ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಕೆರೆ ಅತಿಕ್ರಮಣ ತೆರವಿಗೆ ಅಭಿಯಾನ ಆರಂಭವಾಗಲಿ

ಮಲೆನಾಡಿನ ಕೆರೆ, ಕಾನು ಸಂರಕ್ಷಣಾ ಸಮಾವೇಶದಲ್ಲಿ ಹಕ್ಕೊತ್ತಾಯ
Published 3 ನವೆಂಬರ್ 2023, 21:34 IST
Last Updated 3 ನವೆಂಬರ್ 2023, 21:34 IST
ಅಕ್ಷರ ಗಾತ್ರ

ಸೊರಬ (ಶಿವಮೊಗ್ಗ): ‘ಕೆರೆಗಳ ಅತಿಕ್ರಮಣ ತೆರವು ಪ್ರಕ್ರಿಯೆ ಪೂರ್ಣಗೊಳಿಸಲು ಆಯಾ ಜಿಲ್ಲಾಡಳಿತ ಕಾಲಮಿತಿಯಲ್ಲಿ ಅಭಿಯಾನ ಆರಂಭಿಸಬೇಕು. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿರುವ 3,000 ಕೆರೆ ಅಭಿವೃದ್ಧಿ ಸಂಘಗಳಿಗೆ ಜೀವ ತುಂಬಬೇಕು‘ ಎಂದು ಸೊರಬ ತಾಲ್ಲೂಕಿನ ಉದ್ರಿ ಗ್ರಾಮದಲ್ಲಿ ಶುಕ್ರವಾರ ನಡೆದ ಮಲೆನಾಡಿನ ಕೆರೆ, ಕಾನು ಸಂರಕ್ಷಣಾ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು.

ಮಲೆನಾಡಿನ ಕೆರೆಗಳ ಜಲಾನಯನ ಪ್ರದೇಶದಲ್ಲಿರುವ ಅರಣ್ಯಗಳಿಗೆ ರಕ್ಷಣಾ ಕವಚ ತೊಡಿಸಲು ಅರಣ್ಯ ಇಲಾಖೆ ವಿಶೇಷ ಯೋಜನೆ ಪ್ರಕಟಿಸಬೇಕು ಎಂಬ ನಿರ್ಣಯವನ್ನೂ ಇದೇ ವೇಳೆ ಕೈಗೊಳ್ಳಲಾಯಿತು.

ಸರ್ಕಾರ ಕೆರೆ ಪುನಶ್ಚೇತನ ಯೋಜನೆಯನ್ನು ಸುಸ್ಥಿರವಾಗಿ ರೂಪಿಸಲು ಸಾರ್ವಜನಿಕ ಸಹಭಾಗಿತ್ವದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ದೇವರಕಾಡು, ಮಿರಿಸ್ಟಿಕಾ ಸ್ವಾಂಪ್ (ರಾಮಪತ್ರೆ ಜಡ್ಡಿ) ಗಳಂಥ ಸೂಕ್ಷ್ಮ ಅರಣ್ಯಗಳನ್ನು ಜೈವಿಕ ಪಾರಂಪರಿಕ ಪ್ರದೇಶ ಎಂದು ಜೀವವೈವಿಧ್ಯ ಸಮಿತಿಗಳನ್ನು ಗುರುತಿಸಿ ಮಾನ್ಯತೆ ನೀಡಬೇಕು.

ಕೆರೆ ಅಭಿವೃದ್ಧಿ ಪ್ರಾಧಿಕಾರ, ಜೌಗು ಪ್ರದೇಶ ರಕ್ಷಣಾ ಪ್ರಾಧಿಕಾರಗಳಿಗೆ ಬಲ ನೀಡಬೇಕು. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ನಡುವೆ ಸಮನ್ವಯ ಹೆಚ್ಚಿಸಬೇಕು. ಜೌಗು ಭೂಮಿ ಸಂರಕ್ಷಣೆ ಬಗ್ಗೆ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ಮತ್ತು ಅನುದಾನ ನೀಡಬೇಕು.

ಮಲೆನಾಡಿನ ಜಲಮೂಲ, ಕೆರೆ, ಹಳ್ಳಗಳು ಅತಿಯಾದ ಕ್ರಿಮಿನಾಶಕ ಬಳಕೆಯಿಂದ ತೀವ್ರ ಮಾಲಿನ್ಯಕ್ಕೆ ಒಳಗಾಗುತ್ತಿವೆ. ಅತಿಯಾದ ನಿಷೇಧಿತ ಕ್ರಿಮಿನಾಶಕ ಬಳಕೆಗೆ ಸರ್ಕಾರ ಕಡಿವಾಣ ಹಾಕಬೇಕು. ಗುಡವಿ ಪಕ್ಷಿಧಾಮವಿರುವ ಕೆರೆಯ ಸಂರಕ್ಷಣೆಗೆ ಅರಣ್ಯ ಇಲಾಖೆ ವಿಶೇಷ ಯೋಜನೆ ಜಾರಿಗೊಳಿಸಬೇಕು.

ಮಲೆನಾಡಿನಲ್ಲಿ ಸ್ಥಗಿತವಾಗಿರುವ ಕಾನು ಸಂರಕ್ಷಣಾ ಯೋಜನೆ ಪುನಃ ಆರಂಭಿಸಬೇಕು. ಕಾನು ಅರಣ್ಯ ಅಭಿವೃದ್ಧಿ ಯೋಜನೆಯನ್ನು ಗ್ರಾಮ ಅರಣ್ಯ ಸಮಿತಿಗಳ ಸಹಭಾಗಿತ್ವದಲ್ಲಿ ಜಾರಿ ಮಾಡಬೇಕು. ಮಲೆನಾಡಿನ ಲಕ್ಷಾಂತರ ಎಕರೆ ಗ್ರಾಮ ನೈಸರ್ಗಿಕ ಭೂಮಿಗಳ (ಕೆರೆ, ಗೋಮಾಳ, ಕಾನುಬೆಟ್ಟ) ರಕ್ಷಣೆಗೆ ಗ್ರಾಮ ಪಂಚಾಯಿತಿಗಳು ಮುಂದಾಗಬೇಕು. ಇದಕ್ಕಾಗಿ ಜೀವವೈವಿಧ್ಯ ಸಮಿತಿಗಳನ್ನು ಚುರುಕುಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT