ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ: ಕೊಬ್ಬರಿ ಖರೀದಿಗೆ ರೈತ ಸಂಘ ಒತ್ತಾಯ

Published 29 ಫೆಬ್ರುವರಿ 2024, 14:08 IST
Last Updated 29 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ಗುಬ್ಬಿ: ರೈತರ ಹೆಸರಿನಲ್ಲಿ ಅಧಿಕಾರ ನಡೆಸುವ ಯಾವುದೇ ಸರ್ಕಾರ, ರಾಜಕೀಯ ಪಕ್ಷಗಳು ರೈತರ ಪರವಾಗಿ ನಿಲ್ಲದೆ, ನಿರಂತರವಾಗಿ ಶೋಷಿಸುತ್ತಲೇ ಬಂದಿವೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ದೂರಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿ ಧಾರಣೆ ಕುಸಿತದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೊಬ್ಬರಿ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರ ಖರೀದಿಯನ್ನು ಮುಂದೂಡುತ್ತಲೇ ಇದೆ. ಕೊಬ್ಬರಿ ಖರೀದಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗದಿದ್ದರೆ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಕೊಬ್ಬರಿ ಖರೀದಿ ಕೇಂದ್ರವನ್ನು ಕೆಲವೇ ತಿಂಗಳಿಗೆ ಸೀಮಿತಗೊಳಿಸದೆ, ವರ್ಷವಿಡೀ ತೆರೆಯುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಒಬ್ಬ ರೈತರಿಂದ ಕೇವಲ 15 ಕ್ವಿಂಟಲ್ ಕೊಬ್ಬರಿ ಖರೀದಿಸುತ್ತೇವೆ ಎಂದು ಸರ್ಕಾರ ಆದೇಶಿಸುವ ಮೂಲಕ ರೈತರು ಉತ್ಪಾದಿಸುವ ಕೇವಲ ಶೇ 25ರಷ್ಟು ಮಾತ್ರ ಖರೀದಿಗೆ ಮುಂದಾಗಿದೆ. ಇದು ಖಂಡನೀಯ ಎಂದರು.

ರೈತರ ಎಲ್ಲ ಕೊಬ್ಬರಿಯನ್ನು ಸರ್ಕಾರ ಖರೀದಿಸಿ ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಇಲ್ಲವಾದರೆ ರೈತ ಸಂಘವು ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ರೈತರಾದ ಧರ್ಮೇಗೌಡ, ಎಂ.ಡಿ. ಸುರೇಶ್, ದಿವ್ಯ ಪ್ರಕಾಶ್, ರೈತ ಸಂಘಟನೆಯ ಜಗದೀಶ್, ಮಂಜಣ್ಣ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT