ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಪೋಕ್ಸೊ ಪ್ರಕರಣ ಹೆಚ್ಚಳ: 3 ವರ್ಷಗಳಲ್ಲಿ 517 ಪ್ರಕರಣ ದಾಖಲು

ಮಲ್ಲಪ್ಪ ಸಂಕೀನ್
Published 20 ಮೇ 2024, 7:38 IST
Last Updated 20 ಮೇ 2024, 7:38 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 517 ಪೋಕ್ಸೊ ಪ್ರಕರಣ ದಾಖಲಾಗಿವೆ.

ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಏರುಗತಿಯಲ್ಲಿ ಸಾಗುತ್ತಿರುವುದು ಹಾಗೂ ಕಳೆದ 3 ವರ್ಷದಿಂದ ಪ್ರಕರಣ ಹೆಚ್ಚಳಗೊಂಡಿರುವುದು ಪಾಲಕರನ್ನು ಚಿಂತೆಗೀಡು ಮಾಡಿದೆ. 

2021–22ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 154 ಪೋಕ್ಸೊ ಪ್ರಕರಣ ದಾಖಲಾಗಿವೆ. 2022–23ರಲ್ಲಿ 156 ಪ್ರಕರಣ ಹಾಗೂ 2023–24ನೇ ಸಾಲಿನಲ್ಲಿ 207 ಪ್ರಕರಣ ದಾಖಲಾಗಿವೆ.

ಇದಲ್ಲದೇ 2024–25ನೇ ಸಾಲಿನಲ್ಲಿ ಏಪ್ರಿಲ್‌ ತಿಂಗಳಲ್ಲಿಯೇ ಒಟ್ಟು 28 ಪ್ರಕರಣ ದಾಖಲಾಗಿವೆ. ಇದರಲ್ಲಿ ಬಾಲಕಿಯರೇ ಹೆಚ್ಚು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.

ಈಗ ದಾಖಲಾಗಿರುವ ಪ್ರಕರಣಗಳಲ್ಲಿ ಬಹುತೇಕ ಕಾಲೇಜು ಮೆಟ್ಟಿಲು ಹತ್ತಿರುವ ಬಾಲಕಿಯರೇ ಹೆಚ್ಚಾಗಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಬಾಲಕಿಯರು ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಕೆಲವರು ನಾನಾ ರೀತಿಯ ಆಸೆ ಆಮಿಷಗಳನ್ನು ಒಡ್ಡಿ ಕೃತ್ಯ ಎಸಗಿದ್ದಾರೆ. ಕೆಲವು ಕಡೆ ಅಕ್ಕಪಕ್ಕದ ಮನೆಯವರು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. 

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ಕಾಯಿದೆ ಕುರಿತಂತೆ ಶಾಲೆ–ಕಾಲೇಜು ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರಿವು ಮೂಡಿಸಲಾಗುತ್ತದೆ. ಆದರೂ, ಪ್ರಕರಣಗಳು ಹೆಚ್ಚುತ್ತಿರುವುದು ಆಘಾತಕಾರಿಯಾಗಿದೆ. 

‘ಮಕ್ಕಳ ಕೈಗೆ ಯಾವುದೇ ಕಾರಣಕ್ಕೂ ಪಾಲಕರು ಮೊಬೈಲ್‌ ಕೊಡಬಾರದು. ಇಂಟರ್‌ನೆಟ್ ವೀಕ್ಷಣೆ ವೇಳೆ ಅವರ ಅರಿವಿಲ್ಲದೇ ಅಶ್ಲೀಲ ಚಿತ್ರಗಳು ಬರುತ್ತವೆ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಮಕ್ಕಳ ಮೇಲೆ ಪಾಲಕರು ಸದಾ ನಿಗಾವಹಿಸಬೇಕು. ಅವರ ಚಲನವಲನ ಗಮನಿಸಬೇಕು. ತಂದೆ–ತಾಯಿ ಮತ್ತು ಪೋಷಕರು ಗೆಳೆಯರಂತೆ ಮಕ್ಕಳೊಂದಿಗೆ ವರ್ತಿಸಬೇಕು. ಇದರಿಂದಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಬಹುದು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್‌.ಮಂಜುನಾಥ ಹೇಳುತ್ತಾರೆ. 

ಪೋಕ್ಸೊ ಪ್ರಕರಣ ತಡೆಗಟ್ಟಲು ಇನ್ನಷ್ಟು ಬಿಗಿಯಾದ ಕಾನೂನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಇದಲ್ಲದೇ ದೌರ್ಜನ್ಯ ಎಸಗುವ ಆರೋಪಿಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆ ಆಗಬೇಕಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT