ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ತೋಟ ಉಳಿಸಲು ನೀರಿಗೆ ಹುಡುಕಾಟ

ಭದ್ರಾವತಿ ತಾಲ್ಲೂಕಿನಿಂದ ಚನ್ನಗಿರಿ ಭಾಗಕ್ಕೆ ನೀರು; ಬಸಿನೀರಿಗೂ ಬೇಡಿಕೆ
ವೆಂಕಟೇಶ ಜಿ.ಎಚ್
Published 13 ಮಾರ್ಚ್ 2024, 6:37 IST
Last Updated 13 ಮಾರ್ಚ್ 2024, 6:37 IST
ಅಕ್ಷರ ಗಾತ್ರ

ಶಿವಮೊಗ್ಗ: ಬೋರ್‌ವೆಲ್‌ಗಳು ಬರಿದಾಗಿರುವುದರಿಂದ ಹನಿ, ಹನಿ ನೀರು ಸಂಗ್ರಹಿಸಿ ಅಡಿಕೆ ತೋಟಗಳ ಬಾಯಾರಿಕೆ ನೀಗಿಸುವ ಹರಸಾಹಸಕ್ಕೆ ಬೆಳೆಗಾರರು ಮುಂದಾಗಿದ್ದಾರೆ.

ಹೊಸದಾಗಿ ಸಾವಿರ ಅಡಿ ಬೋರ್‌ವೆಲ್‌ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ಈ ಬೇಸಿಗೆಯಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದು ಬೆಳೆಗಾರರಿಗೆ ಸವಾಲಾಗಿದೆ.

ಬಸಿ ನೀರಿಗೂ ಬೇಡಿಕೆ:

ಬಿಸಿಲಿನ ಕಾರಣ ಹಳ್ಳ–ಕೊಳ್ಳ, ಕೆರೆಗಳು ಬತ್ತಿವೆ. ನೀರು ಹುಡುಕಿ ತರುವುದು ಸವಾಲಾಗಿದೆ. ಭದ್ರಾವತಿ ತಾಲ್ಲೂಕಿನ ಅಗರದಹಳ್ಳಿ ಕ್ಯಾಂಪ್‌ ಬಳಿಯ ಕೆರೆಯಲ್ಲಿನ ಬಸಿ ನೀರು ಹರಿದು ಹೋಗದಂತೆ ಅಡ್ಡಹಾಕಿ ಅದನ್ನು ಟ್ಯಾಂಕರ್‌ಗಳಿಗೆ ತುಂಬಿಸಿ ಪಕ್ಕದ ಚನ್ನಗಿರಿ ತಾಲ್ಲೂಕಿನ ಅಡಿಕೆ ತೋಟಗಳಿಗೆ ಒಯ್ಯುತ್ತಿದ್ದ ದೃಶ್ಯ ‘ಪ್ರಜಾವಾಣಿ’ಗೆ ಕಂಡುಬಂದಿತು.

ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ, ಸಾರಥಿ, ಹೊಸೂರು, ಗಾಣದಕಟ್ಟೆ, ಜೋಳದಾಳ್‌, ಚನ್ನಗಿರಿ, ಆಗರಬನ್ನಿಹಟ್ಟಿ, ಅಬ್ಬಲಗೆರೆ, ವಡ್ಡನಾಳ್, ಗೋಪನಾಳ್‌, ಮಾದಾಪುರ, ಶೆಟ್ಟಿಹಳ್ಳಿ, ಗರಗ ಸುತ್ತಲಿನ ಗ್ರಾಮಗಳ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನೀರಿನ ಕೊರತೆ ಆಗಿದ್ದು, ಅಗರದಹಳ್ಳಿಯಿಂದ ನೀರು ಒಯ್ಯಲಾಗುತ್ತಿದೆ.

‘ಟ್ಯಾಂಕರ್‌ಗೆ ನೀರು ತುಂಬಿಸಲು ₹400 ಶುಲ್ಕ ವಿಧಿಸಲಾಗುತ್ತಿದೆ. ನೀರು ಸಿಗುವ ಸ್ಥಳದಿಂದ ತೋಟಗಳ ಅಂತರ ಆಧರಿಸಿ ಬಾಡಿಗೆ ನಿಗದಿಯಾಗುತ್ತಿದೆ’ ಎಂದು ಅಗರದಹಳ್ಳಿಯ ಪ್ರಭುತೇಜ ಹೇಳುತ್ತಾರೆ.

‘16 ಎಕರೆ ಅಡಿಕೆ ತೋಟ ಇದೆ. 12 ಕೊಳವೆ ಬಾವಿ ಇವೆ. ಬೋರ್‌ವೆಲ್‌ನಲ್ಲಿ 10 ನಿಮಿಷ ಅರ್ಧ ಇಂಚು ನೀರು ಬರುತ್ತಿಲ್ಲ. ತೋಟ ಉಳಿಸಿಕೊಳ್ಳುವುದು ದೊಡ್ಡ ಸವಾಲು. ಹೀಗಾಗಿ ಟ್ಯಾಂಕರ್‌ನಲ್ಲಿ ಅಗರದಹಳ್ಳಿಯಿಂದ ನೀರು ಒಯ್ಯುತ್ತಿದ್ದೇವೆ’ ಎಂದು ಚನ್ನಗಿರಿ ತಾಲ್ಲೂಕಿನ ಸಾರಥಿ ಗ್ರಾಮದ ಮಂಜುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ವರ್ಷಗಳ ಹಿಂದೆ ಇಂತಹದ್ದೇ ತೊಂದರೆ ಆಗಿತ್ತು. ಆದರೆ ಆಗ ಮಳೆ ಬಂದು ಸಮಸ್ಯೆ ಪರಿಹಾರವಾಗಿತ್ತು. ಈ ಬಾರಿ ಮಳೆ ಇಲ್ಲದೇ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ’ ಎಂದು ಅಳಲು ತೋಡಿಕೊಂಡರು.

‘ಅಗರದಹಳ್ಳಿ ಕ್ಯಾಂಪ್‌ ಬಿಟ್ಟರೆ ಸೂಳೆಕೆರೆಯಿಂದ ನೀರು ತರಬೇಕು. ಅದು ದೂರ ಆಗುತ್ತದೆ. ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಇಲ್ಲಿಂದಲೇ ನೀರು ಒಯ್ಯುತ್ತಿದ್ದೇವೆ. ಈ ಹಿಂದೆ ಟ್ರಿಪ್‌ಗೆ ₹6,000ದವರೆಗೆ ಟ್ಯಾಂಕರ್ ಬಾಡಿಗೆ ಕೊಡುತ್ತಿದ್ದೆವು. ಈಗ ನಾವೇ ಚಳ್ಳಕೆರೆಯಿಂದ ಲೀಸ್‌ಗೆ ಟ್ಯಾಂಕರ್ ತರಿಸಿದ್ದೇವೆ’ ಎಂದು ಮಂಜುಗೌಡ ಹೇಳಿದರು.

‘ಶೆಟ್ಟಿಹಳ್ಳಿ–ಮಾದಾಪುರದಲ್ಲಿ ತೀವ್ರ ನೀರಿನ ತೊಂದರೆ ಆಗಿದೆ. ನಮ್ಮಲ್ಲಿ 300 ಅಡಿಯೊಳಗೆ ನೀರು ಸಿಗುತ್ತಿತ್ತು. ಈಗ 500ರಿಂದ 600 ಅಡಿ ಕೊರೆದರೂ ಸಿಗುತ್ತಿಲ್ಲ. ಗ್ರಾಮದಲ್ಲಿ ಶೇ 50ರಷ್ಟು ಕೊಳವೆಬಾವಿಗಳಲ್ಲಿ ನೀರಿಲ್ಲ. ಉಳಿದವುಗಳಲ್ಲಿ ಅರ್ಧ, ಮುಕ್ಕಾಲು ಗಂಟೆ ಹರಿಸುವಷ್ಟು ಮಾತ್ರ ನೀರಿದೆ’ ಎಂದು ಶೆಟ್ಟಿಹಳ್ಳಿಯ ರವಿ ತಿಳಿಸಿದರು.

‘ಶೆಟ್ಟಿಹಳ್ಳಿಗೆ 3 ಕಿ.ಮೀ ಕೆರೆ ಇದೆ. ಅಲ್ಲಿಂದ ವಾರದಲ್ಲಿ ಒಮ್ಮೆ ಹಗಲು ಹೊತ್ತು ನೀರು ತರಲು ತಹಶೀಲ್ದಾರ್ ಅನುಮತಿ ನೀಡಿದ್ದಾರೆ. ಆದರೆ ಅದು ಸಾಲುತ್ತಿಲ್ಲ. ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ, ದೊಗ್ಗನಾಳ್, ಬಸಾಪುರ ಗೇಟ್ (ರಾಮಗಿರಿ ಕ್ರಾಸ್‌) ಬಳಿಯಿಂದ ಟ್ರ್ಯಾಕ್ಟರ್‌ಗಳಲ್ಲಿ ನೀರು ತರುತ್ತಿದ್ದೇವೆ. ನಮ್ಮೂರಲ್ಲಿ ಈ ಬಾರಿ 60ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದೇವೆ. ಅದರಲ್ಲಿ 10 ಬೋರ್‌ವೆಲ್‌ಗಳಲ್ಲಿ ಮಾತ್ರ ಅರ್ಧ, ಒಂದು ಹಾಗೂ ಎರಡು ಇಂಚು ನೀರು ಬಿದ್ದಿದೆ. ಉಳಿದ ಬೋರ್‌ವೆಲ್‌ಗಳಲ್ಲಿ ಬಂದದ್ದು ಬರೀ ದೂಳು’ ಎಂದು ರವಿ ಹೇಳುತ್ತಾರೆ.

ಟ್ಯಾಂಕರ್‌ಗಳಿಗೆ ಭರ್ಜರಿ ಬೇಡಿಕೆ.. ‘ಅಡಿಕೆ ತೋಟಗಳಿಗೆ ನೀರು ಸಾಗಿಸಲು ವಿಜಯಪುರ ಬಾಗಲಕೋಟೆ ಬೆಳಗಾವಿ ರಾಯಚೂರು ಮಂಗಳೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದಿಂದ ಪೆಟ್ರೋಲಿಯಂ ಉತ್ಪನ್ನ ಖಾದ್ಯತೈಲ ಹಾಲು ಸಾಗಿಸುವ ಟ್ಯಾಂಕರ್‌ಗಳನ್ನು ಲೀಸ್‌ಗೆ ತರಲಾಗಿದೆ. ಟ್ಯಾಂಕರ್‌ಗಳಿಗೆ ತಿಂಗಳಿಗೆ ₹1.25 ಲಕ್ಷ ಟ್ರ್ಯಾಕ್ಟರ್‌ಗಳಿಗೆ ₹20 ಸಾವಿರ ಬಾಡಿಗೆ ಕೊಡುತ್ತಿದ್ದೇವೆ’ ಎಂದು ಸಾರಥಿ ಗ್ರಾಮದ ಮಂಜುಗೌಡ ಹೇಳುತ್ತಾರೆ. ಅಗರದಹಳ್ಳಿ ಕ್ಯಾಂಪ್‌ ಬಳಿಯಿಂದ ಕೆರೆಯ ಬಸಿ ನೀರು ಸಾಗಿಸಲು ನಿತ್ಯ 300ಕ್ಕೂ ಹೆಚ್ಚು ಟ್ಯಾಂಕರ್‌ಗಳು ಓಡಾಟ ನಡೆಸಿವೆ. ಇನ್ನೊಂದು ತಿಂಗಳು ಮಳೆ ಬಾರದಿದ್ದರೆ ಬಹಳ ಕಷ್ಟವಿದೆ. ಯುಗಾದಿ ಆಸುಪಾಸಿನಲ್ಲಿ ಮಳೆ ಬರಬಹುದು ಎಂಬ ಆಶಾಭಾವನೆಯೂ ಅಡಿಕೆ ಬೆಳೆಗಾರರಲ್ಲಿ ಇದೆ.

ಬೋರ್‌ವೆಲ್ ರಿಗ್ಗಿಂಗ್; ದರ ಏರಿಕೆ.. ಬೋರ್‌ವೆಲ್ ಕೊರೆಸಲು ರಿಗ್ಗಿಂಗ್ ಲಾರಿಗಳು ಸಿಗದಿರುವುದು ಅಡಿಕೆ ಬೆಳೆಗಾರರ ಚಿಂತೆ ಹೆಚ್ಚಿಸಿದೆ. 15 ದಿನಗಳ ಮುಂಚೆಯೇ ಬುಕ್ಕಿಂಗ್ ಮಾಡಿದರೂ ಲಾರಿಗಳು ಸಿಗುತ್ತಿಲ್ಲ. ಒಂದು ಬೋರ್‌ವೆಲ್ ಫೇಲ್ ಆದರೆ ಇನ್ನೊಂದು ಮತ್ತೊಂದು ಹೀಗೆ ಲಾರಿಗಳು ಅಲ್ಲಿಯೇ ಮುಂದುವರೆಯುತ್ತವೆ. ಮುಂಗಡ ಹಣ ಕೊಟ್ಟರೂ ಬರುತ್ತಿಲ್ಲ. ತೋಟ ಒಣಗುವ ಚಿಂತೆಯಲ್ಲಿ ಬೆಳೆಗಾರರು ದಿನದೂಡಬೇಕಿದೆ. ‘ಬೇಡಿಕೆ ಹೆಚ್ಚಿರುವುದರಿಂದ ಕೊಳವೆ ಬಾವಿ ಕೊರೆಸಲು ಪ್ರತಿ ಅಡಿಗೆ ₹84 ರಿಂದ ₹85 ಇದ್ದ ದರ ಈಗ ₹128 ರಿಂದ ₹130ರವರೆಗೆ ಹೆಚ್ಚಳವಾಗಿದೆ. ಅನಿವಾರ್ಯವಾಗಿ ಕೊಡಲು ಒಪ್ಪುತ್ತೇವೆ. ಆದರೂ ಲಾರಿಗಳು ಸಿಗುತ್ತಿಲ್ಲ’ ಎಂದು ಶಿರಾಳಕೊಪ್ಪದ ವಾಸು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT