರ: ಲಿಂಗನಮಕ್ಕಿ ಒಡಲಲ್ಲಿ ಹುದುಗಿರುವ ಅಣೆಕಟ್ಟು
ಸುಕುಮಾರ್ ಎಂ.
Published 29 ಮೇ 2024, 6:04 IST
Last Updated 29 ಮೇ 2024, 6:04 IST
ಅಕ್ಷರ ಗಾತ್ರ

ಮಡೆನೂರು (ತುಮರಿ): ಶರಾವತಿ ಹಿನ್ನೀರಿನ ಒಡಲಲ್ಲಿ ಅವಿತಿರುವ ಹಿರೇಭಾಸ್ಕರ (ಮಡೆನೂರು) ಅಣೆಕಟ್ಟು ಗೋಚರಿಸುತ್ತಿದೆ.

ಅರ್ಧ ಶತಮಾನದಿಂದ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಿರುವ ‘ಹಿರೇಭಾಸ್ಕರ’ ಈಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ದರ್ಶನ ಭಾಗ್ಯ ಕರುಣಿಸುತ್ತಿದೆ. ಇದು ಜಿಲ್ಲಾ ಕೇಂದ್ರದಿಂದ 132 ಕಿ.ಮೀ ಹಾಗೂ ವಿಶ್ವವಿಖ್ಯಾತ ಜೋಗದಿಂದ 43 ಕಿ.ಮೀ. ದೂರದಲ್ಲಿದೆ.

ಬೇಸಿಗೆಯಲ್ಲಿ ಅಂಬಾರಗೋಡ್ಲು ಮಾರ್ಗದ ಮಡೆನೂರು ಅಭಯಾರಣ್ಯದ ಒಳಗೆ ಸಾಗಿದರೆ ಪುರಾತನ ಹಿರೇಭಾಸ್ಕರ ಅಣೆಕಟ್ಟು ಗೋಚರಿಸುತ್ತದೆ. ಮಳೆಗಾಲದಲ್ಲಿ ಇದು ಸಂಪೂರ್ಣ ನೀರಿನಲ್ಲಿ ಜಲಾವೃತವಾಗುತ್ತದೆ.

ಅಂದಾಜು 128 ಕಿ.ಮೀ. ಕ್ರಮಿಸಿ ಹೊನ್ನಾವರ ಸಮೀಪದ ಕಾಸರಗೋಡು ಎಂಬಲ್ಲಿ ಅರಬ್ಬಿ ಸಮುದ್ರ ಸೇರುವ ಮೊದಲು ಹಲವು ಉಪನದಿಗಳಿಂದ ಭೋರ್ಗರೆಯುವ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸುವ ಮುನ್ನ ಮಡೆನೂರಿನ ಸಮೀಪ ಹಿರೇಭಾಸ್ಕರ ಅಣೆಕಟ್ಟು ನಿರ್ಮಿಸಲಾಗಿತ್ತು. ಅದು ಈಗ ಇತಿಹಾಸದ ಪುಟ ಸೇರಿದೆ.

ಈ ಅಣೆಕಟ್ಟೆಗೆ 18 ಅಡಿ ವ್ಯಾಸದ 58 ಅಡಿ ಎತ್ತರದ ಒಟ್ಟು 11 ಸೈಫನ್‌ಗಳಿವೆ. ಸೈಫನ್‌ಗಳ ನಿರ್ಮಾಣಕ್ಕೆ ಆರ್‌ಸಿಸಿ ಬಳಸಲಾಗಿದೆ. ಮರದ ದಿಮ್ಮಿಗಳು ಸಿಕ್ಕಿಹಾಕಿಕೊಳ್ಳದಂತೆ ಸೈಫನ್‌ಗಳ ಬಾಯಿಗೆ ಥ್ಯಾಶರ‍್ಯಾಕ್ (ಜಾಲರಿ) ಬಳಸಲಾಗಿದೆ. ಪ್ರತಿ ಸೈಫನ್‌ನಿಂದ 12,750 ಕ್ಯುಸೆಕ್‌ ನೀರು ಹೊರಹೋಗುವಂತೆ ವಿನ್ಯಾಸಗೊಳಿಸಲಾಗಿದೆ.

4,000 ಅಡಿ ಉದ್ದದ ಅಣೆಕಟ್ಟು ಇದಾಗಿದ್ದು, ಜಲ ವಿದ್ಯುತ್ ಯೋಜನೆಯಲ್ಲಿ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಮೊದಲ ಅಣೆಕಟ್ಟು ಇದು ಎನ್ನಲಾಗಿದೆ. ಸಮುದ್ರ ಮಟ್ಟದಿಂದ ಅಂದಾಜು 1,820 ಅಡಿ ಎತ್ತರದಲ್ಲಿದೆ. ಈ ಅಣೆಕಟ್ಟು 1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಮುಳುಗಿ ಹೋಯಿತು. ಸದ್ಯ ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಕಾರಣ ಅಣೆಕಟ್ಟು ವೀಕ್ಷಣೆಗೆ ಲಭಿಸುತ್ತಿದೆ.

16 ವರ್ಷಕ್ಕೆ ಮುಳುಗಿತು ಅಣೆಕಟ್ಟು:

ಜಲಾಶಯವು ನಿರ್ಮಾಣಗೊಂಡು 16 ವರ್ಷಕ್ಕೆ ಮುಳುಗುವ ಪರಿಸ್ಥಿತಿ ಎದುರಾಗಿತ್ತು. ಈ ಜಲಾಶಯ 1947ರಲ್ಲಿ ಪೂರ್ಣಗೊಂಡಿತ್ತು. ಅದೇ ವರ್ಷ ಜಲಸಂಗ್ರಹಣೆ ಆರಂಭವಾಯಿತು. ಅದರ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಮಹಾತ್ಮ ಗಾಂಧಿ ಜಲವಿದ್ಯುದಾಗರ 1948ರ ಫೆಬ್ರುವರಿ 21ರಂದು ಶುರುವಾಗಿತ್ತು. ಇದು ಒಟ್ಟು 120 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಆದರೆ, ಮುಂದೆ 1956ರಲ್ಲಿ ಹಳೆ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಯಿತು.

ವಿದ್ಯುತ್ ಕೊರತೆ ನೀಗಿಸಲು ಸರ್ಕಾರ ಹೈಡ್ರೋ ಎಲೆಕ್ಟ್ರಿಕ್ ಕನ್‌ಸ್ಟ್ರಕ್ಷನ್ ಯೋಜನೆ (ಎಚ್‌ಇಸಿಪಿ) ಮೂಲಕ ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಲು ಉದ್ದೇಶಿಸಿದಾಗ ಲಿಂಗನಮಕ್ಕಿ ಅಣೆಕಟ್ಟಿನ ನಿರ್ಮಾಣ ಅನಿವಾರ್ಯವಾಯಿತು. 1964ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ನಂತರ ಹಿರೇಭಾಸ್ಕರ ಅದರಲ್ಲಿ ಸಂಪೂರ್ಣ ಮುಳುಗಡೆಯಾಗಿ ಅದರ ಮೇಲೆ ಸುಮಾರು 41 ಅಡಿ ನೀರು ತುಂಬಿತು. ಲಿಂಗನಮಕ್ಕಿಯ ಪೂರ್ಣಮಟ್ಟ ಸಮುದ್ರಮಟ್ಟದಿಂದ 1819 ಅಡಿ ಇದ್ದರೆ, ಹಿರೇಭಾಸ್ಕರ 1778 ಅಡಿ. ಈ ಕಾರಣಕ್ಕೆ ಹಿರೇಭಾಸ್ಕರ 1964ರಿಂದ ಪ್ರತಿವರ್ಷ ಮುಳುಗಡೆಯಾಗುತ್ತಲೆ ಇದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಹಿರೇಭಾಸ್ಕರ ಅಣೆಕಟ್ಟು ಹಾಗೂ ಆದರ ಸೈಫನ್‌ಗಳನ್ನು ಕಣ್ಣಾರೆ ಕಾಣಲು ಸಾಧ್ಯ. ಈ ಅಣೆಕಟ್ಟೆ ವರ್ಷದ 10 ತಿಂಗಳು ನೀರಿನಲ್ಲಿ ಮುಳುಗಿದ್ದರೂ ಕಳೆದ 8 ದಶಕಗಳಿಂದ ಹಾಳಾಗದೆ ತನ್ನ ಸೊಬಗನ್ನು ಉಳಿಸಿಕೊಂಡಿದೆ. ಇದರ ನಯನ ಮನೋಹರ ದೃಶ್ಯದ ದರ್ಶನ ನಾಡಿನ ಜನತೆಗೆ ಆಗಾಗ ದೊರಕುತ್ತಿದೆ.

ಲಿಂಗನಮಕ್ಕಿ ಜಲಾಶಯದ ಒಡಲಿನಲ್ಲಿರುವ ಹಿರೇಭಾಸ್ಕರ ಅಣೆಕಟ್ಟೆಯ ಸೊಬಗು 
ಲಿಂಗನಮಕ್ಕಿ ಜಲಾಶಯದ ಒಡಲಿನಲ್ಲಿರುವ ಹಿರೇಭಾಸ್ಕರ ಅಣೆಕಟ್ಟೆಯ ಸೊಬಗು 
ಹಿರೇಭಾಸ್ಕರ ಅಣೆಕಟ್ಟೆಯ ಬಳಿ ಸೂರ್ಯಾಸ್ತದ ಸುಂದರ ನೋಟ–ಪ್ರಜಾವಾಣಿ ಚಿತ್ರ/ ಸುಕುಮಾರ್ ಎಂ
ಹಿರೇಭಾಸ್ಕರ ಅಣೆಕಟ್ಟೆಯ ಬಳಿ ಸೂರ್ಯಾಸ್ತದ ಸುಂದರ ನೋಟ–ಪ್ರಜಾವಾಣಿ ಚಿತ್ರ/ ಸುಕುಮಾರ್ ಎಂ
ಹಿರೇಭಾಸ್ಕರ ಅಣೆಕಟ್ಟೆ ಬಳಿ ಸೂರ್ಯಾಸ್ತದ ಸುಂದರ ನೋಟ–ಪ್ರಜಾವಾಣಿ ಚಿತ್ರ/ ಸುಕುಮಾರ್ ಎಂ
ಹಿರೇಭಾಸ್ಕರ ಅಣೆಕಟ್ಟೆ ಬಳಿ ಸೂರ್ಯಾಸ್ತದ ಸುಂದರ ನೋಟ–ಪ್ರಜಾವಾಣಿ ಚಿತ್ರ/ ಸುಕುಮಾರ್ ಎಂ

ಅಣೆಕಟ್ಟು ವೀಕ್ಷಣೆಗೆ ನಿರ್ಬಂಧ

ಮಡೆನೂರು ಅಣೆಕಟ್ಟು ಸಾಕಷ್ಟು ಶಿಥಿಲಾವ್ಯವಸ್ಥೆ ತಲುಪಿದ್ದು ಕಳೆದ ವರ್ಷವೇ ಅಣೆಕಟ್ಟು ವೀಕ್ಷಣೆಗೆ ಅರಣ್ಯ ಇಲಾಖೆಯಿಂದ ನಿರ್ಬಂಧ ಹೇರಲಾಗಿದೆ. ವನ್ಯಜೀವಿ ಪರಿಸರ ವಲಯದಲ್ಲಿ ಅತಿಕ್ರಮ ಪ್ರವೇಶದಿಂದ ಸಹಜ ಪರಿಸರಕ್ಕೆ ಧಕ್ಕೆಯಾಗುವ ಆತಂಕದವಿದೆ. ಜತೆಗೆ ಭೌತಿಕ ಅರಣ್ಯ ನಾಶ ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಹಿನ್ನೆಲೆಯಲ್ಲಿ ಹಿರೇಬಾಸ್ಕರ ಅಣೆಕಟ್ಟು ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ನಿಯಮ ಮೀರಿ ಅತಿಕ್ರಮ ಪ್ರವೇಶ ಮಾಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 27ರ  ಉಲ್ಲಂಘನೆಯಾಗಲಿದ್ದು ಅತಿಕ್ರಮಣ ಪ್ರವೇಶ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಧ್ಯಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕಾರ್ಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT