ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಹೋಳಿ ಹಬ್ಬಕ್ಕೆ ಭರ್ಜರಿ ಸಿದ್ಧತೆ

ಭದ್ರಾವತಿ: ಭೂತನಗುಡಿ ಕಾಮಣ್ಣನಿಗೆ 60ರ ಹರೆಯ
ಕಿರಣ್ ಕುಮಾರ್
Published 26 ಮಾರ್ಚ್ 2024, 5:58 IST
Last Updated 26 ಮಾರ್ಚ್ 2024, 5:58 IST
ಅಕ್ಷರ ಗಾತ್ರ

ಭದ್ರಾವತಿ : ನಗರದ ಭೂತನ ಗುಡಿ ಕಾಮಣ್ಣನಿಗೆ 60ರ ಹರೆಯ. ಕಳೆದ 6 ದಶಕಗಳಿಂದಲೂ ಪ್ರತಿ ವರ್ಷ ಬಿಡದೇ ಇಲ್ಲಿ ಕಾಮಣ್ಣನ ಪ್ರತಿಷ್ಠಾಪಿಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ನೇತಾಜಿ ಆಟೊ ಯುವಕರ ಸಂಘವು ಇದಕ್ಕೆ ಚಾಲನೆ ನೀಡಿತ್ತು. ಈಗ ಅದನ್ನು ಭಾವಸಾರ ಕ್ಷತ್ರಿಯ ಸಮಾಜದವರು ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿ ವರ್ಷ ಕಾಮಣ್ಣನ ಪ್ರತಿಷ್ಠಾಪಿಸಿ, ಸುತ್ತಮುತ್ತಲ ರಸ್ತೆ ಬೀದಿಗಳಲ್ಲಿ ತಳಿರು ತೋರಣ, ಅಲಂಕೃತ ದೀಪಗಳು, ಗೀತೆಗಳ ಗಾಯನ ನಡೆಸಲಾಗುತ್ತದೆ. ಪ್ರತಿ ದಿನವೂ ಭಿನ್ನ ಭಿನ್ನ ವೇಷದಲ್ಲಿ ಕಾಮಣ್ಣನ ಶೃಂಗರಿಸುವುದು ಇಲ್ಲಿನ ವಿಶೇಷ. ಕಚ್ಚೆ-ಪಂಚೆ, ಕೋಟು ಸೂಟು, ಟೀ ಶರ್ಟ್- ಜೀನ್ಸ್, ಪೇಟ, ಕಪ್ಪು ಕನ್ನಡಕ ಸೇರಿದಂತೆ ವಿವಿಧ ಉಡುಪುಗಳಲ್ಲಿ ಕಾಮಣ್ಣನ ಸಿಂಗರಿಸಲಾಗುತ್ತದೆ.

ಮೂರನೇ ದಿನ ಮನರಂಜನಾ ಕಾರ್ಯಕ್ರಮಗಳ ಏರ್ಪಡಿಸಲಾಗುತ್ತದೆ. ಮಾರನೇ ದಿನ ಕಾಮಣ್ಣನ ಪ್ರತಿಮೆ ಸುಂದರವಾಗಿ ಶೃಂಗರಿಸಿ, ಪಲ್ಲಕ್ಕಿ ಸಿದ್ಧಪಡಿಸಿ, ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಕೂರಿಸುತ್ತಾರೆ. ಕಾಮಣ್ಣನ ಮುಂದೆ ಮಂಗಳವಾದ್ಯಗಳ ಊದುತ್ತಾರೆ. ಅಲ್ಲದೆ ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿ ಗಂಜಳ ಎರಚುತ್ತಾರೆ.

ನಗರದ ಮುಖ್ಯ ರಸ್ತೆಗಳಲ್ಲಿ ಡೊಳ್ಳು ಕುಣಿತ, ಚಿತ್ರಗೀತೆಗಳು, ಡಿಜೆ ವಾದ್ಯ, ಮೇಳಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. ಈ ಆಚರಣೆ ಮಕ್ಕಳಿಂದ ದೊಡ್ಡವರವರೆಗೂ ಮಾಡುತ್ತಾರೆ.

’ಕಾಮಣ್ಣನ ದಹಿಸಿದ ನಂತರ ಮಡಿಕೆ ಒಡೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಏರಿ ಮೇಲೆ ಕಟ್ಟಿರುವ ಮಡಿಕೆಗೆ ಹೊಡೆಯುವಾಗ ಮೇಲಿಂದ ಮೇಲೆ ಬಣ್ಣದ ನೀರು ಎರಚಲಾಗುತ್ತದೆ. ಕಡೆಯದಾಗಿ ಮಡಿಕೆ ಹೊಡೆಯುವುದರೊಂದಿಗೆ ಬಣ್ಣದ ಹಬ್ಬ ಕೊನೆಗೊಳ್ಳುತ್ತದೆ‘ ಎಂದು ಸಮಿತಿ ಮುಖಂಡ ರಾಜಿ ತಿಳಿಸಿದರು.

’ಹೋಳಿ ಹಬ್ಬ ಊರಿನಲ್ಲಿ ವಾರದ ಹಬ್ಬ. ನಮ್ಮ ಚಿಕ್ಕ ಊರಿನಲ್ಲಿ ಹೋಳಿ ಹಬ್ಬ ಅದ್ಧೂರಿಯಾಗಿ ಆಗಿದೆ ಅಂತ ನನಗೆ ಗೊತ್ತು. ನಾನು 20 ವರ್ಷಗಳ ಹಿಂದಿನ ಆಚರಣೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ಅದು ಇನ್ನೂ ನನ್ನ ಮನಸ್ಸಲ್ಲಿ ತಾಜಾ ಆಗಿದೆ‘ ಎಂದು ಭೂತನ ಗುಡಿ ನಿವಾಸಿ, ಹಾಸನದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಕ್ಯ ಕುಮಾರ್ ಹೇಳುತ್ತಾರೆ.

ಕಾಮನ ಹಬ್ಬ ಎರಡು ಹಂತಗಳಲ್ಲಿ ಆಚರಣೆ..

ವಿಷಯವೆಂದರೆ ಕಾಮಣ್ಣನ ಸುಡಲು ಕದ್ದು ತಂದ ವಸ್ತುಗಳ ಉಪಯೋಗಿಸುವುದು ಪ್ರತೀತಿ. ಹಿತ್ತಲಲ್ಲಿ ಉಳಿದಿರುವ ಬಟ್ಟೆಯಾಗಿರಲಿ ಅಥವಾ ಉರುವಲು ಇರಲಿ. ಪ್ರತಿ ಮನೆಯಿಂದ ವಸ್ತುಗಳನ್ನು ಕದ್ದು ತಂದ ನಂತರ ಅವುಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಇರಿಸುತ್ತಾರೆ. ಇದು ವಾಡಿಕೆ ಎಂದು ಭೂತನ ಗುಡಿ ನಿವಾಸಿ 50 ವರ್ಷದ ಶಂಕರ್ ಅನುಭವ ಹಂಚಿಕೊಂಡರು.

‘ನಿಜವಾಗಲೂ ಕಣ್ಣಿಗೆ ಹಬ್ಬ, ಕಾಮಣ್ಣನ ಹಬ್ಬವಾಗಿತ್ತು ಮತ್ತು ನಾವೆಲ್ಲರೂ ಮುಂದಿನ ವರ್ಷಕ್ಕಾಗಿ ಕಾತುರದಿಂದ ಕಾಯುತ್ತಿದ್ದೆವು. ಶೀಘ್ರದಲ್ಲೇ ಬರಲಿ. ಈ ಹಬ್ಬ ಸುಮಾರು 60ಕ್ಕೂ ಹೆಚ್ಚು ವರ್ಷ ಕಳೆದಿದೆ‘ ಎಂದು ಭೂತನಗುಡಿ ನಿವಾಸಿ ಮಂಜು ಯುವಕರಿಗೆ ತಿಳಿಸಿದರು.

ಆರೋಕ್ಯ ಕುಮಾರ್
ಆರೋಕ್ಯ ಕುಮಾರ್
ಶಂಕರ್
ಶಂಕರ್

ಏನಿದು ಕಾಮಣ್ಣ ಹಬ್ಬ.. ಅನಂಗ ಅಂಗಜ ಅಲಹಂಬ ಮಾರ ಮನ್ಮಥ ಮನಸಿಜ ಮದನ ಕಾಮ ಕಬ್ಬುವಿಲ್ಲ ಪ್ರದ್ಯುಮ್ನ – ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಮನ್ಮಥನು ಭಾರತೀಯ ಪ್ರೇಮಿಗಳಿಗೆ ಬಹುಪ್ರಿಯನಾದ ದೇವ. ಉಲ್ಲಾಸ ಚೈತನ್ಯ ಕಲಾತ್ಮಕತೆ ರಸಿಕತೆ ಸಾಹಸ ಪ್ರೀತಿ-ಪ್ರೇಮ ಸಂತಾನಪ್ರಾಪ್ತಿ ಲೈಂಗಿಕತೃಪ್ತಿ ಮುಂತಾದ ಬದುಕಿನ ಎಲ್ಲ ಆಸೆಗಳ ಆಯಾಮಗಳಿಗೆ ಇವನೇ ಒಡೆಯ. ಅಂಥ ಕಾಮನ ಸ್ಮರಣೆ ಮಾಡುವ ಹಬ್ಬವೇ ಹೋಳಿಹುಣ್ಣಿಮೆ. ಕಾಮನ ಹಬ್ಬವೆಂದೂ ರತಿ-ಮನ್ಮಥರ ಹಬ್ಬವೆಂದೂ ಕರೆಯಲ್ಪಡುವ ಹೋಳಿಹಬ್ಬವು ಅಭೂತಪೂರ್ವ ಪ್ರೇಮಿಗಳ ದಿನ. ಈ ಹಬ್ಬ ಪೌರ್ಣಿಮೆಯ ದಿನ ಬರುತ್ತದೆ. ಪೂರ್ಣ ಚಂದ್ರನು ಕಲಾಧರ ಅವನು ರಸಿಕತೆಗೆ ಹಾಗೂ ರಾಸಲೀಲೆಗೆ ಪ್ರೇರಕನೂ ಪೂರಕನೂ ಆಗಿದ್ದಾನೆ. ಶ್ರೀಕೃಷ್ಣ-ರಾಧೆಯರು ಈ ಹಬ್ಬದಲ್ಲಿ ಓಕಳಿ ಆಡುತ್ತಿದ್ದರೆಂದು ಭಾಗವತದಲ್ಲಿ ಪ್ರಸ್ತಾಪವಾಗಿದೆ. ಕನಕದಾಸರು ಅವರ ‘ಮೋಹನತರಂಗಿಣಿ’ ಕಾವ್ಯದಲ್ಲಿ ಕೃಷ್ಣಾಗಮನದಿಂದ ಸಂತಸಗೊಂಡ ಕೃಷ್ಣನ ಸತಿಯರು ಕೋಲಾಟದ ಮೂಲಕ ಹೋಳಿ ಹಬ್ಬವನ್ನು ಆಚರಿಸುತ್ತಾರೆಂದು ಅಳಿಯ ದೇವಸ್ಥಾನದ ಅರ್ಚಕ ಸುಬ್ಬು ವರ್ಣಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT