ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ಕೊಟ್ಟೇವು ರಾಮನಗರಕ್ಕೆ ನೀರು ಬಿಡೆವು: ಶಾಸಕ ಸುರೇಶ ಗೌಡ

Published 29 ಮಾರ್ಚ್ 2024, 14:01 IST
Last Updated 29 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ಗುಬ್ಬಿ: ‘ರಕ್ತ ಕೊಟ್ಟೇವು ಆದರೆ ಹೇಮಾವತಿ ನಾಲೆಯಿಂದ ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಡಿ.ಕೆ. ಶಿವಕುಮಾರ್ ಅವರಿಗೆ ದಮ್‌ ಇದ್ದರೆ ನೀರು ತೆಗೆದುಕೊಂಡು ಹೋಗಲಿ ನೋಡೋಣ’ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ ಗೌಡ ಸವಾಲು ಹಾಕಿದರು.

ಪಟ್ಟಣದ ಹೊರವಲಯದ ಹೇರೂರಿನಲ್ಲಿ ಶುಕ್ರವಾರ ನಡೆದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜಂಟಿ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್‌ನವರು ಕೇವಲ ಒಂದು ಸಮುದಾಯವನ್ನು ಒಲೈಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲೇ ಕಾಂಗ್ರೆಸ್ ಕೇವಲ 40ರಿಂದ 50 ಸೀಟು ಮಾತ್ರ ಗೆಲ್ಲಲಿದೆ ಎಂದರು.

ಜೆಡಿಎಸ್ ಮುಖಂಡ ಬಿ.ಎಸ್. ನಾಗರಾಜು ಮಾತನಾಡಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದಲೇ ಜೆಡಿಎಸ್ ವರಿಷ್ಠರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಕಾಂಗ್ರೆಸ್‌ನವರು ಸೋಮಣ್ಣ ಅವರನ್ನು ಹೊರಗಿನವರು ಎಂದು ಬಿಂಬಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೊರ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ಕಾಂಗ್ರೆಸಿಗರು ಏಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದರು.

ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಅಭಿಲಾಷೆಯಂತೆ ಅಭ್ಯರ್ಥಿಯಾಗಿದ್ದೇನೆ. ದೇವೇಗೌಡರ ಗರಡಿಯಲ್ಲಿ ಪಳಗಿರುವ ನನಗೆ ಎಲ್ಲ ರಾಜಕೀಯ ಪಟ್ಟುಗಳು ತಿಳಿದಿವೆ ಎಂದರು.

ಜೆಡಿಎಸ್ ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಮಾತನಾಡಿ, ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಗೆಲುವಿಗೆ ಶ್ರಮಿಸುತ್ತೇವೆ. ತಾಲ್ಲೂಕು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರಾಮಾಣಿಕವಾಗಿ ಹೋರಾಟ ನಡೆಸಲು ಸಿದ್ಧವಿದ್ದು, ಬಿಜೆಪಿ ತಾಲ್ಲೂಕು ಮುಖಂಡರು ವೈಮನಸ್ಯ ಬಿಟ್ಟು ಒಗ್ಗಟ್ಟಿನಿಂದ ಹೋರಾಡುವ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.

ಮುಖಂಡರಾದ ಎಸ್.ಡಿ. ದಿಲೀಪ್ ಕುಮಾರ್, ಚಂದ್ರಶೇಖರ ಬಾಬು ಸಭೆ ಮಾತನಾಡಿದರು.

ಸಂಸದ ಜಿ.ಎಸ್. ಬಸವರಾಜು, ಎಂಎಲ್‌ಸಿ ಚಿದಾನಂದ ಗೌಡ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್. ಹುಚ್ಚಯ್ಯ, ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಭೈರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಪಂಚಾಕ್ಷರಿ, ಮುಖಂಡರಾದ ನಂಜೇಗೌಡ, ನವ್ಯಬಾಬು, ಚಂದ್ರಶೇಖರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕವೀರಯ್ಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT