ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ‘ಮೈತ್ರಿ’ಗೆ ಗೆಲುವು; ಸಚಿವರಿಗೆ ಮುಖಭಂಗ

ಬಿಜೆಪಿ ಜಯಭೇರಿ; ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ; ಜೆಡಿಎಸ್ ಶಕ್ತಿ ಪ್ರದರ್ಶನ
Published 5 ಜೂನ್ 2024, 8:08 IST
Last Updated 5 ಜೂನ್ 2024, 8:08 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿ– ಜೆಡಿಎಸ್ ಮೈತ್ರಿ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರಿಗೆ ಗೆಲುವು ತಂದುಕೊಟ್ಟಿದ್ದರೆ, ಕಾಂಗ್ರೆಸಿಗರ ನಿರಾಸಕ್ತಿ, ಒಗ್ಗಟ್ಟಿನ ಕೊರತೆಯಿಂದಾಗಿ ಎಸ್.ಪಿ.ಮುದ್ದಹನುಮೇಗೌಡ ಸೋಲು ಕಂಡಿದ್ದಾರೆ. ಜಿಲ್ಲೆಯ ಇಬ್ಬರು ಸಚಿವರು ಮುಖಭಂಗ ಅನುಭವಿಸಿದ್ದಾರೆ.

ಬಿಜೆಪಿ ಮತ್ತೊಮ್ಮೆ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದರೆ, ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ‘ಮೈತ್ರಿ’ ಪಕ್ಷಗಳ ಒಗ್ಗಟ್ಟು ಸೋಮಣ್ಣ ಗೆಲುವಿನ ದಡ ಸೇರಿಸಿದ್ದು, ಜೆಡಿಎಸ್ ನೀಡಿದ ‘ಬಲ’ ನಿರಾಯಾಸವಾಗಿ ಜಯಮಾಲೆಯನ್ನು ತಂದುಕೊಟ್ಟಿದೆ.

ಮೈತ್ರಿ ಪಕ್ಷಗಳಲ್ಲಿ ಕಂಡುಬಂದ ಒಗ್ಗಟ್ಟು ಕಾಂಗ್ರೆಸ್‌ ಪಾಳಯದಲ್ಲಿ ಕಾಣಿಸಲಿಲ್ಲ. ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿದ ಆರಂಭದಿಂದಲೇ ಅಪಸ್ವರ ಕಾಡಿತು. ಇದು ಚುನಾವಣೆ ಮುಗಿಯುವವರೆಗೂ ಮುಂದುವರಿಯಿತು. ಚುನಾವಣೆ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಹಾಗೂ ಸಚಿವ ಕೆ.ಎನ್.ರಾಜಣ್ಣ ಪ್ರಯತ್ನ ಕ್ಷೇತ್ರದಲ್ಲಿ ಕಾಣಿಸಲಿಲ್ಲ. ತಿಪಟೂರು ಶಾಸಕ ಕೆ.ಷಡಕ್ಷರಿ ಅಂತರ ಕಾಯ್ದುಕೊಂಡರು. ಗುಬ್ಬಿಯಲ್ಲಿ ಎಸ್.ಆರ್.ಶ್ರೀನಿವಾಸ್ ‘ಫಲ’ ಫಲಿಸಲಿಲ್ಲ.

‘ಮುದ್ದಹನುಮೇಗೌಡ ಅವರನ್ನು ನಾನು ಪಕ್ಷಕ್ಕೆ ಕರೆತಂದಿದ್ದಲ್ಲ. ಹೈ ಕಮಾಂಡ್ ನಿರ್ಧಾರ. ರಾಜಣ್ಣ ಹೇಳಿದ ಮೇಲೆ ಮುಗಿಯಿತು’ ಎಂದು ಪರಮೇಶ್ವರ ಹೇಳುವ ಮೂಲಕ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿಲ್ಲ ಎಂಬ ಸಂದೇಶ ರವಾನಿಸಿದ್ದರು. ಆ ಹಂತದಿಂದಲೇ ಒಂದು ರೀತಿಯ ಹಿನ್ನೆಲೆಗೆ ಜಾರಿಕೊಂಡರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿತ್ತು.

ಕೈ ಹಿಡಿಯದ ಗ್ಯಾರಂಟಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ ಎಂಬ ಅತಿಯಾದ ವಿಶ್ವಾಸವೂ ಮುಳುವಾಯಿತು. ಬೆಲೆ ಏರಿಕೆ, ನಿರುದ್ಯೋಗದಂತಹ ಪ್ರಮುಖ ಸಮಸ್ಯೆಗಳು ಮತಗಳಾಗಿ ಪರಿವರ್ತನೆ ಆಗಲಿವೆ ಎಂಬ ವಿಚಾರಕ್ಕೂ ಮನ್ನಣೆ ಸಿಕ್ಕಿಲ್ಲ. ‘ಗೌಡರು ಸಂಭಾವಿತರು’ ಎಂಬ ವಿಶೇಷಣವೂ ಮತಬುಟ್ಟಿ ತುಂಬಿಸಿಲ್ಲ. ಕೊನೆಗೆ ಯಾವ ಪ್ರಯತ್ನವೂ ಫಲ ನೀಡಿಲ್ಲ.

ಸೋಲಿನ ಸೇಡು: ಕಳೆದ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರ ಸೋಲಿಗೆ ಕಾರಣರು ಎನ್ನಲಾದ ಕೆ.ಎನ್.ರಾಜಣ್ಣ, ಮುದ್ದಹನುಮೇಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಒಂದು ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ರಾಜಣ್ಣ ನೇರವಾಗಿ ವಿರೋಧಿಸಿದ್ದರೆ, ಗೌಡರು ಪರೋಕ್ಷವಾಗಿ ಕಾರಣರಾಗಿದ್ದರು. ಅದೇ ಕಾರಣಕ್ಕೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ಸಮಯದಿಂದಲ್ಲೂ ಜೆಡಿಎಸ್ ನಾಯಕರು ಒಗ್ಗಟ್ಟು ಕಾಪಾಡಿಕೊಂಡರು. ಕೆರಳಿದವರಂತೆ ಕಾಂಗ್ರೆಸ್ ವಿರುದ್ಧವಾಗಿ, ಸೋಮಣ್ಣ ಪರವಾಗಿ ನಿಂತರು ಎಂದು ಪಕ್ಷದ ವಲಯದಲ್ಲಿ ಚರ್ಚೆಗಳು ನಡೆದಿವೆ.

ಕೈ ಬಿಟ್ಟ ಒಕ್ಕಲಿಗರು: ದೊಡ್ಡಗೌಡರ ಸೋಲು, ಅವರ ಕಣ್ಣೀರಿಗೆ ಒಕ್ಕಲಿಗ ಸಮುದಾಯ ಮರುಗಿದಂತೆ ಕಾಣುತ್ತದೆ. ಗೌಡರ ಸೋಲಿಗೆ ಕಾರಣರಾದವರಿಗೆ ‘ಪಾಠ’ ಕಲಿಸಿದ್ದಾರೆ. ‘ನನ್ನ ಸೋಲಿಗೆ ಕಾರಣರಾದವರನ್ನು ಸೋಲಿಸಬೇಕು. ಕಣ್ಣೀರು ತರಿಸಿದವರಿಗೆ ಪಾಠ ಕಲಿಸಿ’ ಎಂದು ದೇವೇಗೌಡರು ಮಾಡಿಕೊಂಡ ಮನವಿಗೆ ಒಕ್ಕಲಿಗರು ಸ್ಪಂದಿಸಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಇದು ಗೋಚರಿಸಿದೆ.

ತುರುವೇಕೆರೆ ಕ್ಷೇತ್ರವೊಂದರಲ್ಲೇ ಮುದ್ದಹನುಮೇಗೌಡ ಅವರಿಗಿಂತ ಸೋಮಣ್ಣಗೆ ಹೆಚ್ಚುವರಿಯಾಗಿ 43,964 ಮತಗಳು ಬಂದಿವೆ. ಸ್ವಲ್ಪ ಹೆಚ್ಚು ಕಡಿಮೆ ಗೌಡರಿಗಿಂತ ಎರಡು ಪಟ್ಟು ಹೆಚ್ಚು ಮತಗಳು ಬಂದಂತಾಗಿದೆ. 43 ಸಾವಿರ ಲೀಡ್ ಪಡೆದುಕೊಳ್ಳುವುದು ಸಾಮಾನ್ಯದ ಸಂಗತಿಯಲ್ಲ. ತುಮಕೂರು ಗ್ರಾಮಾಂತರದಲ್ಲಿ 28,820 ಮತಗಳು ಮೈತ್ರಿ ಅಭ್ಯರ್ಥಿಗೆ ಹೆಚ್ಚುವರಿಯಾಗಿ ಬಿದ್ದಿವೆ. ಗ್ರಾಮಾಂತರದಲ್ಲೂ ದೊಡ್ಡ ಗೌಡರ ಮಾತಿಗೆ ಮನ್ನಣೆ ಹೆಚ್ಚು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಒಕ್ಕಲಿಗರ ಬೆಂಬಲದಿಂದಾಗಿಯೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮತಗಳು ಬಂದಿವೆ ಎಂದು ಹೇಳಲಾಗುತ್ತಿದೆ.

ಪರೋಕ್ಷ ಸಹಕಾರ?: ಮುದ್ದಹನುಮೇಗೌಡ ಪಕ್ಷಕ್ಕೆ ಬರುವ ಮುನ್ನ ಸೋಮಣ್ಣ ಅವರಿಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಆಹ್ವಾನ ನೀಡಿದ್ದರು. ಲೋಕಸಭೆ ಟಿಕೆಟ್ ಭರವಸೆಯೂ ಸಿಕ್ಕಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನದ ಮಧ್ಯೆಯೇ ಇಬ್ಬರು ಸಚಿವರು ಬಂದು ಸಿದ್ಧಗಂಗಾ ಮಠದಲ್ಲಿ ಸೋಮಣ್ಣ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಕಾರ್ಯವನ್ನು ಹೊಗಳಿದ್ದರು. ಒಳ್ಳೆಯ ಸ್ನೇಹಿತರು ಎಂದು ಕೊಂಡಾಡಿದ್ದರು.

ಸಚಿವರ ಕ್ಷೇತ್ರದಲ್ಲಿ ಹಿನ್ನಡೆ

ಕನಿಷ್ಠ ಪಕ್ಷ ತಮ್ಮ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಮುನ್ನಡೆ ಕೊಡಿಸಲು ಇಬ್ಬರು ಸಚಿವರಿಗೂ ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆ ನಡೆದು ವರ್ಷ ಕಳೆಯುವುದರ ಹೊತ್ತಿನಲ್ಲೇ ಕ್ಷೇತ್ರದಲ್ಲಿ ತಮ್ಮ ಶಕ್ತಿ ಕುಗ್ಗಿದೆಯೇ? ಇಲ್ಲವೆ ಗೆಲ್ಲಿಸಲು ಪ್ರಯತ್ನ ಪಡಲಿಲ್ಲವೆ? ಯಾರು ಗೆದ್ದರೇನು? ಅದರ ಜವಾಬ್ದಾರಿ ನನಗೇಕೆ ಎಂದು ನಿರಾಸಕ್ತಿ ತಾಳಿದರೆ? ತಮ್ಮ ಕ್ಷೇತ್ರಗಳಲ್ಲೂ ಅಂತಹ ಪ್ರಯತ್ನ ಮಾಡದೆ ಕೈ ಬಿಟ್ಟರೆ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಬಿಜೆಪಿಯ ಅಬ್ಬರದ ಪ್ರಚಾರ ಜನರನ್ನು ತಲುಪಲು ಮಾಡಿದ ಪ್ರಯತ್ನ ಕಾಂಗ್ರೆಸ್ ಪಾಳಯದಲ್ಲಿ ಕಂಡು ಬರಲಿಲ್ಲ. ಇಬ್ಬರು ಸಚಿವರು ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಸಚಿವರು ಸವಾಲಾಗಿ ಸ್ವೀಕರಿಸಿದ್ದರೆ ಗೆಲ್ಲಿಸಿಕೊಳ್ಳುವುದು ಕಷ್ಟಕರವಾಗುತ್ತಿರಲಿಲ್ಲ. ಕೈ ಚಲ್ಲಿದರು ಎಂಬ ಮಾತುಗಳು ಪಕ್ಷದ ಪಾಳಯದಿಂದಲೇ ಕೇಳಿ ಬರುತ್ತಿವೆ.

ಪಕ್ಷಾಂತರಿ ಕಳಂಕ

ಮುದ್ದಹನುಮೇಗೌಡರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡುವ ಸಮಯದಲ್ಲೇ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ‘ಪಕ್ಷಾಂತರಿ’ ಎಂಬ ಹಣೆಪಟ್ಟಿ ಹೊತ್ತುಕೊಂಡೇ ಬಂದಿದ್ದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ರಾಜಕೀಯವಾಗಿ ನೆಲೆ ಕಂಡುಕೊಂಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ‘ಮೈತ್ರಿ’ಯಿಂದಾಗಿ ಸ್ಪರ್ಧೆ ಸಾಧ್ಯವಾಗಲಿಲ್ಲ. ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಪಕ್ಷಾಂತರ ಮಾಡಿದರು. ಅಲ್ಲೂ ಟಿಕೆಟ್ ಸಿಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾದ ನಂತರ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ಗೆ ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT