ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ 6 ತಿಂಗಳ ವೇತನ ಬಾಕಿ

‘ದಾಖಲೆ’ಯ ಗುಂಗಲ್ಲಿ ಕಾರ್ಮಿಕರ ಕಡೆಗಣನೆ, ಕಾರ್ಮಿಕರ ಕಷ್ಟಕ್ಕೆ ಕಿವಿಗೊಡದ ಅಧಿಕಾರಿಗಳು
Published 25 ಫೆಬ್ರುವರಿ 2024, 4:11 IST
Last Updated 25 ಫೆಬ್ರುವರಿ 2024, 4:11 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರನ್ನು ಕಾಯಂಗೊಳಿಸಿದ ಸರ್ಕಾರ, ಅವರಿಗೆ ವೇತನ ‘ಕಾಯಂ’ ಮಾಡಿಲ್ಲ. ಕಳೆದ 6 ತಿಂಗಳಿನಿಂದ ಸಂಬಳ ಸಿಗದೆ ಪರದಾಡುತ್ತಿದ್ದಾರೆ. ಜೀವನ ನಡೆಸುವುದು ಕಷ್ಟಕರವಾಗಿದ್ದು, ಕೆಲಸ ತೊರೆಯುವ ಬಗ್ಗೆ ಯೋಚಿಸುವಂತಾಗಿದೆ.

ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ 121 ಮಂದಿ ಪೌರ ಕಾರ್ಮಿಕರನ್ನು 2023ರ ಆಗಸ್ಟ್‌ ತಿಂಗಳಲ್ಲಿ ಕಾಯಂ ಮಾಡಲಾಯಿತು. ಪ್ರಾರಂಭದ ಒಂದು ತಿಂಗಳು ಮಾತ್ರ ಸಂಬಳ ನೀಡಲಾಯಿತು. ಅಲ್ಲಿಂದ ಈವರೆಗೂ ವೇತನ ನೀಡಿಲ್ಲ.

ಸೂಕ್ತ ಸಮಯಕ್ಕೆ ಸಂಬಳ ಸಿಗದೆ ಪೌರ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಮನೆಗೆ ಬೇಕಾದ ಅಗತ್ಯ ಸಾಮಗ್ರಿ ಖರೀದಿಸಲು ಸಾಲ ಮಾಡಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟಕರವಾಗಿದೆ. ಪೌರ ಕಾರ್ಮಿಕರ ವಿಷಯದಲ್ಲಿ ಸರ್ಕಾರ ತಾತ್ಸಾರ ಭಾವನೆ ಮುಂದುವರಿಸಿದೆ. ಇಡೀ ನಗರದ ಸ್ವಚ್ಛತೆಗೆ ಶ್ರಮಿಸುವ ಕಾರ್ಮಿಕರ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕಾರ್ಮಿಕ ವಲಯದಿಂದ ಕೇಳಿ ಬಂದಿದೆ.

ಕಳೆದ ಜನವರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ‘ಈ ವಿಷಯವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ವೇತನ ಪಾವತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ವೇತನ ಬಿಡುಗಡೆಯಾಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಲು ಮಾತ್ರ ಸೀಮಿತವಾಗಿದ್ದಾರೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಪೌರ ಕಾರ್ಮಿಕರ ವೇತನದ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಜಾಣ ಕಿವುಡರಾಗಿದ್ದಾರೆ ಎಂದು ಪೌರ ಕಾರ್ಮಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆ ‘ಗಿನ್ನಿಸ್‌’ ದಾಖಲೆ ಮಾಡಲು ಪೌರ ಕಾರ್ಮಿಕರನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿತ್ತು. ಮೊದಲಿಗೆ ಸ್ಮಾರ್ಟ್‌ ಸಿಟಿ ಮತ್ತು ಪಾಲಿಕೆಯ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 1 ಲಕ್ಷ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ‘ತುಮಕೂರು’ ಎಂಬ ಕನ್ನಡ ಪದದ ಕಲಾಕೃತಿ ರಚಿಸಲಾಗಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆಯಿಂದ 1.35 ಲಕ್ಷ ಬಾಟಲಿಗಳನ್ನು ಬಳಸಿ ‘ನಮ್ಮ ಸಂವಿಧಾನ’ ಎಂದು ರಚಿಸಿದ್ದರು.

ಈ ಎರಡೂ ಕಲಾಕೃತಿಗಳ ರಚನೆಗೆ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಿ, ಕ್ರೀಡಾಂಗಣಕ್ಕೆ ತಂದು, ನಂತರ ತೆರವುಗೊಳಿಸುವಲ್ಲಿ ಪೌರ ಕಾರ್ಮಿಕರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅಧಿಕಾರಿಗಳ ‘ಗಿನ್ನಿಸ್‌ ದಾಖಲೆ’ಯ ಗೀಳಿಗೆ ಪೌರ ಕಾರ್ಮಿಕರು ಹಗಲಿರುಳು ಎನ್ನದೆ ದುಡಿದಿದ್ದರು. ಈ ಕೆಲಸದ ನಂತರ ಅಧಿಕಾರಿಗಳು ‘ದಾಖಲೆ’ಯ ಗುಂಗಿನಲ್ಲಿ ಪೌರ ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಪೌರ ಕಾರ್ಮಿಕರು ದೂರಿದರು.

ವೇತನಕ್ಕಾಗಿ ಬೀದಿಗೆ ಇಳಿಯಬೇಕಾಗಿದೆ

ಅನೇಕ ಪೌರ ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬಾಡಿಗೆ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ಹಲವು ಬಾರಿ ಮನೆ ಮಾಡಿದರೂ ಕಿಂಚಿತ್ತೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಾರ್ಮಿಕರ ಕಷ್ಟಗಳಿಗೆ ಕಿವಿಗೊಡುತ್ತಿಲ್ಲ. ಈ ಹಿಂದೆ ನಮ್ಮನ್ನು ‘ಕಾಯಂ ಮಾಡಿ’ ಎಂದು ಹೋರಾಟ ಮಾಡಿದ್ದ ಕಾರ್ಮಿಕರು ಈಗ ‘ವೇತನ ಕೊಡಿ’ ಎಂದು ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‌.ಕೆ.ಸುಬ್ರಮಣ್ಯ ಸೈಯದ್ ಮುಜೀಬ್ ಸಿಐಟಿಯು ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT