ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲ್‌ಟೆಕ್ಸ್ ಸರ್ಕಲ್; ಕಂಡಲ್ಲೆಲ್ಲ ಗುಂಡಿ

ಕುಣಿಗಲ್, ಗುಬ್ಬಿ, ಜೆ.ಸಿ ರಸ್ತೆ, ಮಂಡಿ ಪೇಟೆ ಸಂಪರ್ಕದ ಪ್ರಮುಖ ವೃತ್ತ, ಸದಾ ವಾಹನ ದಟ್ಟಣೆಯ ಕೇಂದ್ರ
Last Updated 9 ಜೂನ್ 2019, 19:30 IST
ಅಕ್ಷರ ಗಾತ್ರ

ತುಮಕೂರು: ನಗರದ ಹೃದಯಭಾಗದಲ್ಲಿರುವ ಈ ವೃತ್ತದಲ್ಲಿ ಬೈಕ್‌ ಸವಾರರು ಸಂಚರಿಸಬೇಕಾದರೆ ಕೈಯಲ್ಲಿ ಜೀವ ಹಿಡಿದು ಸಂಚರಿಸಬೇಕು. ಬಿ.ಎಚ್.ರಸ್ತೆ–206 ಹೆದ್ದಾರಿ, ಕುಣಿಗಲ್ ರಸ್ತೆ, ಜೆ.ಸಿ ರಸ್ತೆ, ಸಂಪರ್ಕ ಕೊಂಡಿಯಾಗಿದ್ದು, ಸದಾ ವಾಹನ ಸಂಚಾರ ದಟ್ಟಣೆಯ ವೃತ್ತವಾಗಿದೆ.

ನಾಲ್ಕು ಕಡೆ ಸಂಪರ್ಕ ಕಲ್ಪಿಸುವ ಈ ವೃತ್ತದ ನಾಲ್ಕೂ ಕಡೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ವಾಹನಗಳು ಸರಾಗವಾಗಿ ಸಾಗಲು ಇವುಗಳು ಅಡಿಗಡಿಗೆ ಅಡ್ಡಿಯುಂಟು ಮಾಡುತ್ತಿವೆ. ಸಿಗ್ನಲ್ ಬಿದ್ದ ತಕ್ಷಣ ಶರವೇಗದಲ್ಲಿ ಸಾಗುವ ವಾಹನ ಸವಾರರು ಪಲ್ಟಿ ಹೊಡೆಯುತ್ತಲೇ ಇರುತ್ತಾರೆ.

ದೂಳಿನಿಂದ ಬಚಾವಾಗಲು ವಾಹನಗಳ ಸಂದಿಗೊಂದಿಗಳಲ್ಲಿ ನುಸುಳಿಕೊಂಡು ಬಚಾವಾಗಲು ಮುಂದಾಗುವ ಬೈಕ್ ಸವಾರ ನೋಡು ನೋಡುತ್ತಿದ್ದಂತೆಯೇ ಈ ರಸ್ತೆಯಲ್ಲಿನ ಗುಂಡಿಗಳಿಗೆ ಬಿದ್ದು ಗೋಳಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಸಿಗ್ನಲ್ ನೋಡಿಕೊಂಡು ಸಾಗಬೇಕೊ, ಗುಂಡಿಗಳನ್ನು ನೋಡಿಕೊಂಡು ಸಾಗಬೇಕೊ ಗೊತ್ತಾಗದ ಸ್ಥಿತಿ ಪ್ರಯಾಣಿಕರದ್ದು. ಇಂತಹದ್ದರ ನಡುವೆ ಸಿಗ್ನಲ್ ಜಂಪ್ ವೀರರೂ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಹೆದ್ದಾರಿಯೂ ಆಗಿರುವುದರಿಂದ ಭಾರಿ ಸರಕು ವಾಹನಗಳ ಸಂಚಾರವೂ ಹೆಚ್ಚಾಗಿರುತ್ತದೆ. ನಿತ್ಯ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಗುಂಡಿಗೆ ಬಿದ್ದು ಏಳುವವರು ಇದ್ದೇ ಇರುತ್ತಾರೆ.

ಪ್ರಮುಖ ವೃತ್ತವಾಗಿರುವುದರಿಂದ ಇದೇ ವೃತ್ತದಲ್ಲಿ ಕುಣಿಗಲ್ ಕಡೆಯಿಂದ, ಗುಬ್ಬಿ ಕಡೆಯಿಂದ ಬರುವ ಪ್ರಯಾಣಿಕರ ವಾಹನಗಳ ನಿಲುಗಡೆ ಇದೇ ವೃತ್ತದಲ್ಲಿ ಮಾಡುವುದರಿಂದ ಮತ್ತಷ್ಟು ವಾಹನ ಸಂಚಾರ ದಟ್ಟಣೆಗೆ ಕಾರಣವಾಗಿದೆ.

ನಗರದ ಪ್ರಮುಖ ಮಾರುಕಟ್ಟೆಯಾದ ಮಂಡಿಪೇಟೆಗೆ, ಕೇಂದ್ರ ಬಸ್ ನಿಲ್ದಾಣ, ಮಹಾನಗರ ಪಾಲಿಕೆ ಸಂಪರ್ಕ ಕಲ್ಪಿಸುವ ವೃತ್ತವು ಇದೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದೇ ವೃತ್ತದಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಇದೆ. ಕುಣಿಗಲ್, ಗುಬ್ಬಿ ಕಡೆಯಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಗಳು, ಅವರ ಸಂಬಂಧಿಕರು ಇದೇ ವೃತ್ತದಲ್ಲಿ ಇಳಿದು ಬರುತ್ತಾರೆ. ಹೀಗೆ ಇಳಿದು ಬರುವಾಗ ಗುಂಡಿಗಳಲ್ಲಿ ಆಯತಪ್ಪಿ ಬಿದ್ದ ಉದಾಹರಣೆಗಳು ಇವೆ.

ಕಂಡಲ್ಲೆಲ್ಲ ದೂಳು ದೂಳು
ಈ ವೃತ್ತದಲ್ಲಿನ ಗುಂಡಿ ಬಿದ್ದು ಸಿಕ್ಕಾಪಟ್ಟೆ ದೂಳು ಆವರಿಸುತ್ತಿರುವುದರಿಂದ ಸಿಗ್ನಲ್ ದೀಪಗಳೇ ಕೆಲವೊಂದು ಬಾರಿ ವಾಹನ ಸವಾರರಿಗೆ ಕಾಣುವುದಿಲ್ಲ. ಈ ಸುಡು ಬಿಸಿಲಿನಲ್ಲಂತೂ ಸಿಗ್ನಲ್‌ಗಳಲ್ಲಿ ನಿಲ್ಲುವುದೇ ಕಷ್ಟ. ಈ ವೃತ್ತದಲ್ಲಿ ದೂಳಿನ ಮಜ್ಜನವೂ ಆಗುತ್ತದೆ.

ಮುಖ್ಯವಾಗಿ ತುಮಕೂರು ಕಡೆಯಿಂದ ಕುಣಿಗಲ್ ರಸ್ತೆ ತಿರುವಿನಲ್ಲಿ ರಸ್ತೆಯೇ ಕಿತ್ತು ಹೋಗಿದೆ. ವಾಹನ ತಿರುಗಿಸುತ್ತಿದ್ದಂತೆಯೇ ಪಲ್ಟಿ ಹೊಡೆಯುತ್ತವೆ. ನಿಧಾನವಾಗಿ ಸಾಗಿದರಾಯಿತು ಎಂದು ಸಾಗಲು ಮುಂದಾದರೆ ಕಂಡಲ್ಲೆಲ್ಲ ಸರಕು ವಾಹನ, ಆಟೋ, ಖಾಸಗಿ ಬಸ್‌ಗಳು ನಿಲುಗಡೆ ಮಾಡಿರುತ್ತವೆ. ಇದೂ ಕೂಡಾ ಅಪಘಾತಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT