ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ನಿರ್ವಹಣೆ ಅನುದಾನ ದಿನಕ್ಕೆ ₹15.63

ಸ್ವಚ್ಛತೆ ಜೊತೆಗೆ ಕಟ್ಟಡ ದುರಸ್ತಿ, ವಿದ್ಯುತ್‌, ನೀರಿನ ಬಿಲ್‌ ಒಳಗೊಂಡ ಮೊತ್ತ!
ವೆಂಕಟೇಶ ಜಿ.ಎಚ್
Published 30 ಡಿಸೆಂಬರ್ 2023, 6:57 IST
Last Updated 30 ಡಿಸೆಂಬರ್ 2023, 6:57 IST
ಅಕ್ಷರ ಗಾತ್ರ

ಶಿವಮೊಗ್ಗ: ಒಟ್ಟು 50 ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡುವ ನಿರ್ವಹಣಾ ವೆಚ್ಚ ದಿನಕ್ಕೆ ₹15.63 ಮಾತ್ರ.

ಶಾಲೆಯ ವಿದ್ಯುತ್, ನೀರಿನ ಬಿಲ್ ಜೊತೆಗೆ ಸುಣ್ಣ-ಬಣ್ಣ ಹೊಡೆಸುವುದು, ಶಾಲಾ ಕಟ್ಟಡದ ದುರಸ್ತಿ, ಸ್ವಚ್ಛತೆಗೂ ಈ ಮೊತ್ತವನ್ನೇ ಬಳಸಬೇಕಿದೆ. ವಾರದ ಹಿಂದಷ್ಟೇ ವಿದ್ಯುತ್, ನೀರು ಉಚಿತವಾಗಿ ಕೊಡಲು ಸರ್ಕಾರ ಆದೇಶಿಸಿದೆ.

ಶಾಲೆಯ ನಿರ್ವಹಣೆಗೆ ಸರ್ಕಾರ ಕೊಡುವ ವಾರ್ಷಿಕ ಅನುದಾನ, ತಿಂಗಳ ಖರ್ಚಿಗೂ ಸಾಲುವುದಿಲ್ಲ. ಜೊತೆಗೆ ಸ್ವಚ್ಛತೆಗೆ ‘ಡಿ’ ಗ್ರೂಪ್ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡುತ್ತಿಲ್ಲ. ಆದ್ದರಿಂದ, ಅನಿವಾರ್ಯವಾಗಿ ಬಹಳಷ್ಟು ಶಾಲೆಗಳಲ್ಲಿ ಕಸ ಗುಡಿಸಲು ಮತ್ತು ಶೌಚಾಲಯದ ಸ್ವಚ್ಛತೆಗಾಗಿ ವಿದ್ಯಾರ್ಥಿಗಳನ್ನೇ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲೆಯ ಶಿಕ್ಷಕರು ಹೇಳುತ್ತಾರೆ. 

ಭದ್ರಾವತಿ ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಸ್ವಚ್ಛತೆಗೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಂಕರಪ್ಪ ಅವರನ್ನು ಅಮಾನತುಗೊಳಿಸಿದ್ದರಿಂದ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ಸರ್ಕಾರ ಸದ್ಯ 1ರಿಂದ 50 ವಿದ್ಯಾರ್ಥಿಗಳಿರುವ ಶಾಲೆಗೆ ವಾರ್ಷಿಕ ₹ 5,706 ಅನುದಾನ ಕೊಡುತ್ತಿದೆ.
50ರಿಂದ 100 ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗೆ ₹ 7,989 (ದಿನವೊಂದಕ್ಕೆ ₹21.88) ಹಾಗೂ 100ರಿಂದ 500 ಮಕ್ಕಳು ಓದುವ ಶಾಲೆಗೆ ₹ 9,416 (ದಿನವೊಂದಕ್ಕೆ ₹ 25.79) ಕೊಡುತ್ತಿದೆ.

‘ಈ ಹಣ ಶಾಲೆಗೆ ಭೇಟಿ ಕೊಡುವ ಮೇಲಧಿಕಾರಿಗಳ ಊಟೋಪಚಾರಕ್ಕೇ ಸಾಲುವುದಿಲ್ಲ. ಇದನ್ನು ಖರ್ಚು ಮಾಡಲು ಶಾಲಾಭಿವೃದ್ಧಿ ಸಮಿತಿಯ (ಎಸ್‌ಡಿಎಂಸಿ) ಅನುಮೋದನೆ ಪಡೆಯಬೇಕು. ಕೆಲವು ಕಡೆ ಎಸ್‌ಡಿಎಂಸಿ ಹಾಗೂ ಮುಖ್ಯ ಶಿಕ್ಷಕರ ನಡುವಿನ ಸಮನ್ವಯತೆ ಕೊರತೆ ಇದೆ. ಆದ್ದರಿಂದ ಈ ಹಣ ಪಡೆಯಲು ಹರಸಾಹಸಪಡಬೇಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತೀರ್ಥಹಳ್ಳಿ ತಾಲ್ಲೂಕಿನ ಶಾಲೆಯೊಂದರ ಮುಖ್ಯ ಶಿಕ್ಷಕರೊಬ್ಬರು ತಿಳಿಸಿದರು.

‘ಇಲಾಖೆ ನಿರ್ವಹಣಾ ಅನುದಾನ ಬಿಡುಗಡೆ ಮಾಡುವುದು ವರ್ಷಗಟ್ಟಲೇ ವಿಳಂಬವಾಗುತ್ತಿದೆ. ಶಾಲೆಯ ನಿರ್ವಹಣೆಗೆ ಶಿಕ್ಷಕರೇ ಜೇಬಿನಿಂದ ಹಣ ನೀಡಬೇಕಾಗುತ್ತದೆ. ಸರ್ಕಾರ ಕೊಡುವ ಬಿಡಿಗಾಸಿನಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲು ಯಾವ ಕಾರ್ಮಿಕರೂ ಮುಂದೆ ಬರುವುದಿಲ್ಲ. ಬಹಳಷ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿಯೇ ಸ್ವಚ್ಛತೆ ಕೈಗೊಳ್ಳುತ್ತಾರೆ. ಕೆಲವೆಡೆ ಸ್ವಚ್ಛತೆಗೆ ಹಣ ಸಾಲದೇ ಶೌಚಾಲಯಗಳೇ ಹಾಳು ಬಿದ್ದಿವೆ. ಬಳಕೆಗೆ ಬಾರದಂತೆ ಹದಗೆಟ್ಟಿವೆ. ವಿದ್ಯಾರ್ಥಿಗಳು ಮತ್ತೆ ಬಯಲನ್ನೇ ಆಶ್ರಯಿಸಿದ್ದಾರೆ’ ಎಂದು ಹೇಳಿದರು.

‘ಶಾಲೆಗಳ ಸ್ವಚ್ಛತೆ, ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಏಜೆನ್ಸಿಗೆ ವಹಿಸಲಿ. ಇಲ್ಲವೇ ಆಯಾ ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳಿಗೆ ವಹಿಸಲಿ. ಇಲ್ಲದಿದ್ದರೆ ನಿರ್ವಹಣಾ ಅನುದಾನವನ್ನಾದರೂ ಹೆಚ್ಚಿಸಲಿ’ ಎಂದು ಅವರು ಒತ್ತಾಯಿಸಿದರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಅವರಿಗೆ ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT