ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ವಿದ್ಯಾರ್ಥಿಗಳ ಸ್ವಾಗತಿಸಲು ಶಿಕ್ಷಕರ ತಯಾರಿ

ನಾಳೆಯಿಂದ ಶಾಲೆಗಳು ಪುನರಾರಂಭ, ಸಮವಸ್ತ್ರ ಮತ್ತು ಪಠ್ಯಪುಸ್ತಕ ಪೂರೈಕೆ
ಮಲ್ಲಪ್ಪ ಸಂಕೀನ್‌
Published 30 ಮೇ 2024, 5:56 IST
Last Updated 30 ಮೇ 2024, 5:56 IST
ಅಕ್ಷರ ಗಾತ್ರ

ಶಿವಮೊಗ್ಗ: 2024–25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಮೇ 31ರಿಂದ ಆರಂಭವಾಗಲಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಉತ್ಸುಕರಾಗಿದ್ದು, ಶಾಲೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. 

ಸರ್ಕಾರಿ, ಅನುದಾನಿತ, ಅನುದಾನ ರಹಿತ, ವಸತಿ ಶಾಲೆಗಳು ಸೇರಿ ಜಿಲ್ಲೆಯಲ್ಲಿ 2.61 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಮೊದಲನೇ ದಿನವೇ ಅವರಿಗೆ ಖುಷಿಯಿಂದ ಸ್ವಾಗತ ಕೋರಲು ಶಿಕ್ಷಕರು ಅಣಿಯಾದ್ದಾರೆ. ಇದಕ್ಕಾಗಿಯೇ ಭಿನ್ನ ತಯಾರಿ ಕೂಡ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ.

ಶಾಲೆ ಆರಂಭಕ್ಕೂ ಎರಡು ದಿನ ಮುಂಚಿತವಾಗೇ ಶಿಕ್ಷಕರು, ಮುಖ್ಯಶಿಕ್ಷಕರು ಶಾಲೆ ತೆರೆದು ಕೊಠಡಿಗಳನ್ನು, ಆವರಣವನ್ನು ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಾಲಾ ಕೊಠಡಿಗಳು, ಅಡುಗೆ ತಯಾರಿ ಪರಿಕರ, ಶಾಲಾ ಮೈದಾನ ಮತ್ತು ನೀರಿನ ಟ್ಯಾಂಕ್‌ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಮಕ್ಕಳ ಸುರಕ್ಷತಾ ಕ್ರಮಗಳ ಕುರಿತಂತೆ ಶಾಲಾ ಉಸ್ತುವಾರಿ ಸಮಿತಿ ಸಭೆ ಸಹ ನಡೆಸಿದ್ದಾರೆ.

ಮಳೆಯಿಂದಾಗಿ ಕೆಲವು ಶಾಲೆಗಳ ಆಟದ ಮೈದಾನದಲ್ಲಿ ನೀರು ನಿಂತಿದೆ. ಅಂತಹ ಶಾಲೆಗಳಲ್ಲಿ ಈಗಾಗಲೇ ಕೆಂಪು ಮಣ್ಣು ಹಾಕಿಸುವ ಮೂಲಕ ಮೈದಾನವನ್ನು ಸಮತಟ್ಟು ಮಾಡಲಾಗಿದೆ.  

ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿದೆ. ಶಾಲಾ ಆವರಣದಲ್ಲಿ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ ಬಿಡಿಸುವಂತೆ ಶಿಕ್ಷಣ ಇಲಾಖೆಯಿಂದ ಸೂಚನೆ ಸಹ ನೀಡಲಾಗಿದೆ. ಇದಲ್ಲದೇ ಮೊದಲನೇ ದಿನವೇ ವಿದ್ಯಾರ್ಥಿಗಳಿಗೆ ಸಿಹಿ ಭೋಜನದ ವ್ಯವಸ್ಥೆ ಇದೆ.  

ಇಲಾಖೆಯಿಂದ ಈಗಾಗಲೇ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳಿಗೆ ಪೂರೈಸಲಾಗಿದೆ. ಶಾಲೆ ಆರಂಭದ ಮೊದಲನೇ ದಿನವೇ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತದೆ. 1ರಿಂದ 10ನೇ ತರಗತಿವರೆಗೆ ಜಿಲ್ಲೆಗೆ ಒಟ್ಟು 22.90 ಲಕ್ಷ ಪುಸ್ತಕಗಳ ಬೇಡಿಕೆ ಇದೆ. ಅದರಲ್ಲಿ ಈಗಾಗಲೇ 16.78 ಲಕ್ಷ ಪುಸ್ತಕಗಳು ಬಂದಿವೆ. ಶೇ 73.58ರಷ್ಟು ಪುಸ್ತಕಗಳ ಪೂರೈಕೆ ಆಗಿದೆ. ಉಳಿದವು ವಾರದೊಳಗೆ ಬರುವ ಸಾಧ್ಯತೆಯಿದೆ. 

ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಪುಸ್ತಕಗಳನ್ನು ಖರೀದಿಸಿ ಬಳಿಕ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತವೆ. ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ ಪಠ್ಯಪುಸ್ತಕಗಳ ಬೇಡಿಕೆ 10.34 ಲಕ್ಷ ಇತ್ತು. ಈಗಾಗಲೇ 8.71 ಲಕ್ಷ ಪುಸ್ತಕಗಳು ಬಂದಿವೆ. ಶೇ 87.09 ಸಾಧನೆಯಾಗಿದೆ. ಉಳಿದ ಪುಸ್ತಕಗಳು ಸಹ ಶೀಘ್ರದಲ್ಲಿಯೇ ಬರಲಿವೆ. 

1ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ನೀಡಲಾಗುತ್ತದೆ. 2.30 ಲಕ್ಷ ಸಮವಸ್ತ್ರದ ಸೆಟ್‌ ಬಂದಿವೆ. ಶಾಲೆ ಆರಂಭದ ಮೊದಲನೇ ದಿನವೇ ಮಕ್ಕಳ ಕೈಗೆ ಸಮವಸ್ತ್ರ ನೀಡಲಾಗುತ್ತದೆ. 

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು 1,839 ಇವೆ. ಅನುದಾನಿತ ಶಾಲೆಗಳು 103, ವಸತಿ ಶಾಲೆಗಳು 45, ಅನುದಾನ ರಹಿತ ಶಾಲೆಗಳು ಸೇರಿ 2,307 ಪ್ರಾಥಮಿಕ ಶಾಲೆಗಳು ಇವೆ. ಇನ್ನು ಸರ್ಕಾರಿ ಪ್ರೌಢಶಾಲೆಗಳು 164, ವಸತಿ ಶಾಲೆಗಳು 41, ಅನುದಾನಿತ ಪ್ರೌಢ ಶಾಲೆಗಳು 144 ಮತ್ತು ಅನುದಾನ ರಹಿತ ಪ್ರೌಢಶಾಲೆಗಳು 160 ಇವೆ. ಒಟ್ಟು 509 ಪ್ರೌಢ ಶಾಲೆಗಳು ಜಿಲ್ಲೆಯಲ್ಲಿ ಇವೆ.

ಪ್ರಸ್ತಕ ಶೈಕ್ಷಣಿಕ ವರ್ಷದ ಶಾಲೆಗಳು ಮೇ 31ರಿಂದ ಆರಂಭವಾಗಲಿವೆ. ಇಲಾಖೆಯಿಂದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಖುಷಿಯಿಂದ ಮೊದಲನೇ ದಿನ ವಿದ್ಯಾರ್ಥಿಗಳು ಶಾಲೆಗೆ ಬರಲಿ.

- ಬಿಂಬಾ ಕೆ.ಆರ್‌ ಪ್ರಭಾರಿ ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಸರ್ಕಾರಿ ಅನುದಾನಿತ ಅನುದಾರಹಿತ

ಶಿಕ್ಷಕರ ವಿವರ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆ ಮಂಜೂರಾತಿ 5718 ಇದೆ. 5350 ಶಿಕ್ಷಕರು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 350 ಹುದ್ದೆ ಖಾಲಿ ಇವೆ. ಅನುದಾನಿತ ಶಾಲೆಗಳಲ್ಲಿ 543 ಶಿಕ್ಷಕರ ಹುದ್ದೆ ಮಂಜೂರಾತಿ ಆಗಿವೆ. 469 ಶಿಕ್ಷಕರಿದ್ದಾರೆ. 74 ಹುದ್ದೆ ಖಾಲಿ ಇವೆ. ಇನ್ನು ಅನುದಾನ ರಹಿತ ಶಾಲೆಗಳಲ್ಲಿ 2502 ಶಿಕ್ಷಕರ ಹುದ್ದೆಗಳು ಮಂಜೂರಾತಿ ಆಗಿವೆ. 2421 ಶಿಕ್ಷಕರು ಇದ್ದಾರೆ. 81 ಹುದ್ದೆಗಳು ಖಾಲಿ ಇವೆ. ವಿವಿಧ ವಸತಿ ಶಾಲೆಗಳಲ್ಲಿ 190 ಶಿಕ್ಷಕರ ಹುದ್ದೆ ಮಂಜೂರಾತಿ ಆಗಿವೆ. 128 ಭರ್ತಿಯಾಗಿದ್ದು 62 ಖಾಲಿ ಇವೆ.  ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರ ಹುದ್ದೆಗಳು ಜಿಲ್ಲೆಗೆ 1589 ಮಂಜೂರಾಗಿವೆ. ಇದರಲ್ಲಿ 1412 ಹುದ್ದೆಗಳು ಭರ್ತಿಯಾಗಿವೆ. 177 ಶಿಕ್ಷಕರ ಹುದ್ದೆ ಖಾಲಿ ಇವೆ. ವಿವಿಧ ವಸತಿ ಶಾಲೆಗಳಲ್ಲಿ 183 ಶಿಕ್ಷಕರ ಹುದ್ದೆ ಮಂಜೂರಾಗಿವೆ. 126 ಶಿಕ್ಷಕರು ಇದ್ದಾರೆ. 60 ಹುದ್ದೆಗಳು ಖಾಲಿ ಇವೆ. ಇನ್ನು ಅನುದಾನಿತ ಪ್ರೌಢ ಶಾಲೆಗಳಲ್ಲಿ 1057 ಹುದ್ದೆಗಳು ಮಂಜೂರಾತಿ ಮಾಡಲಾಗಿದೆ. ಇದರಲ್ಲಿ 887 ಶಿಕ್ಷಕರು ಇದ್ದಾರೆ. 170 ಶಿಕ್ಷಕರ ಹುದ್ದೆ ಇಲ್ಲ. ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ 1669 ಶಿಕ್ಷಕರು ಇರಬೇಕಿತ್ತು. 1571 ಶಿಕ್ಷಕರು ಇದ್ದಾರೆ. 98 ಹುದ್ದೆಗಳು ಖಾಲಿ ಇವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT