ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ಶಾಲೆಗೆ ಬನ್ನಿ ಶನಿವಾರ’ ಯೋಜನೆ ವಿಫಲ

ವಿದ್ಯಾರ್ಥಿಗಳ ಕಲಿಕೆಗೆ ಸಹಕಾರ ನೀಡಲು ಆಸಕ್ತಿ ತೋರದ ಸಂಪನ್ಮೂಲ ವ್ಯಕ್ತಿಗಳು
Last Updated 1 ಅಕ್ಟೋಬರ್ 2016, 6:14 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಕಳೆದ ವರ್ಷ ಆರಂಭಿಸಿದ ‘ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ’ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದೆ.

ಹಳೆಯ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ರಜಾ ದಿನಗಳಲ್ಲಿ ಮಕ್ಕಳಿಗೆ ಪಾಠ ಕಲಿಸಲು ರಾಜ್ಯ ಸರ್ಕಾರ ಈ ಯೋಜನೆ ರೂಪಿಸಿತ್ತು. ಸರ್ಕಾರಿ ಇಲಾಖೆ ಹಾಗೂ ಖಾಸಗಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಸ್ಥರು ತಮ್ಮ ಬಿಡುವಿನ ಸಮಯದಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲೆ ಅಥವಾ ಸಮೀಪದ ಶಾಲೆಗೆ ತೆರಳಿ ತಾವು ತಿಳಿದುಕೊಂಡ ಜ್ಞಾನವನ್ನು ಮಕ್ಕಳಿಗೆ ಧಾರೆಎರೆಯಲು ಈ ಯೋಜನೆ ಮೂಲಕ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.

ನೀರಸ ಪ್ರತಿಕ್ರಿಯೆ: ಕೆಲವು ಖಾಸಗಿ ಸಂಸ್ಥೆಗಳಿಗೆ ಶನಿವಾರ ರಜೆ ಇರುತ್ತದೆ. ಕೆಲವು ಶಾಲೆಗಳಲ್ಲಿ ಅಂದು ಬೆಳಿಗ್ಗೆ 7.30ರಿಂದ 12ರವರೆಗೆ ಮಾತ್ರ ತರಗತಿಗಳು ನಡೆಯುತ್ತವೆ. ಪಾಠ ಮಾಡಬಯಸುವ ಉದ್ಯೋಗಿಗಳು ತಾವು ಬಯಸುವ ಯಾವುದೇ ನಗರ, ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವನ್ನೂ ನೀಡಲಾಗಿತ್ತು. ಆದರೆ, ಯಾವುದೇ ಉದ್ಯೋಗಸ್ಥರು ಶಾಲೆಗೆ ತೆರಳಿ ವಿಚಾರಧಾರೆ ತಿಳಿಸಲು ಆಸಕ್ತಿ ತೋರಿಲ್ಲ. ಹಾಗಾಗಿ, ಈ ಯೋಜನೆ ವಿಫಲವಾಗಿದೆ.

ಬೆಂಗಳೂರು ಹಾಗೂ ಇತರ ಜಿಲ್ಲಾ ಕೇಂದ್ರಗಳಲ್ಲಿ ಹಲವಾರು ಖಾಸಗಿ, ಸರ್ಕಾರಿ ಸ್ವಾಮ್ಯದ ಸಾಫ್ಟ್‌ವೇರ್ ಕಂಪೆನಿಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ವಿವಿಧ ಇಲಾಖೆಗಳಲ್ಲಿ, ಜೈವಿಕ, ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಹಲವಾರು ಪ್ರತಿಭಾನ್ವಿತರು ದುಡಿಯುತ್ತಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳ ಕಾರ್ಯನಿರ್ವಹಿಸುವ ಕೆಲವರಿಗಾದರೂ ಶಿಕ್ಷಕರಾಗಬೇಕು ಎನ್ನುವ  ಹಂಬಲವಿರುತ್ತದೆ. ಅಂತಹ ಮನೋಭಾವನೆಯ ವ್ಯಕ್ತಿಗಳು ತಾವು ಆಡಿ, ಬೆಳೆದ ಗ್ರಾಮದ ಶಾಲೆಗಳಿಗೆ ಭೇಟಿ ಕೊಟ್ಟು ಪರಿಣತಿ ಹೊಂದಿದ ವಿಷಯ ಮಕ್ಕಳಿಗೆ ತಿಳಿಸಿದಲ್ಲಿ ಅವರಿಗೂ ಪ್ರೇರಣೆಯಾಗುತ್ತದೆ ಎಂಬ ಉನ್ನತ ಹಂಬಲ ಈ ಯೋಜನೆಯ ಹಿಂದೆ ಇತ್ತು.

ಹುಸಿಯಾದ ನಿರೀಕ್ಷೆ: ರಜಾ ದಿನಗಳಲ್ಲಿ ಬಹುತೇಕರಿಗೆ ಕಾಲಹರಣ ಮಾಡಲು ಮನಸ್ಸು ಇರುವುದಿಲ್ಲ.  ಸೇವೆ ಮಾಡುವ ಹಂಬಲ ಇರುತ್ತದೆ.  ಅಂಥ ವ್ಯಕ್ತಿಗಳಿಗೆ ಈ ಯೋಜನೆ ವರದಾನವಾಗಿತ್ತು. ಜತೆಗೆ, ಮಕ್ಕಳಿಗೆ ಹೊಸ ಪ್ರೇರಣೆ, ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ, ಛಲ, ಆತ್ಮವಿಶ್ವಾಸದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತಿತ್ತು.

ಮುಂದೆ ಬಾರದ ಉದ್ಯೋಗಸ್ಥರು: ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾವೂ ಕೈ ಜೋಡಿಸಬೇಕು ಎಂಬ ಆಕಾಂಕ್ಷೆಯುಳ್ಳ ಯಾವ ಉದ್ಯೋಗಸ್ಥರು ಈ ಯೋಜನೆಯತ್ತ ಆಸಕ್ತಿ ತೋರಿಲ್ಲ. ಪ್ರತಿ ಶನಿವಾರ ವಿಶೇಷ ತರಗತಿಯ ಅನುಭವ ಪಡೆಯಬೇಕಿದ್ದ ಮಕ್ಕಳೂ ವಂಚಿತರಾಗಿದ್ದಾರೆ.

‘ಸರ್ಕಾರ ಒಂದು ಉತ್ತಮ ಕಾರ್ಯಕ್ರಮ ಜಾರಿ ಮಾಡಿತ್ತು. ಕಳೆದ ವರ್ಷ ಇದು ಜಾರಿಯಾದ ಮೊದಲ ಎರಡು ಅಥವಾ ಮೂರು ಶನಿವಾರ ಮಾತ್ರ ಕೆಲವರು ಭೇಟಿ ನೀಡಿದ್ದರು. ಮತ್ತೆ ಯೋಜನೆ ಮುಂದುವರಿಯಲೇ ಇಲ್ಲ’ ಎನ್ನುತ್ತಾರೆ ಎಸ್‌.ಕೆ. ಮಗ್ಗಿ ಪ್ರೌಢಶಾಲಾ ಶಿಕ್ಷಕ
ಎಚ್.ಬಿ.ಧರ್ಮಪ್ಪ.

‘ಶಾಲೆಗೆ ಬನ್ನಿ ಶನಿವಾರ, ಕಲಿಯಲು ನೀಡಿ ಸಹಕಾರ’ ಎಂಬ ಯೋಜನೆ ಸರ್ಕಾರದ ಮಹಾತ್ವಾಕಾಂಕ್ಷಿ ಕಾರ್ಯಕ್ರಮ. ಚಿತ್ರಕಲೆ, ಸಾಮಾನ್ಯ ಗಣಿತ, ಸ್ಪೋಕನ್ ಇಂಗ್ಲಿಷ್, ಸಾಮಾನ್ಯ ಜ್ಞಾನ, ಆರೋಗ್ಯ ಮಾಹಿತಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡುವ ಅವಕಾಶವಿತ್ತು.

ವಿದ್ಯಾವಾಹಿನಿ ಎಂಬ ಅಂತರ್ಜಾಲ ವಿಳಾಸ ಆಯ್ಕೆ ಮಾಡಿಕೊಂಡರೆ, ವಿವರ ದೊರೆಯುತ್ತದೆ. ಅದರಲ್ಲಿ ತಾವು ಇಷ್ಟಪಟ್ಟ ಶಾಲೆಯನ್ನೇ ಆಯ್ಕೆ ಮಾಡಿಕೊಳ್ಳಬಹುದು. ನಂತರ ಅರ್ಜಿ ಭರ್ತಿ ಮಾಡಿದ ನಂತರ ಶಾಲೆಗೆ ಶಾಲಾ ಮುಖ್ಯ ಶಿಕ್ಷಕರ ಅನುಮತಿ ಮೇರೆಗೆ  ಪಾಠ ಮಾಡಬಹುದು’ ಎನ್ನುತ್ತಾರೆ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶಿವಮೊಗ್ಗ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಾಯತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT