ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈನಿಕರಿಗೆ ಸಿಗದ ಕನಿಷ್ಠ ಸೌಲಭ್ಯ: ಶಿವಣ್ಣ

ಭಾರತೀಯ ಸೇನಾ ದಿನ ಆಚರಣೆ
Published 15 ಜನವರಿ 2024, 14:31 IST
Last Updated 15 ಜನವರಿ 2024, 14:31 IST
ಅಕ್ಷರ ಗಾತ್ರ

ತುಮಕೂರು: ‘ಇಂದಿಗೂ ಮಾಜಿ ಸೈನಿಕರಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ವೇದಿಕೆಗಳಲ್ಲಿ ಭಾಷಣ ಮಾಡುವುದರ ಬದಲು ಮಾಜಿ ಸೈನಿಕರಿಗೆ ಸಿಗಬೇಕಾದ ಸವಲತ್ತು ನೀಡುವ ಕಡೆಗೆ ಗಮನ ಹರಿಸಬೇಕು’ ಎಂದು ಮಾಜಿ ಸೈನಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಣ್ಣ ಒತ್ತಾಯಿಸಿದರು.

ನಗರದ ಸಿದ್ಧಗಂಗಾ ಮಠದ‌ಲ್ಲಿ ಸೋಮವಾರ ಮಾಜಿ ಸೈನಿಕರ ಸಂಘದಿಂದ ಭಾರತೀಯ ಸೇನಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಸೈನಿಕರಿದ್ದಾರೆ. ದೇಶದ ಜನರ ರಕ್ಷಣೆಗೆ ದುಡಿದ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳು ಮರೀಚಿಕೆಯಾಗಿವೆ’ ಎಂದು ವಿಷಾದಿಸಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ‘ಸೇನಾ ಸಿಬ್ಬಂದಿಯ ಧೈರ್ಯ, ಬದ್ಧತೆ, ತ್ಯಾಗವನ್ನು ನಾವೆಲ್ಲ ಗೌರವಿಸಬೇಕು. ರಾಷ್ಟ್ರ ರಕ್ಷಣೆಗೆ ಅವಿರತ ಸೇವೆ ಸಲ್ಲಿಸುತ್ತಾರೆ. ನಾವು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರು ಮುಖ್ಯ ಕಾರಣ’ ಎಂದರು.

ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಾಂಡುರಂಗ, ‘ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರ ಸ್ಮರಣೆಗಾಗಿ ಭಾರತೀಯ ಸೇನಾ ದಿನ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿಸಲು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ‘ನಮ್ಮ ಸೈನಿಕರು ಕುಟುಂಬ, ಜಾತಿ, ಧರ್ಮಕ್ಕಿಂತ ಮೇಲೇರುತ್ತಾರೆ. ರಾಷ್ಟ್ರದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಭಾರತೀಯ ಸೈನಿಕರ ಶೌರ್ಯ, ಸಮಗ್ರತೆ, ಮಾನವೀಯತೆಯನ್ನು ಇಡೀ ವಿಶ್ವವೇ ಗೌರವಿಸುತ್ತದೆ ಮತ್ತು ಗುರುತಿಸುತ್ತದೆ’ ಎಂದು ಹೇಳಿದರು.

ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಲಿಂಗಣ್ಣ, ಕಾರ್ಯಾಧ್ಯಕ್ಷ ವಿ.ನಾಗರಾಜು, ಪದಾಧಿಕಾರಿಗಳಾದ ಲೋಕೇಶ್ ಬಿದರೆ, ಸ್ವರೂಪವಾಣಿ, ಮುಖಂಡರಾದ ಯಶೋದ, ನಾಯಕ್ ಸುಬೇದಾರ್‌ ದರೋಜಿ, ಪ್ರದೀಪ್‍ಕುಮಾರ್, ಪ್ರಶಾಂತ್ ಗೋಡೆ, ವಾದಿರಾಜು ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT