ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಕ್ರಿಸ್‌ಮಸ್‌ ಹಬ್ಬಕ್ಕೆ ಭರ್ಜರಿ ಸಿದ್ಧತೆ

ದಾನ-ಧರ್ಮಗಳ ಪ್ರತೀಕ; ವಿಶ್ವದಲ್ಲಿ ಶಾಂತಿ ನೆಲೆಸಲು ಪ್ರಾರ್ಥನೆ
ಕಿರಣ್‌ಕುಮಾರ್‌
Published 24 ಡಿಸೆಂಬರ್ 2023, 6:43 IST
Last Updated 24 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ಭದ್ರಾವತಿ: ನಗರದಲ್ಲಿ ಕ್ರಿಸ್‍ಮಸ್ ಹಬ್ಬದ ಸಂಭ್ರಮಾಚರಣೆಗೆ ಸಿದ್ಧತೆ ಆರಂಭವಾಗಿದೆ. ಕ್ರಿಸ್‍ಮಸ್ ಪ್ರಯುಕ್ತ ಅಲಂಕಾರಿಕ ವಸ್ತುಗಳು, ವಿದ್ಯುತ್ ದೀಪಗಳ ಮಾಲೆಗಳು, ಕ್ರಿಸ್‌ಮಸ್‌ ಟ್ರೀಗಳು, ಸಾಂತಾಕ್ಲಾಸ್ ಮಾಸ್ಕ್‌ಗಳು, ಸ್ನೋಬಾಲ್‌ಗಳು, ಟೋಪಿಗಳು, ಗೋದಲಿ ಕೊಟ್ಟಿಗೆಗಳು ಮತ್ತು ವರ್ಣರಂಜಿತ ನಕ್ಷತ್ರಗಳು ಸೇರಿ ವಿವಿಧ ವಸ್ತುಗಳು ಮಾರುಕಟ್ಟೆ ಪ್ರವೇಶಿಸಿವೆ.

ಕ್ರೈಸ್ತ ಸಮುದಾಯದವರು ಮನೆಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು ಸಿದ್ಧಪಡಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ.

ನಾಗರಿಕರು ಕ್ರಿಸ್‌ಮಸ್‌ ಕೇಕ್ ಮತ್ತು ಸಿಹಿತಿಂಡಿಗಳನ್ನು ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಲಂಕಾರ ಸಾಮಗ್ರಿಗಳ ಬೆಲೆ ಶೇ 5ರಿಂದ ಶೇ 10ರಷ್ಟು ಏರಿಕೆಯಾಗಿದೆ ಎಂದು ಸ್ಥಳೀಯ ಮಾರಾಟಗಾರರು ತಿಳಿಸಿದರು.

ಕ್ರೈಸ್ತ ಧರ್ಮದಲ್ಲಿ ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟೆಂಟ್ ಎರಡು ಪಂಗಡಗಳಿದ್ದು, ಪ್ರೊಟೆಸ್ಟೆಂಟ್ ಪಂಗಡದವರು ಕ್ರಿಸ್‌ಮಸ್‌ ಟ್ರೀ ಮತ್ತು ಸ್ಟಾರ್‌ಗಳನ್ನು ಅಲಂಕಾರಕ್ಕೆ ಬಳಸುತ್ತಾರೆ. ಕ್ಯಾಥೋಲಿಕರು ಏಸುಕ್ರಿಸ್ತನ ಜನನದ ದೃಶ್ಯಗಳನ್ನು ಬಿಂಬಿಸುವ ಗೋದಲಿ ನಿರ್ಮಿಸುತ್ತಾರೆ.

ತಾಲ್ಲೂಕಿನಲ್ಲಿ ಕ್ಯಾಥೋಲಿಕ್‌ ಧರ್ಮಕ್ಕೆ ಸೇರಿದ 7 ಧರ್ಮ ಕೇಂದ್ರಗಳು ಮತ್ತು ಪ್ರಾರ್ಥನಾ ಮಂದಿರಗಳಿವೆ. ಪ್ರತಿಯೊಂದರಲ್ಲಿಯೂ ವಿವಿಧ ರೀತಿಯ ಆಕರ್ಷಣೀಯ ಗೋದಲಿ ನಿರ್ಮಿಸಲಾಗುತ್ತದೆ. ಹಬ್ಬದ ದಿನದಂದು ಕ್ರೈಸ್ತ ಧರ್ಮದವರೊಂದಿಗೆ ಅನ್ಯ ಧರ್ಮೀಯ ಸಹೋದರ ಸಹೋದರಿಯರೂ ಗೋದಲಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಹಬ್ಬದ ಆಂತರಿಕ ಸಿದ್ಧತೆ ಭಾಗವಾಗಿ ಡಿಸೆಂಬರ್ ತಿಂಗಳ ಮೊದಲ ಭಾನುವಾರದಂದು 5 ಬಣ್ಣದ ಮೊಂಬತ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಬ್ಬದ ದಿನದವರೆಗೂ ಒಂದೊಂದು ಭಾನುವಾರವು ಒಂದೊಂದು ಬಣ್ಣದ ಮೊಂಬತ್ತಿಯನ್ನು ಹಚ್ಚಲಾಗುತ್ತದೆ. ಹಸಿರು-ನಂಬಿಕೆ, ನೀಲಿ-ಭರವಸೆ, ಬಂಗಾರದ ಬಣ್ಣ-ಪ್ರೀತಿ, ಬಿಳಿ-ಶಾಂತಿ, ಮತ್ತು ನೇರಳೆ-ಸಂತೋಷದ ಸಂಕೇತವಾಗಿದ್ದು, ನೆರೆಹೊರೆಯವರಲ್ಲಿ ಇವೆಲ್ಲವನ್ನು ಅಳವಡಿಸಿ ಹಬ್ಬ ಆಚರಿಸಬೇಕು ಎಂಬುದು ಇದರ ಉದ್ದೇಶವಾಗಿದೆ.

ನಕ್ಷತ್ರ (ಸ್ಟಾರ್): ಕ್ರಿಸ್ಮಸ್ ಹಬ್ಬದ ಲಾಂಛನವಾಗಿ ಸಮುದಾಯದವರ ಮನೆಯ ಮೇಲೆ ಅಥವಾ ಮುಂಭಾಗದಲ್ಲಿ ಸ್ಟಾರ್ ಕಟ್ಟಲಾಗುತ್ತದೆ.

ಕ್ರಿಸ್‌ಮಸ್ ಟ್ರೀ: ಕ್ರಿಸ್‌ಮಸ್‌ ಆಚರಣೆ ವೇಳೆ ಬಹುತೇಕರ ಮನೆಗಳಲ್ಲಿ ಕ್ರಿಸ್‌ಮಸ್‌ ಟ್ರೀ ಇರುತ್ತದೆ. ಯೇಸು ಕ್ರಿಸ್ತ ಹುಟ್ಟುವ ಸಮಯದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಚೆರ್ರಿ ಹಣ್ಣು ತುಂಬಿರುವ ಮರವಿತ್ತು. ಏಸುಕ್ರಿಸ್ತನನ್ನು ನೋಡಲು ಬರುವ ಅತಿಥಿಗಳಿಗೆ ಹಸಿವನ್ನು ನೀಗಿಸಲು ಅಲಂಕರಿಸಲಾಗಿತ್ತು ಎಂಬ ಪ್ರತೀತಿ ಇದೆ. ಕಾಲ ಬದಲಾದಂತೆ ಕ್ರಿಸ್‌ಮಸ್‌ ಮರವನ್ನು ಚಾಕೊಲೇಟ್, ಗಿಫ್ಟ್ ಡಬ್ಬಿಗಳು, ಬಣ್ಣದ ದೀಪಗಳಿಂದ ಅಲಂಕರಿಸಲಾಗುತ್ತಿದೆ.

ಕ್ರಿಸ್ಮಸ್ ತಾತ (ಸಾಂತಾಕ್ಲಾಸ್): ಹಬ್ಬದ ಪ್ರಮುಖ ಆಕರ್ಷಣೆ ಸಾಂತಾಕ್ಲಾಸ್. ಮಕ್ಕಳಿಗೆ ಸಾಂತಾ ಕ್ಲಾಸ್ ಎಂದರೆ ಅಚ್ಚುಮೆಚ್ಚು. ಮಕ್ಕಳನ್ನು ನೋಡಲು ಆತ ಯಾವತ್ತೂ ಬರಿಗೈಯಲ್ಲಿ ಬರುವುದಿಲ್ಲ. ಬಿಳಿ ಗಡ್ಡ, ಕೆಂಪು ಟೋಪಿ ಧರಿಸಿ ಬರುವ ಸಾಂತಾ ಕ್ಲಾಸ್ ಉಡುಗೊರೆ, ಸಿಹಿ ತಿಂಡಿಗಳನ್ನು ಹೊತ್ತ ಚೀಲವನ್ನು ಹೊತ್ತುಕೊಂಡು ಬರುತ್ತಾನೆ. ಮಕ್ಕಳೂ ಸಾಂತಾ ಕ್ಲಾಸ್ ರೀತಿಯ ಉಡುಪು ಧರಿಸಿ, ಆತನ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಮಕ್ಕಳಿಗೆ ಉಡುಗೊರೆ ಕೊಡುವ ಆತ, ಸಿಹಿ ತಿಂಡಿಗಳನ್ನು ನೀಡಿ ಅವರ ಜೊತೆ ಸಂಭ್ರಮಿಸುತ್ತಾನೆ.

ಇತಿಹಾಸದ ಪುಸ್ತಕಗಳ ಪ್ರಕಾರ ಸೇಂಟ್ ನಿಕೋಲಸ್ ಎಂಬ ವ್ಯಕ್ತಿಯಿಂದಾಗಿ ಸಾಂತಾ ಕ್ಲಾಸ್ ಪರಿಕಲ್ಪನೆ ಹುಟ್ಟಿದೆ. ಆಗರ್ಭ ಶ್ರೀಮಂತನಾಗಿದ್ದ ನಿಕೋಲಸ್‌ಗೆ ಜನರ ಬಗ್ಗೆ ಅಪಾರವಾದ ಕಾಳಜಿ ಇತ್ತು. ಯಾರೂ ಕಷ್ಟಪಡಬಾರದು ಎಂದು ಬಯಸುವವನು. ಮಕ್ಕಳು ಸದಾ ಖುಷಿಯಾಗಿರಬೇಕು ಎಂದು ಅವರಿಗೆ ವಿವಿಧ ರೀತಿಯ ಉಡುಗೊರೆ, ಸಿಹಿ ತಿಂಡಿಗಳನ್ನು ನೀಡುತ್ತಿದ್ದ. ನಿಕೋಲಸ್ 17ನೇ ವಯಸ್ಸಿಗೇ ಪಾದ್ರಿಯಾದ. ಬಳಿಕ ತನ್ನ ಜೀವನದುದ್ದಕ್ಕೂ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಲೇ ಇದ್ದ.

ನಿಕೋಲಸ್ ನಿಧನದ ನಂತರ ಚರ್ಚ್‌ನಲ್ಲಿದ್ದ ಆತನ ಅನುಯಾಯಿಗಳು ಈ ಸಂಪ್ರದಾಯವನ್ನು ಮುಂದುವರಿಸಿದರು. ಕ್ರಿಸ್‌ಮಸ್‌ ದಿನ ಗಮನ ಸೆಳೆಯುವಂತಹ ವೇಷಗಳನ್ನು ತೊಟ್ಟು ಮಕ್ಕಳಿಗೆ ಮಧ್ಯರಾತ್ರಿ ಉಡುಗೊರೆಗಳನ್ನು ನೀಡುತ್ತಾ ಬಂದರು. ಈ ಪದ್ಧತಿ ಮುಂದುವರಿದಿದೆ.

ಕ್ರಿಸ್‌ಮಸ್‌ ಪ್ರಯುಕ್ತ ಮಾರಾಟಕ್ಕೆ ಇಟ್ಟಿರುವ ಬೆಗ ಬಗೆಯ ಅಲಂಕಾರಿಕ ವಸ್ತುಗಳು
ಕ್ರಿಸ್‌ಮಸ್‌ ಪ್ರಯುಕ್ತ ಮಾರಾಟಕ್ಕೆ ಇಟ್ಟಿರುವ ಬೆಗ ಬಗೆಯ ಅಲಂಕಾರಿಕ ವಸ್ತುಗಳು
ಫಾ.ಅಂತೋಣಿ ನಜರೆತ್
ಫಾ.ಅಂತೋಣಿ ನಜರೆತ್
ಫಾ.ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್
ಫಾ.ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್
ಸಿಸ್ಟರ್ ವಿನ್ಸಿ
ಸಿಸ್ಟರ್ ವಿನ್ಸಿ
ಸಾಂತಾ ಕ್ಲಾಸ್ ವೇಷ ಧರಿಸಿ ಉಡುಗೊರೆ ನೀಡಲು ತಯಾರಾಗಿರುವ ಬಾಲಕ
ಸಾಂತಾ ಕ್ಲಾಸ್ ವೇಷ ಧರಿಸಿ ಉಡುಗೊರೆ ನೀಡಲು ತಯಾರಾಗಿರುವ ಬಾಲಕ
ಕ್ರೈಸ್ತ ಸಮುದಾಯದವರು ಡಿಸೆಂಬರ್‌ ತಿಂಗಳು ಪೂರ್ತಿ ತಮ್ಮ ಸಮುದಾಯದ ಬಡವರ ಮನೆಗಳಿಗೆ ಭೇಟಿ ನೀಡಿ ಉಡುಗೊರೆ ನೀಡಿ ಕ್ರಿಸ್‌ಮಸ್‌ ಗಾನ (ಕ್ಯಾರಲ್ಸ್) ಭಜನೆ ನಡೆಸಿ ಹಬ್ಬ ಆಚರಿಸಲು ಸಜ್ಜಾಗುತ್ತಾರೆ.
ಫಾ.ಅಂತೋಣಿ ನಜರೆತ್ ಧರ್ಮಗುರು
ಕ್ರಿಸ್‌ಮಸ್‌ ಕೇವಲ ಸಡಗರದ ಸಂದರ್ಭವಲ್ಲ. ನಮ್ಮಲ್ಲಿರುವುದನ್ನು ಇಲ್ಲದಿರುವವರಿಗೆ ಹಂಚುವ ಮೂಲಕ ಅವರ ಸಂತೋಷದಲ್ಲಿ ನಾವೂ ಭಾಗಿಯಾಗುವ ಹಬ್ಬ.
ಫಾ.ಸ್ಟೀಫನ್ ಅಲ್ಬುಕರ್ಕ್ ಧರ್ಮಗುರು
ಹಬ್ಬದ ಶುಭಾಶಯ ಕೋರಲು ಬಗೆ ಬಗೆಯ ಗ್ರೀಟಿಂಗ್ ಕಾರ್ಡ್‌ಗಳನ್ನು ತಯಾರಿಸಿ ಮಾರಾಟ ಮಾಡಿ ಆ ಹಣವನ್ನು ಹಬ್ಬದ ದಿನ ಬಡ ಕುಟುಂಬಕ್ಕೆ ಹಂಚುವ ರೂಢಿ ಇತ್ತು. ವಾಟ್ಸ್‌ಆ್ಯಪ್ ಫೇಸ್‌ಬುಕ್‌ ಕಾರಣ ಕಾರ್ಡ್‌ಗಳನ್ನು ಖರೀದಿಸುವವರು ಇಲ್ಲವಾಗಿದ್ದಾರೆ.
ಸಿಸ್ಟರ್ ವಿನ್ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT