ಮಗುವಿಗೆ ಮುಳುವಾದ ‘ಪೆಂಟಾ 3’ ಚುಚ್ಚುಮದ್ದು..!

6
ಆಲಮೇಲ ಸರ್ಕಾರಿ ಆಸ್ಪತ್ರೆಯಲ್ಲಿ ಎಡವಟ್ಟು; ಕಡಣಿ ಗ್ರಾಮದ ಕಂದಮ್ಮನ ಗೋಳಾಟ

ಮಗುವಿಗೆ ಮುಳುವಾದ ‘ಪೆಂಟಾ 3’ ಚುಚ್ಚುಮದ್ದು..!

Published:
Updated:
ಪೆಂಟಾ 3 ಚುಚ್ಚುಮದ್ದನ್ನು ಸರಿಯಾಗಿ ನೀಡದಿದ್ದರಿಂದ ತೊಂದರೆಗೀಡಾಗಿರುವ 10 ತಿಂಗಳ ಕಂದ ವಿರೂಪಾಕ್ಷಿ

ಆಲಮೇಲ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕೂವರೆ ತಿಂಗಳ ಮಗುವಿಗೆ ಹಾಕಿದ ‘ಪೆಂಟಾ 3’ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಮಗು ತೀವ್ರ ಅನಾರೋಗ್ಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಲುಗಿದೆ. ಚಿಕಿತ್ಸೆಗಾಗಿ ಪೋಷಕರು ಹೈರಾಣಕ್ಕೆ ಬಿದ್ದಿದ್ದಾರೆ.

ಕಡಣಿ ಗ್ರಾಮದ ಶ್ರೀಶೈಲ ಕತ್ತಿ, ಮಾಲಶ್ರೀ ಕತ್ತಿ ತಮ್ಮ ಕಂದ ವಿರೂಪಾಕ್ಷಿ ನಾಲ್ಕೂವರೆ ತಿಂಗಳವನಿದ್ದಾಗ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪೆಂಟಾ 3 ಚುಚ್ಚುಮದ್ದು ಕೊಡಿಸಿದ್ದಾರೆ. ಕೆಲ ದಿನಗಳ ಬಳಿಕ ಇಂಜೆಕ್ಷನ್‌ ಚುಚ್ಚಿದ ತೊಡೆಯ ಜಾಗದಲ್ಲಿ ಭಾವು ಬಂದಿದೆ.

ಇದರಿಂದ ಬೆಚ್ಚಿಬಿದ್ದ ದಂಪತಿ ಮಗುವಿನ ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆಗೆ ಅಲೆದಿದ್ದಾರೆ. ಪ್ರಯೋಜನವಾಗಿಲ್ಲ. ಮಗುವಿನ ಸದೃಢತೆಗಾಗಿ ಚುಚ್ಚಿಸಿದ ಚುಚ್ಚುಮದ್ದೇ ಮುಳುವಾಗಿದ್ದು, ಪೋಷಕರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಐದೂವರೆ ತಿಂಗಳಿನಿಂದ ಆಸ್ಪತ್ರೆಗಳಿಗೆ ಅಲೆದ ಪೋಷಕರು ಸೋತಿದ್ದಾರೆ. ಕೊನೆಗೆ ಮೀರಜ್‌ನಲ್ಲಿ ಚಿಕಿತ್ಸೆಗೆ ದಾಖಲಿಸಿ ತೊಡೆಯ ಭಾಗದಲ್ಲಿ ಬೆಳೆದಿದ್ದ ದುರ್ಮಾಂಸ ತೆಗೆಸಲು ₨ 70000 ವ್ಯಯಿಸಿದ್ದು, ಈ ಆರ್ಥಿಕ ಹೊರೆಯ ಭಾರವನ್ನು ಕುಟುಂಬ ಹೊರಲಾಗದಾಗಿದೆ.

‘ನನ್ನ ಸಹೋದರನ ಮಗನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆಯಬೇಕಾಯಿತು. ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಬಡವರಿಗೆ ಸರ್ಕಾರಿ ಆಸ್ಪತ್ರೆಯೇ ದಿಕ್ಕು. ಅಂಥಹುದರಲ್ಲಿ ಹಿಂಗಾದರೇ ಹೆಂಗೇ ?’ ಎಂಬ ಅಸಮಾಧಾನ ಶ್ರೀಶೈಲ ಕತ್ತಿ ಸಹೋದರ ಲಕ್ಷ್ಮೀಪುತ್ರ ಕತ್ತಿ ಅವರದ್ದು.

ಘಟನೆ ಕುರಿತಂತೆ ವೈದ್ಯರನ್ನು ಪ್ರಶ್ನಿಸಿದರೆ, ‘ಒಂದು ಸಾವಿರಕ್ಕೆ ಎರಡು ಪ್ರಕರಣಗಳು ಈ ರೀತಿಯಾಗುವ ಸಾಧ್ಯತೆಯಿರುತ್ತದೆ. ಉದ್ದೇಶ ಪೂರ್ವಕವಾದ ತಪ್ಪು ನಡೆದಿಲ್ಲ. ಕೆಲ ಸಂದರ್ಭಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಚುಚ್ಚುಮದ್ದನ್ನು ನೀಡಿದ್ದರಿಂದಲೇ ಮಗುವಿಗೆ ಹೀಗಾಗಿದೆ ಎಂಬುದನ್ನು ಕೆಲ ವರದಿಗಳು ದೃಢಪಡಿಸಿವೆ. ಈ ಬೆಳವಣಿಗೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ’ ಎಂದು ಲಕ್ಷ್ಮೀಕಾಂತ ಕತ್ತಿ ಹೇಳಿದರು.

‘ಚುಚ್ಚಮದ್ದು ನೀಡಿದ ಬಳಿಕ ಮಗುವಿನ ಪೋಷಕರೂ ಶುಶ್ರೂಷಕರು ನೀಡುವ ಸಲಹೆಗಳನ್ನು ಸರಿಯಾಗಿ ಪಾಲಿಸಬೇಕು. ಶುಶ್ರೂಷಕಿಯೂ ಸಲಹೆಗಳನ್ನು ನೀಡಿ, ಪೋಷಕರಿಗೆ ಪಾಲಿಸಲು ತಿಳಿ ಹೇಳಬೇಕು. ಪೆಂಟಾ 3 ಔಷಧಿಯಿಂದ ಯಾವುದೇ ತೊಂದರೆ ಮಗುವಿಗಾಗಿಲ್ಲ’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಶಾಂತ ಧೂಮಗೊಂಡ ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !