ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನೆಲುಬಿಗೆ ಕಂಟಕ ತರುವ ‘ರಸ್ತೆ ಉಬ್ಬುಗಳು’

ಸವಾರ್ ಲೈನ್ ರಸ್ತೆಯಲ್ಲಿ ಸವಾರರಿಗೆ ನಿತ್ಯ ಪೀಕಲಾಟ, ಕಾಮಾಕ್ಷಿ ಬೀದಿ ರಸ್ತೆಯಲ್ಲಿ 8 ಉಬ್ಬುಗಳು
Last Updated 5 ಡಿಸೆಂಬರ್ 2016, 5:09 IST
ಅಕ್ಷರ ಗಾತ್ರ

ಶಿವಮೊಗ್ಗ: ಆಗಸದೆತ್ತರ ಮೆಲೇಳುವ ರಸ್ತೆಯ ದೂಳು, ಹೊಂಡಗಳ ನಡುವಿನ ರಸ್ತೆಯಲ್ಲಿ ಸಾಗುವ ವಾಹನ ಸವಾರರಿಗೆ ದಿಢೀರ್ ಎದುರಾಗಿ ಬೆನ್ನೆಲುಬಿಗೇ ಕಂಟಕ ತರುವ ರಸ್ತೆ ಉಬ್ಬುಗಳು.
–ಇದು ಶಿವಮೊಗ್ಗ ನಗರದಲ್ಲಿ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟು ಮಾಡುವ ರಸ್ತೆಗಳ ಚಿತ್ರಣ. 

ಜನವಸತಿ ಸ್ಥಳಗಳಲ್ಲಿ ಅತಿಯಾದ ವೇಗದ ಪರಿಣಾಮ ಉಂಟಾಗುವ ಅಪಘಾತ ತಪ್ಪಿಸಲು ರಸ್ತೆ ಉಬ್ಬು ನಿರ್ಮಿಸಲಾಗುತ್ತದೆ. ಆದರೆ, ನಗರದ ಹಲವು ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಉಬ್ಬು ನಿರ್ಮಿಸಿರುವುದು ವಾಹನ ಸವಾರರಿಗೆ ಕಿರಿಕಿರಿಯಾಗಿದೆ.

ಶಾಲಾ ಕಾಲೇಜು ಪ್ರದೇಶ, ಆಸ್ಪತ್ರೆ ಹಾಗೂ ಜನದಟ್ಟಣೆ ಪ್ರದೇಶದಲ್ಲಿ ಹಾಗೂ ರಸ್ತೆ ತಿರುವಿನ ಪ್ರದೇಶದಲ್ಲಿ ಅಪಘಾತ ಸುರಕ್ಷಾ ದೃಷ್ಟಿಯಿಂದ ವೈಜ್ಞಾನಿಕವಾದ ರಸ್ತೆ ಉಬ್ಬುಗಳನ್ನು ಕೆಲವೆಡೆ ನಿರ್ಮಿಸಲಾಗಿದೆ. ಇನ್ನು ಹಲವು ಭಾಗಗಳಲ್ಲಿ ವಿರಳ ಜನ ವಸತಿ ಪ್ರದೇಶಗಳಲ್ಲಿಯೂ ಬೇಕಾಬಿಟ್ಟಿಯಾಗಿ ರಸ್ತೆ ನಿಯಂತ್ರಕ ಅಳವಡಿಸಲಾಗಿದೆ.

ನಗರದ ಸವಾರ್ ಲೈನ್ ರಸ್ತೆಯ ಶಿವಮೊಗ್ಗ ಡಯಾಗ್ನೋಸ್ಟಿಕ್ ಬಳಿ ಎರಡು ಭಾಗಗಳಲ್ಲಿ ರಸ್ತೆ ಉಬ್ಬು ಅಳವಡಿಸಲಾಗಿದೆ. ಈ ರಸ್ತೆ ನಿಯಂತ್ರಕಗಳಿಂದಲೇ ಕೆಲವು ಸಂದರ್ಭ ಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ.  ವಾಹನ ಸವಾರರು ಅರಿವಿಲ್ಲದೆ ವೇಗವಾಗಿ ವಾಹನ ಚಲಾಯಿಸುತ್ತಾರೆ. ರಸ್ತೆ ಉಬ್ಬುಗಳ ಕುರಿತು ಸೂಚನಾ ಫಲಕ ಅಳವಡಿಸದ ಕಾರಣ ಹಲವು ಬಾರಿ ಅವಘಡ ಸಂಭವಿಸಿವೆ.

ಅಗತ್ಯ ಇರುವ ಕಡೆ ರಸ್ತೆ ಉಬ್ಬುಗಳನ್ನೇ ಹಾಕಿಲ್ಲ. ಸದಾ ಜನ ಸಂದಣಿ ಇರುವ ಜನ ವಸತಿ ಪ್ರದೇಶ ಗಾಂಧಿ ಬಜಾರ್‌ ಮುಖ್ಯರಸ್ತೆಯಲ್ಲೇ ಒಂದೂ ರಸ್ತೆ ಉಬ್ಬು ಅಳವಡಿಸಿಲ್ಲ. ಕೀರ್ತಿ ನಗರ, ಹೊಸಮನೆ, ಸೀಗೆಹಟ್ಟಿ, ಓ.ಟಿ. ರಸ್ತೆ, ಶೇಷಾದ್ರಿಪುರಂ, ಕುವೆಂಪು ರಸ್ತೆ. ವಿದ್ಯಾನಗರ, ತಿರುಪಳಯ್ಯನ ಬೀದಿಯಲ್ಲಿ ನಿಯಮ ಬಾಹಿರವಾಗಿ ಉಬ್ಬು ನಿರ್ಮಿಸಲಾಗಿದೆ. ಇಂತಹ ಅವೈಜ್ಞಾನಿಕ ರಸ್ತೆ ನಿಯಂತ್ರಕಗಳಿಂದ ಜಾಗರೂಕರಾಗಿ ವಾಹನ ಚಲಾಯಿಸ ದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕಾಮಾಕ್ಷಿ ಬೀದಿ ರಸ್ತೆಯಲ್ಲಿ ಲಕ್ಷ್ಮೀ ಮೆಡಿಕಲ್ಸ್‌ವರೆಗೆ 8 ಉಬ್ಬುಗಳನ್ನು ಹಾಕಲಾಗಿದೆ. ರಸ್ತೆ ನಿಯಂತ್ರಕ ದಾಟಲು ಸವಾರರು ವಾಹನಗಳ ವೇಗ ಕಡಿಮೆ ಮಾಡಿ, ಮತ್ತೆ ವೇಗ ಕಂಡುಕೊಳ್ಳು ವಷ್ಟರಲ್ಲಿ ಇನ್ನೊಂದು ಉಬ್ಬು ಕಾದಿರುತ್ತದೆ. ಹೀಗಾಗಿ ಕಾಮಾಕ್ಷಿ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ಕೀರ್ತಿನಗರ, ಹೊಸಮನೆ ಬಡಾವಣೆಗಳಲ್ಲಿ ಕಾರು ಹಾಗೂ ದ್ವಿಚಕ್ರ ವಾಹನ ಸಂಚರಿಸುವಾಗ ವಾಹನದ ಕೆಳ ಭಾಗಕ್ಕೆ ಉಬ್ಬು ತಗುಲಿ ಹಲವು ವಾಹನಗಳು ಸ್ಥಳದಲ್ಲೇ ಕೆಟ್ಟು ನಿಲ್ಲುತ್ತವೆ. ವಾಹನದಲ್ಲಿ ಕುಳಿತ ಹಿಂಬದಿ ಸವಾರರು ಕೆಳಗೆ ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ.  

‘ನಗರದಲ್ಲಿ  ರಸ್ತೆ ಉಬ್ಬು ಬೇಕಾಬಿಟ್ಟಿಯಾಗಿ  ಹಾಕಲಾಗಿದೆ.  ಅಪಘಾತ ತಡೆ ಯಲು ಹಾಕಿದ ಈ ಅವೈಜ್ಞಾನಿಕ  ಉಬ್ಬುಗಳಿಂದಲೇ ಅಪಘಾತಗಳು ಹೆಚ್ಚುತ್ತಿರುವುದು ವಿಪರ್ಯಾಸ. ಸಂಬಂಧಪಟ್ಟವರು ಕೂಡಲೇ ರಸ್ತೆ ಉಬ್ಬುಗಳನ್ನು ತೆಗೆದು ಹಾಕಬೇಕು’ ಎಂದು ಒತ್ತಾಯಿಸುತ್ತಾರೆ ನಟರಾಜ್ ಮಂಡಗದ್ದೆ.
‘ಗಾಂಧಿಬಜಾರ್‌ ಒಳ ರಸ್ತೆಗಳಲ್ಲಿ ಕಾಂಕ್ರೀಟ್ ಉಬ್ಬುಗಳು ಸವಾರರಿಗೆ ತ್ರಾಸದಾಯಕವಾಗಿದೆ. ಉಬ್ಬು ದಾಟಿಸು ವಾಗ ವಾಹನಗಳು ನಿಯಂತ್ರಣಕ್ಕೆ ಸಿಗುವುದಿಲ್ಲ. ಹಾಗಾಗಿ,ವೈಜ್ಞಾನಿಕವಾಗಿ ಉಬ್ಬುಗಳನ್ನು ಅಳವಡಿಸಬೇಕು’ ಎನ್ನುತ್ತಾರೆ ಪ್ರವೀಣ್ ಕೇಸರಿ.

‘ನಿತ್ಯವೂ ಈ ಅಪಾಯಕಾರಿ ಉಬ್ಬುಗಳ ಮೇಲೆ ಸಂಚರಿಸಿ, ಬೆನ್ನು ನೋವು ಕಾಡುತ್ತಿದೆ. ನಿತ್ಯವೂ ಈ ರಸ್ತೆಯ ಮೇಲೆ  ಬೇಸರದಿಂದಲೇ ಓಡಾಡುತ್ತಿದ್ದೇವೆ’ ಎನ್ನುತ್ತಾರೆ ವಸುಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT