ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಶಾಲೆ ಸ್ಥಿತಿ ಶೋಚನೀಯ!

ಕಸ್ತೂರ ಬಾ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಳಿನ ಕಥೆ
Last Updated 1 ಜುಲೈ 2015, 10:18 IST
ಅಕ್ಷರ ಗಾತ್ರ

ಶಿವಮೊಗ್ಗ:  ಮಳೆ ಬಂದರೆ ಇಲ್ಲಿನ ಒದ್ದೆ ನೆಲದಲ್ಲೇ ಪಾಠ, ತೆಂಗಿನಮರದಿಂದ ಉದುರುವ ಕಾಯಿಗಳ ಶಬ್ದಕ್ಕೆ ಅರೆ ಕ್ಷಣ ಬೆಚ್ಚು ಬೀಳುವ ಮಕ್ಕಳು, ಗಬ್ಬೆಂದು ಮೂಗಿಗೆ ಹೊಡೆಯುವ ಶೌಚದ ವಾಸನೆ...

ಇದು ನಗರದ ಕಸ್ತೂರಿ ಬಾ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.1915ರಲ್ಲಿ ಆರಂಭವಾದ ಈ ಶಾಲೆ ಇದೀಗ ಶತಮಾನದ ಹೊಸ್ತಿಲಲ್ಲಿದೆ.

1ರಿಂದ 7ನೇ ತರಗತಿವರೆಗೆ ಇಲ್ಲಿ ಕಲಿಕೆಗೆ ಅವಕಾಶವಿದೆ. ಮೂವರು ಶಿಕ್ಷಕಿಯರು ಇರುವ ಈ ಶಾಲೆಯಲ್ಲಿ ಕೇವಲ 25 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಯಶೋದಮ್ಮ, ಎಂ.ಬಸಮ್ಮ, ವಿ.ಯಶೋದ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಬಿಸಿಯೂಟದ ಕೆಲಸಕ್ಕೆ ಇಬ್ಬರು ನಿಯೋಜನೆಗೊಂಡಿದ್ದಾರೆ. 

ಹಿಂದೆ ಈ ಶಾಲೆಯಲ್ಲಿ ಸ್ಲೇಟು, ಬಳಪ ಹಿಡಿದುಕೊಂಡವರು, ಪಾಟಿ ಚೀಲ ಹಾಕಿಕೊಂಡು ಓದಿದವರು ಇಂದು ನಗರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕೆಲವರು ರಾಜಕಾರಣಿಗಳಾಗಿದ್ದಾರೆ, ಇನ್ನು ಕೆಲವರು ಉದ್ಯಮಿಗಳಾಗಿದ್ದಾರೆ. ಗಾಂಧಿ ಬಜಾರ್‌ನ ಬಹುತೇಕ ನಿವಾಸಿಗಳು ಇದೇ ಶಾಲೆಯಲ್ಲಿ ಓದಿದ್ದಾರೆ. ಇಲ್ಲಿನ ಪಾಲಿಕೆ ಸದಸ್ಯ ರಾಮು ಮತ್ತು ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ  ಇಲ್ಲಿನ ವಿದ್ಯಾರ್ಥಿಗಳು.

ಉದುರುವ ತೆಂಗಿನ ಕಾಯಿಗೆ ಹೆದರುವ ಮಕ್ಕಳು: ಶಾಲಾ ಆವರಣದಲ್ಲಿ ತೆಂಗಿನಮರಗಳಿದ್ದು, ಆಗಾಗ್ಗೆ ಮರಗಳಿಂದ ಕಾಯಿಗಳು ಶಾಲಾ ಛಾವಣಿ ಮೇಲೆ ಬೀಳುತ್ತಿದ್ದರೆ, ಪಟಾಕಿ ಹೊಡೆದಂತಹ ಶಬ್ದ ಶಾಲಾ ಹಿಂಭಾಗದಲ್ಲಿರುವ ಎರಡು ಪಾಳುಬಿದ್ದ ಕೊಠಡಿಗಳಲ್ಲಿ ಪುಂಡ, ಪೋಕರಿಗಳು ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಸ್ಥಳದಲ್ಲಿ ಇಸ್ಪೀಟ್ ಎಲೆ ಸೇರಿದಂತೆ ಮದ್ಯದ ಬಾಟಲಿಗಳು, ಕಾಣಸಿಗುತ್ತವೆ.

‘ಬೆಳಕಿನ ಸಮಯದಲ್ಲೇ ಇಲ್ಲಿ ಜೂಜಾಟ ನಡೆಯುತ್ತದೆ. ಪೊಲೀಸರಿಗೆ ತಿಳಿಸುತ್ತೇವೆ, ಸ್ವಲ್ಪ ದಿನಗಳ ತಣ್ಣಗಾಗುತ್ತದೆ. ಮತ್ತೆ  ಅದು ಪುನಾರವರ್ತನೆಯಾಗುತ್ತದೆ’ ಎನ್ನುತ್ತಾರೆ ಶಿಕ್ಷಕಿ ವಿ.ಯಶೋಧಾ.ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಮೂತ್ರದ ವಾಸನೆ ಗಬ್ಬೆನ್ನುತ್ತದೆ.

ಶಾಲೆಯ ಆವರಣದಿಂದಲೇ ಜನರು ಗಾಂಧಿಬಜಾರ್‌ ರಸ್ತೆ ಕಡೆಗೆ ಓಡಾಡುತ್ತಾರೆ.ಮುರಿದ ಹೆಂಚುಗಳು, ಕಿತ್ತುಹೋದ ತಗಡುಗಳೇ ಶಾಲೆಗೆ ಆಶ್ರಯವಾಗಿವೆ. ಮಳೆಗಾಲದಲ್ಲಿ ಮಕ್ಕಳಿಗೆ ಪಾಠ ಮಾಡುವುದು ದುಸ್ತರ ಎಂದುಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ಶಿಕ್ಷಕಿಯರು.
******
ಶಾಲೆಯ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಆದರೆ, ಶಾಲೆಯ ಪರಿಸ್ಥಿತಿ ಹೀಗಿದೆ. ಇಲ್ಲಿ ಓದಿದಂತಹ ಹಳೆಯ ವಿದ್ಯಾರ್ಥಿಗಳು ಶಾಲೆ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು.
ಯಶೋದಮ್ಮ, ಹಿರಿಯ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT