ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಳಿಯಾರು | ಹೆಸರು ಬಿತ್ತನೆಗೆ ಹಿನ್ನಡೆ: ಬಹುವಾರ್ಷಿಕ ಬೆಳೆಗಳತ್ತ ರೈತರ ಚಿತ್ತ

Published 19 ಮೇ 2024, 14:10 IST
Last Updated 19 ಮೇ 2024, 14:10 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿ ವ್ಯಾಪ್ತಿಯ ಪ್ರಮುಖ ಪೂರ್ವ ಮುಂಗಾರು ಬೆಳೆಯಾದ ಹೆಸರು ಬಿತ್ತನೆಗೆ ಹಿನ್ನಡೆಯಾಗುತ್ತಿದೆ.

ಮಳೆ ಕೊರತೆ ಹಾಗೂ ರೈತರಲ್ಲಿ ಬಹುವಾರ್ಷಿಕ ಬೆಳೆಗಳನತ್ತ ಹೆಚ್ಚಿನ ಆಸಕ್ತಿ ಮೊಳೆತ ಕಾರಣ ಹೆಸರು ಬೆಳೆ ಪ್ರದೇಶ ಕ್ಷೀಣಿಸುತ್ತಿದೆ.

ಹೆಸರು ಬೆಳೆಯಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿತ್ತು. ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೊರ ರಾಜ್ಯದ ಖರೀದಿದಾರರು ಬರುತ್ತಿದ್ದ ಕಾರಣ ಹೆಸರು ಬೆಳೆಗೆ ಉತ್ತಮ ಬೆಲೆ ಸಿಗುತ್ತಿತ್ತು. ಹೋಬಳಿ ಮಾತ್ರವಲ್ಲದೆ ಪಕ್ಕದ ಪಂಚನಹಳ್ಳಿ, ಶ್ರಿರಾಮಪುರ, ಮತ್ತೋಡು ಹೋಬಳಿಗಳಿಂದಲೂ ರೈತರು ಹೆಸರನ್ನು ಇಲ್ಲಿನ ಮಾರುಕಟ್ಟೆಗೆ ತರುತ್ತಿದ್ದರು.

ಬಹುಪಾಲು ರೈತರಿಗೆ ಹಿಂಗಾರು ಬಿತ್ತನೆಯ ಬೀಜ, ಗೊಬ್ಬರ ಕೊಳ್ಳಲು ಸಹಕಾರಿಯಾಗುತ್ತಿತ್ತು. ಭರಣಿ ಮಳೆ ಉತ್ತಮವಾಗಿ ಬಂದರೆ ಅತಿ ಹೆಚ್ಚು ಪ್ರದೇಶ ಬಿತ್ತನೆಯಾಗಿ ಮುಂದಿನ ದಿನಗಳಲ್ಲಿ ಒಂದೆರಡು ಹದ ಮಳೆ ಬಂದರೆ ರೈತರ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಹೆಸರು ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. 2021-22ನೇ ಸಾಲಿನಲ್ಲಿ 1,400 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಇದ್ದು, ಕೇವಲ 600 ಹೆಕ್ಟೇರ್‌ ಬಿತ್ತನೆ ಆಗಿತ್ತು. 2022-23ರಲ್ಲಿ 1,200 ಹೆಕ್ಟೆರ್‌ ಬಿತ್ತನೆ ಗುರಿ ಇದ್ದು 500 ಹೆಕ್ಟೆರ್‌ನಲ್ಲಿ ಮಾತ್ರ ಬಿತ್ತನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ 1000 ಹೆಕ್ಟೆರ್‌ ಬಿತ್ತನೆ ಗುರಿ ಇದ್ದು, 25 ಹೆಕ್ಟೇರ್‌ ಅಷ್ಟೇ ಬಿತ್ತನೆಯಾಗಿದೆ.

ಹೋಬಳಿ ವ್ಯಾಪ್ತಿಯಲ್ಲಿ ಕೆಲ ವರ್ಷಗಳಿಂದ ನಿರೀಕ್ಷಿತ ಮಳೆ ಬಾರದ ಕಾರಣ ರೈತರು ಹೆಸರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಬಹು ವಾರ್ಷಿಕ ಬೆಳೆಗಳಾದ ಅಡಿಕೆ, ತೆಂಗು ನೆಡಲು ಮುಂದಾಗಿರುವುದು ಪ್ರಮುಖ ಕಾರಣವಾಗಿದೆ. ಈ ಬಾರಿ ಭರಣಿ ಮಳೆ ಕೊನೆ ಘಟ್ಟದಲ್ಲಿ ಬಂದ ಕಾರಣ ಬಿತ್ತನೆಗೆ ಹಿನ್ನಡೆಯಾಗಿದೆ.

ಈ ಬಾರಿ ಅಲಸಂದೆ ಬಿತ್ತನೆ ಹೆಚ್ಚಾಗಿದ್ದು, 50 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಂದು ಕಾಲದಲ್ಲಿ ದ್ವಿದಳ ಧಾನ್ಯಗಳಾದ ತೊಗರಿ, ಉದ್ದು ಬೆಳೆಗಳ ತವರೂರಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ರೈತರು ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಿದ ಪರಿಣಾಮ ಆಹಾರ ಬೆಳೆಗಳ ಇಳುವರಿ ಕುಸಿದಿದೆ.

ಹೋಬಳಿ ವ್ಯಾಪ್ತಿಯ ರೈತರು ಆರ್ಥಿಕ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಅಡಿಕೆಯ ಒಲವು ಹೆಚ್ಚಿದೆ. ದ್ವಿದಳ ಧಾನ್ಯಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸುವ ದಿನ ದೂರವಿಲ್ಲ
-ಸುನೀಲ್‌ ರೈತ ಕೆಂಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT