ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಚ್ಚಿನ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್‌!

ಜಿಲ್ಲೆಯ ಎಲ್ಲೆಡೆ ಸೋಲು–ಗೆಲುವಿನದೇ ಲೆಕ್ಕಾಚಾರ; ಪಂಚಾಯ್ತಿ ಚುನಾವಣಾ ಫಲಿತಾಂಶದ ಕಾತರ
Last Updated 19 ಫೆಬ್ರುವರಿ 2016, 7:06 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣಾ ಫಲಿತಾಂಶ ಫೆ. 23ರಂದು ಪ್ರಕಟವಾಗಲಿದ್ದು, ಗ್ರಾಮೀಣ ಜನರ ಕಾತರ ಹೆಚ್ಚಿದೆ. ಫಲಿತಾಂಶ ಕುರಿತು ಅಭ್ಯರ್ಥಿಗಳ ಮನದಲ್ಲಿ ಕುತೂಹಲದ ಜತೆಗೆ, ಸೋಲಿನ ಭೀತಿಯೂ ಆವರಿಸಿದೆ.

ಮತದಾನ ಮುಗಿದ ದಿನದಿಂದಲೂ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಜಯ ಗಳಿಸುತ್ತಾನೆ. ಯಾವ ಪಕ್ಷ ಅಧಿಕ ಸ್ಥಾನ ಗಳಿಸಲಿದೆ ಎನ್ನುವುದೇ ನಿತ್ಯ ಸಾರ್ವಜನಿಕರ ಚರ್ಚೆಯ ವಸ್ತುವಾಗಿದೆ. 

ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಂದ ಯಾರು ಗೆಲ್ಲುತ್ತಾರೆ? ತಾಲ್ಲೂಕು ಪಂಚಾಯ್ತಿಗೆ ಯಾರು ಪ್ರವೇಶಿಸಲಿದ್ದಾರೆ? ಯಾರು ಎಷ್ಟು ಮತ ಗಳಿಸಲಿದ್ದಾರೆ? ಗೆಲುವು– -ಸೋಲಿಗೆ ಕಾರಣವಾಗುವ ಅಂಶಗಳಾವುವು? ಯಾವ ಜಾತಿಯವರು ಯಾರ ಪರವಾಗಿ ಮತ ಚಲಾಯಿಸಿದ್ದಾರೆ? ಎಂಬ ಹಲವು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಫಲಿತಾಂಶಕ್ಕಾಗಿ ತೆರೆಮರೆಯಲ್ಲಿ ಬೆಟ್ಟಿಂಗ್ ಕೂಡ ಸದ್ದಿಲ್ಲದೇ ನಡೆಯುತ್ತಿದೆ.

ಈ ಬಾರಿ ಜಿಲ್ಲಾ ಪಂಚಾಯ್ತಿಯಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ? ಯಾರಿಗೆ ಎಷ್ಟು ಸೀಟು ಸಿಗಲಿದೆ ಎಂಬ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗುತ್ತಿದೆ.

ಜೋರಾದ ಬೆಟ್ಟಿಂಗ್ ಪಾಲಿಟಿಕ್ಸ್:  ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಫಲಿತಾಂಶದ ಬೆಟ್ಟಿಂಗ್ ಭರಾಟೆ ಜೋರಾಗಿರುವ ಬಗ್ಗೆ ಮಾಹಿತಿ ಕೇಳಿಬರುತ್ತಿವೆ. ಗೆಲ್ಲುವ ಅಭ್ಯರ್ಥಿ ಯಾರು? ಸೋಲುವ ಅಭ್ಯರ್ಥಿ ಯಾರು? ಎರಡನೇ ಸ್ಥಾನಕ್ಕೆ ಯಾರು ಬರುತ್ತಾರೆ? ಮೂರನೇ ಸ್ಥಾನ ಪಡೆಯುವರು ಯಾರು? ಎಷ್ಟು ಲೀಡ್‌ನಲ್ಲಿ 
ಗೆಲ್ಲುತ್ತಾರೆ? ಯಾವ ಬೂತ್‌ನಲ್ಲಿ ಯಾವ ಅಭ್ಯರ್ಥಿಗೆ ಹೆಚ್ಚು ಮತ? ಎಂಬಿತ್ಯಾದಿ ವಿಷಯಗಳ ಆಧಾರದ ಮೇಲೆ ಬೆಟ್ಟಿಂಗ್ ತೆರೆಮರೆಯಲ್ಲಿ ಚುರುಕುಗೊಂಡಿದೆ.

ಪ್ರತಿಷ್ಠಿತ ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ತಂತ್ರಗಳನ್ನು ಚುನಾವಣೆ ಸಂದರ್ಭದಲ್ಲಿ ಹೆಣೆದಿದ್ದವು. ಪಕ್ಷೇತರ ಅಭ್ಯರ್ಥಿಗಳು ಮತ್ತು ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಸಹಜವಾಗಿ ಮತದಾರರ ದೃಷ್ಟಿ ಯಾರ ಮೇಲೆ ಎಂಬುದು ಈಗ ಕುತೂಹಕ್ಕೆ ಎಡೆಮಾಡಿಕೊಟ್ಟಿದೆ. ಈ ಬಾರಿ ಪಂಚಾಯ್ತಿ ಚುನಾವಣೆ ಫಲಿತಾಂಶ ರಾಷ್ಟ್ರೀಯ ಪಕ್ಷಗಳ ವರ್ಚಸ್ಸಿನ ಮೇಲೂ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.

ಮುಖಂಡರ ಚಿತ್ತ:   ಚುನಾವಣೆ ಘೋಷಣೆಯಾದ ದಿನದಿಂದ ಮತದಾರರಿಗೆ ಪ್ರಭುಗಳಿಗೆ ಸಿಕ್ಕಲ್ಲೆಲ್ಲ ವಿಧೇಯವಾಗಿ ಕೈ ಮುಗಿಯುತ್ತಿದ್ದ, ಕಾಲಿಗೆ ಬೀಳುತ್ತಿದ್ದ, ಬೆನ್ನು ಬಿಡದೆ ಕಾಡುತ್ತಿದ್ದ ರಾಜಕಾರಣಿಗಳು ಫಲಿತಾಂಶಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

ಜಿಲ್ಲೆಯ 31 ಕ್ಷೇತ್ರಗಳಲ್ಲಿ ಒಟ್ಟು 128 ಅಭ್ಯರ್ಥಿಗಳು, 6 ತಾಲ್ಲೂಕುಗಳ 97 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ 356 ಅಭ್ಯರ್ಥಿಗಳು ಭವಿಷ್ಯದ
ಹಾದಿಯ ಕನವರಿಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ  ಕಾಂಗ್ರೆಸ್‌ನ 31, ಬಿಜೆಪಿಯ 29 ಹಾಗೂ ಜೆಡಿಎಸ್ 24, ಬಿಎಸ್‌ಪಿ 4,
ಜೆಡಿಯು 2 ಹಾಗೂ 38  ಪಕ್ಷೇತರರ ಹಣೆ ಬರಹ ಅನಾವರಣಗೊಳ್ಳಲು ಇನ್ನೂ 5 ದಿನ ಕಾಯಬೇಕಿದೆ.

ಪಂಚಾಯ್ತಿ ಚುನಾವಣೆಯ ಚರ್ಚೆ, ಲೆಕ್ಕಚಾರ ಮತ್ತು ವಿಶ್ಲೇಷಣೆಗಳ ಭರಾಟೆ ಜೋರಾಗಿದ್ದರೂ, ಫಲಿತಾಂಶಕ್ಕಾಗಿ ಎದರು ನೋಡಬೇಕಾದಿತು. ಬರುವ ಮಂಗಳವಾರ ಈ ಎಲ್ಲ ಚರ್ಚೆ, ಕುತೂಹಲಗಳಿಗೆ ಉತ್ತರ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT