ಮಂಗಳವಾರ, ಮೇ 26, 2020
27 °C
ನಿತ್ಯ 25,000ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ; ವೀರಶೈವ ಸಮಾಜದ ಸಹಕಾರ

ಜ್ಯೋತಿ ಗಣೇಶ್ ನೇತೃತ್ವದಲ್ಲಿ ದಾಸೋಹ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಶಾಸಕ ಜಿ.ಬಿ.ಜ್ಯೋತಿ ಗಣೇಶ್ ನೇತೃತ್ವದಲ್ಲಿ ಕಳೆದ 12 ದಿನಗಳಿಂದ ನಿರ್ಗತಿಕರಿಗೆ, ಬಡವರಿಗೆ 3 ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಲಾಕ್‌ಡೌನ್ ತೆರವುಗೊಳ್ಳುವವರೆಗೂ ಮುಂದುವರಿಯಲಿದೆ.

ಶಾಸಕರು, ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಉದ್ಯಮಿ ರಮೇಶ್ ಬಾಬು, ವಿಘ್ನೇಶ್ವರ ಕಂಫರ್ಟ್ ಮಾಲೀಕರಾದ ಚಂದ್ರಮೌಳಿ, ಅಡುಗೆ ಕಂಟ್ರಾಕ್ಟರ್ ಪ್ರಸನ್ನ ಅವರನ್ನು ಸಂಪರ್ಕಿಸಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಊಟ ತಯಾರಿಸಲು ವ್ಯವಸ್ಥೆ ಮಾಡುವ ಬಗ್ಗೆ ಸಮಾಲೋಚಿಸಿದ್ದರು.

ಮೊದಲಿಗೆ ನಿತ್ಯ ‌ಅಲೆಮಾರಿ ಜನಾಂಗದವರಿಗೆ, ಪರಸ್ಥಳದಿಂದ ಬಂದು ಗುಡಿಸಲುಗಳಲ್ಲಿ ವಾಸವಾಗಿರುವ ಒಂದು ಸಾವಿರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧರಿಸಿದ್ದರು.

ನಂತರ ಇತರ ಸಮಾಜದ ಮುಖಂಡರ ಸಭೆಗಳನ್ನು ಶಾಸಕರು ನಡೆಸಿದರು. ಈ ಸಂಕಷ್ಟದಲ್ಲಿ ತಾವುಗಳೂ ಭಾಗಿ ಆಗಬೇಕು ಎಂದ ವಿನಂತಿಸಿದರು.

ಶಾಸಕರು ಮಂಡಿಪೇಟೆಯ ವರ್ತಕರ ಮಳಿಗೆಗಳಿಗೆ ತೆರಳಿದಾಗ ವರ್ತಕರು ದವಸ ಧಾನ್ಯಗಳ ನೀಡಿ ಸಹಕರಿಸಿದರು. ತುಮಕೂರು ಗ್ರೈನ್ ಮಂರ್ಚೆಟ್ಸ್ ಅಸೋಸಿಯಷನ್‍ ಅಧ್ಯಕ್ಷ ಕೆ.ಟಿ.ಕೋ.ಪರಮಣ್ಣ ಮತ್ತು ಆರ್.ಜೆ.ಎನ್.ಸುರೇಶ್ ಜತೆಗೂಡಿ ಶಾಸಕರು ಎಪಿಎಂಸಿ ಯಾರ್ಡ್‍ನಲ್ಲಿಯೂ ದವಸ ಧಾನ್ಯಗಳನ್ನು ಸಂಗ್ರಹಿಸಿದರು.

ಈ ಎಲ್ಲರ ಸಹಕಾರದಲ್ಲಿ ಈಗ ನಿತ್ಯ 25,000ಕ್ಕೂ ಹೆಚ್ಚು ಜನರಿಗೆ ಜ್ಯೋತಿಗಣೇಶ್ ಅವರ ನೇತೃತ್ವದಲ್ಲಿ ಊಟದ ವ್ಯವಸ್ಥೆಯನ್ನು ತುಮಕೂರು ನಾಗರಿಕ ಸಮಿತಿ ಮಾಡಿದೆ. ಜಿಲ್ಲಾಡಳಿತದ ಸಹಕಾರ ಸಹ ಇದೆ.

ಪಡಿತರ: ‘ಸಂಕಷ್ಟದ ಸಮಯದಲ್ಲಿ ಬಡವರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ತಾರತಮ್ಯ ಮಾಡದೆ ಪಡಿತರ ವಿತರಣೆ ಅಂಗಡಿ ಮಾಲೀಕರು ಸೇವಾ ಮನೋಭಾವದಿಂದ ಸರ್ಕಾರದ ಆದೇಶದಂತೆ ಪಡಿತರ ನೀಡಬೇಕು ಎಂದು ಜ್ಯೋತಿಗಣೇಶ್ ತಿಳಿಸಿದರು.

ಬಿ.ಎ.ಗುಡಿಪಾಳ್ಯ ಮತ್ತು ಜ್ಯೋತಿಪುರದ ಪಡಿತರ ವಿತರಣೆ ಅಂಗಡಿಗಳಿಗೆ ಭೇಟಿ ನೀಡಿ ಮಾತನಾಡಿದರು.

ಅಂಗಡಿಯಲ್ಲಿ ಅಕ್ಕಿ ಮತ್ತು ಗೋಧಿಯ ಗುಣಮಟ್ಟ ಪರಿಶೀಲಿಸಿದರು. ಕಳಪೆ ಆಹಾರ ಧಾನ್ಯಗಳನ್ನು ವಿತರಿಸಬಾರದು ಎಂದು ಸೂಚಿಸಿದರು.

****

ಜೈನ ಸಮಾಜದಿಂದ ಕೊಡುಗೆ
ಜ್ಯೋತಿ ಗಣೇಶ್ ನೇತೃತ್ವದಲ್ಲಿ ನಡೆಯುತ್ತಿರುವ ದಾಸೋಹ ವ್ಯವಸ್ಥೆಗೆ ದಿಗಂಬರ ಜೈನ ಸಮಾಜ ಅಧ್ಯಕ್ಷ ಎಸ್.ವಿ.ನಾಗರಾಜು, ಸನ್ಮತಿ ಅಜಿತ್, ಮಣಿಕ್‍ರಾಜು, ವಿನಯ್ ಜೈನ್ ಹಾಗೂ ನಿರ್ದೇಶಕರು ₹ 3 ಲಕ್ಷದ ದವಸಧಾನ್ಯಗಳನ್ನು ನೀಡಿದ್ದಾರೆ.

ಶ್ವೇತಾಂಬರ ಜೈನ ಸಮಾಜದ ಮುಖಂಡರಾದ ಉತ್ತಮಕುಮಾರ್ ಜೈನ್, ಜೆ.ಪಿ. ಜೈನ್, ಟಿ.ಎಸ್. ಮೋಹನ್ ಕುಮಾರ್ ಜೈನ್, ದಿನೇಶ್ ಹಾಗೂ ನಿರ್ದೇಶಕರು ₹ 3 ಲಕ್ಷದ ದವಸಧಾನ್ಯಗಳನ್ನು ನೀಡಿದ್ದಾರೆ.

ಚೇಂಬರ್ ಆಫ್ ಕಾಮರ್ಸ್‍ನ ಕಾಪರಾಡ್ ಚಂದ್ರಶೇಖರ್ ₹ 80 ಸಾವಿರಕ್ಕೂ ಅಧಿಕ ಮೊತ್ತದ ಶೇಂಗಾ ಎಣ್ಣೆ, ಅಮಾನಿಕೆರೆ ಮುಂಜಾನೆ ಗೆಳೆಯರಿಂದ ಪಾಲಿಕೆ ಮಾಜಿ ಸದಸ್ಯ ವಾಸಣ್ಣ ಉಚಿತ ತರಕಾರಿ ವ್ಯವಸ್ಥೆ ಮಾಡಿದ್ದಾರೆ.

ಜಿಲ್ಲಾ ಬ್ರಾಹ್ಮಣ ಸಮಾಜ, ಶಂಕರ ಮಠ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಆದರ್ಶ ನಗರದ ಸಾಯಿ ಬಾಬಾ ದೇವಸ್ಥಾನದಿಂದಲೂ ಸಹಕಾರ ದೊರೆತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು