ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಟ್ಸ್‌ಆ್ಯಪ್‌ ಸುಳ್ಳು ಸಂದೇಶ ನಂಬಿ ಸಾಲುಗಟ್ಟಿದ ಜನ

ಗ್ಯಾಸ್‌ ಏಜೆನ್ಸಿಗೆ ಇ-ಕೆವೈಸಿ ಮಾಡಿಸಲು ಡಿ.31 ಕೊನೆಯ ದಿನ !
ವೆಂಕಟೇಶ ಜಿ.ಎಚ್
Published 27 ಡಿಸೆಂಬರ್ 2023, 8:08 IST
Last Updated 27 ಡಿಸೆಂಬರ್ 2023, 8:08 IST
ಅಕ್ಷರ ಗಾತ್ರ

ಶಿವಮೊಗ್ಗ: ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಸುಳ್ಳು ಸುದ್ದಿ ನಂಬಿ ಶಿವಮೊಗ್ಗ ಜಿಲ್ಲೆಯಲ್ಲಿ ಅನಿಲ ಸಿಲಿಂಡರ್ ಬಳಕೆದಾರರು ದೊಡ್ಡ ಸಂಖ್ಯೆಯಲ್ಲಿ ಗ್ಯಾಸ್ ಏಜೆನ್ಸಿಗಳ ಎದುರು ಸಾಲುಗಟ್ಟುತ್ತಿದ್ದಾರೆ.

‘ಅನಿಲ ಸಿಲಿಂಡರ್ ಸಂಪರ್ಕ ಪಡೆದವರು ಡಿ.31 ರೊಳಗೆ ಕಡ್ಡಾಯವಾಗಿ ತಮ್ಮ ಗ್ಯಾಸ್ ಸಂಪರ್ಕದ ಐಡಿ ಸಂಖ್ಯೆಯನ್ನು ಆಯಾ ಏಜೆನ್ಸಿಗಳ ಕಚೇರಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು. ತಪ್ಪಿದಲ್ಲಿ  ಜನವರಿ 1ರಿಂದ ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಸೌಲಭ್ಯ ಸ್ಥಗಿತಗೊಳ್ಳಲಿದೆ ಎಂಬ ಸುಳ್ಳು ಸುದ್ದಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಅದನ್ನು ನಂಬಿ ಗ್ರಾಹಕರು ಹೀಗೆ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ’ ಎಂದು ಶಿವಮೊಗ್ಗದ ಭಂಡಾರಿ ಗ್ಯಾಸ್ ಏಜೆನ್ಸಿ ಮಾಲೀಕರೂ ಆದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಟ್ಸ್‌ಆ್ಯಪ್‌ ಯೂನಿವರ್ಸಿಟಿಯ ಮಾತು ನಂಬುವವರ ಸಂಖ್ಯೆ ಹಾಗೂ ನಂಬಿಸುವವರ ಸಂಖ್ಯೆ ಎರಡೂ ಹೆಚ್ಚಾಗಿದೆ. ಅದರ ಫಲ ಜನಸಾಮಾನ್ಯರು ಅನುಭವಿಸುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕೂಡಲೇ ಜಾಗೃತಿ ಮೂಡಿಸಿ ಜನರು ಗಾಬರಿಗೊಳ್ಳುವುದನ್ನು ತಪ್ಪಿಸಲಿ ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು.

ವೃದ್ಧರು, ಮಹಿಳೆಯರ ಸಾಲು: ‘ಗ್ಯಾಸ್ ಏಜೆನ್ಸಿಗಳ ಮುಂದೆ ವೃದ್ಧರು, ಮಹಿಳೆಯರು, ಮಕ್ಕಳು ಸಾಲುಗಟ್ಟುತ್ತಿದ್ದಾರೆ. ಯಾರ ಹೆಸರಲ್ಲಿ ಸಿಲಿಂಡರ್ ಸಂಪರ್ಕ ಇದೆಯೋ ಅವರೇ ಕಡ್ಡಾಯವಾಗಿ ಬರಬೇಕು ಎಂಬ ಕಾರಣಕ್ಕೆ ದೂರದ ಊರುಗಳಲ್ಲಿ ಇರುವವರು ರಜೆ ಹಾಕಿ ಶಿವಮೊಗ್ಗಕ್ಕೆ ಬಂದಿದ್ದಾರೆ. ಚಳಿಯ ನಡುವೆಯೇ ಏಜೆನ್ಸಿಯವರು ಬಾಗಿಲು ತೆಗೆಯುವುದನ್ನು ಕಾಯುತ್ತಾ ನಿಲ್ಲುವ ಅವರ ಗೋಳು ಹೇಳತೀರದು’ ಎಂದು ಶಿವಮೊಗ್ಗದ ನಿವಾಸಿ, ಛಾಯಾಗ್ರಾಹಕ ಎಸ್.ಕೆ.ದಿನೇಶ್ ಬೇಸರ ವ್ಯಕ್ತಪಡಿಸಿದರು.

ವಾಟ್ಸ್‌ಆ್ಯಪ್‌ ಸಂದೇಶದ ಕಾರಣ ಮನೆಯವರ ಒತ್ತಾಯಕ್ಕೆ ಮಣಿದು ಇ-ಕೆವೈಸಿ ಮಾಡಿಸಲು ದಿನೇಶ್ ಅವರು ಕೆಲಸಕ್ಕೆ ರಜೆ ಹಾಕಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು.

ವಾಸ್ತವವಾಗಿ ಗ್ರಾಹಕರು ತಮ್ಮ ಸಿಲಿಂಡರ್ ಸಂಪರ್ಕ ಸಂಖ್ಯೆಯನ್ನು ಇ-ಕೆವೈಸಿಗೆ ಒಳಪಡಿಸಬೇಕು. ಒಬ್ಬರೇ ವ್ಯಕ್ತಿಯ ಹೆಸರಲ್ಲಿ ಹೆಚ್ಚು ಸಂಪರ್ಕಗಳನ್ನು ಪಡೆದು ಸಿಲಿಂಡರ್ ಸಬ್ಸಿಡಿ ಸೌಲಭ್ಯ ದುರುಪಯೋಗವಾಗುವುದು ತಡೆಯಲು ಇ-ಕೆವೈಸಿ ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಈ ಪ್ರಕ್ರಿಯೆಗೆ ಯಾವುದೇ ಕಾಲಮಿತಿ ಇಲ್ಲ. ತಪ್ಪು ತಿಳಿವಳಿಕೆಯಿಂದ ಜನರು ಗ್ಯಾಸ್ ಏಜೆನ್ಸಿಗಳಿಗೆ ಎಡತಾಕುತ್ತಿದ್ದಾರೆ ಎಂದು ತೈಲ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶಿಕಾರಿಪುರದ ಭದ್ರಾಪುರ ರಸ್ತೆಯ ಶರಾವತಿ ಗ್ಯಾಸ್ ಏಜೆನ್ಸಿ ಎದುರು ಮಂಗಳವಾರ ಸಾಲುಗಟ್ಟಿದ್ದ ಗ್ರಾಹಕರು – ಪ್ರಜಾವಾಣಿ ಚಿತ್ರ/ಶಿವಮೊಗ್ಗ ನಾಗರಾಜ್
ಶಿಕಾರಿಪುರದ ಭದ್ರಾಪುರ ರಸ್ತೆಯ ಶರಾವತಿ ಗ್ಯಾಸ್ ಏಜೆನ್ಸಿ ಎದುರು ಮಂಗಳವಾರ ಸಾಲುಗಟ್ಟಿದ್ದ ಗ್ರಾಹಕರು – ಪ್ರಜಾವಾಣಿ ಚಿತ್ರ/ಶಿವಮೊಗ್ಗ ನಾಗರಾಜ್

ಯಾವುದೇ ಕಾಲಮಿತಿ ವಿಧಿಸಿಲ್ಲ: ಐಒಸಿ ಸ್ಪಷ್ಟನೆ ಉಜ್ವಲಾ ಯೋಜನೆಯ ನೈಜ ಫಲಾನುಭವಿಗಳ ಸಂಖ್ಯೆ ಪಡೆಯಲು ಹಾಗೂ ಸಬ್ಸಿಡಿ ವ್ಯವಸ್ಥೆ ದುರ್ಬಳಕೆ ತಡೆಯಲು ಗ್ರಾಹಕರ ಸಂಖ್ಯೆಯನ್ನು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಅದಕ್ಕೆ ಯಾವುದೇ ಕಾಲಮಿತಿ ವಿಧಿಸಿಲ್ಲ. ಡಿ.31ರ ನಂತರವೂ ಇ-ಕೆವೈಸಿ ಮಾಡಿಸಬಹುದು. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಇಂಡಿಯನ್ ಆಯಿಲ್ ಕಂಪನಿಯ (ಐಒಸಿ) ಪ್ರಾದೇಶಿಕ ಮುಖ್ಯಸ್ಥ ಅಜಿಂಕ್ಯಾ ಸ್ಪಷ್ಟಪಡಿಸಿದರು. ಗ್ರಾಹಕರು ಆತಂಕಕ್ಕೊಳಗಾಗುವುದನ್ನು ತಪ್ಪಿಸಲು ಜಿಲ್ಲೆಯಲ್ಲಿರುವ ಕಂಪನಿಯ ಡೀಲರ್‌ಗಳಿಗೆ ಸೂಚಿಸಲಾಗಿದೆ. ಇ–ಕೆವೈಸಿ ಮಾಡಿಸಲು ಗ್ರಾಹಕರು ಗ್ಯಾಸ್ ಏಜೆನ್ಸಿಗೇ ಹೋಗಬೇಕಿಲ್ಲ. ಐಒಸಿ ಆ್ಯಪ್ ಮೂಲಕವೂ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ  ಗ್ಯಾಸ್ ಏಜೆನ್ಸಿಯವರನ್ನು ಸಂಪರ್ಕಿಸಬಹುದು ಎಂದು ಅವರು ಸಲಹೆ ನೀಡಿದರು.

ಸುಳ್ಳು ಸಂದೇಶ: ಆವಿನ್ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವುದು ಸುಳ್ಳು ಸಂದೇಶ. ಸಿಲಿಂಡರ್ ಪೂರೈಕೆ ಮಾಡುವ ತೈಲ ಕಂಪನಿಗಳೊಂದಿಗೆ ಚರ್ಚಿಸಿದ್ದು ಇ-ಕೆವೈಸಿ ಮಾಡಿಸಲು ಯಾವುದೇ ಕಾಲಮಿತಿ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಅನಗತ್ಯವಾಗಿ ಗಾಬರಿಗೊಳಗಾಗುವುದು ಬೇಡ. ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ಬೇಡ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶಿವಮೊಗ್ಗ ಜಂಟಿ ನಿರ್ದೇಶಕ ಆವಿನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT