ಶಿವಮೊಗ್ಗ: ಇಲ್ಲಿನ ರೌಡಿಶೀಟರ್ ಹಂದಿ ಅಣ್ಣಿಯ ಕೊಲೆ ಆರೋಪಿಗಳ ಮೇಲೆ ಬುಧವಾರ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿ ಆಗಿದ್ದ ನಾಲ್ವರು ತಡರಾತ್ರಿ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ..
ಶಿವಮೊಗ್ಗದ ನಿವಾಸಿಗಳಾದ ಸುನೀಲ್ ಯಾನೆ ತಮಿಳು ಸುನೀಲ, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಶರಣಾದವರು.
ಹಂದಿ ಅಣ್ಣಿ ಕೊಲೆ ಆರೋಪಿಗಳಾದ ಆಂಜನೇಯ ಹಾಗೂ ಮಧು ಮೇಲೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಬಳಿ ದಾಳಿ ನಡೆಸಿ ಆಂಜನೇಯನನ್ನು ಕೊಲೆ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದರು. ಈ ವೇಳೆ ಮಧು ತೀವ್ರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಭಾನುವಳ್ಳಿಯ ನಿವಾಸಿಗಳಾದ ಮಧು ಹಾಗೂ ಆಂಜನೇಯ ರೌಡಿ ಶೀಟರ್ ಹಂದಿ ಅಣ್ಣಿಯ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.
ಶಿವಮೊಗ್ಗ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಹಾಜರಾಗಿ ವಾಪಸ್ ಭಾನುವಳ್ಳಿಗೆ ಬೈಕ್ ನಲ್ಲಿ ತೆರಳುವಾಗ ಸ್ಕಾರ್ಪಿಯೊ ವಾಹನದಲ್ಲಿ ಹಿಂಬಾಲಿಸಿದ್ದ ತಂಡ ಗೋವಿನ ಕೋವಿ ಬಳಿ ಬೈಕ್ ಗೆ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿ ಹಲ್ಲೆ ನಡೆಸಿತ್ತು.
ಸ್ಕಾರ್ಪಿಯೊ ವಾಹನ ಸ್ಟಾರ್ಟ್ ಆಗದ ಕಾರಣ ಆರೋಪಿಗಳು ಹುಬ್ಬಳ್ಳಿಗೆ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಹತ್ತಿ ಶಿಗ್ಗಾವಿಯಲ್ಲಿ ಇಳಿದು ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.