ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅವಧಿ ಮುಗಿದರೂ ಮುಂದುವರಿದ ಮೇಯರ್

ಹೊಸ ಮೇಯರ್ ಆಯ್ಕೆ ಮಾಡಲು ಸರ್ಕಾರದ ನಿರಾಸಕ್ತಿ
Published 23 ಡಿಸೆಂಬರ್ 2023, 6:35 IST
Last Updated 23 ಡಿಸೆಂಬರ್ 2023, 6:35 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ಮೇಯರ್ ಎಂ.ಪ್ರಭಾವತಿ ಹಾಗೂ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ ಅವರ ಅಧಿಕಾರ ಅವಧಿ ಮುಗಿದು ನಾಲ್ಕು ತಿಂಗಳಿಗೆ ಬಂದಿದ್ದು, ಪ್ರಸ್ತುತ ಅವರೇ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

ಮೇಯರ್, ಉಪಮೇಯರ್ ಅಧಿಕಾರ ಅವಧಿ ಒಂದು ವರ್ಷ. ಈ ಅವಧಿ ಮುಗಿಯುತ್ತಿದ್ದಂತೆ ಹೊಸದಾಗಿ ಮೀಸಲಾತಿ ಪ್ರಕಟಿಸಿ, ನೂತನ ಮೇಯರ್ ಆಯ್ಕೆಗೆ ನಗರಾಭಿವೃದ್ಧಿ ಇಲಾಖೆ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಸರ್ಕಾರದ ಮಟ್ಟದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಅವರೇ ಅಧಿಕಾರದಲ್ಲಿ ಮುಂದುವರಿದಿದ್ದು, ಮತ್ತೊಬ್ಬರಿಗೆ ಅವಕಾಶ ಕೈತಪ್ಪಿದಂತಾಗಿದೆ.

2022 ಸೆಪ್ಟೆಂಬರ್ 9ರಂದು ಪ್ರಭಾವತಿ ಮೇಯರ್‌ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಒಂದು ವರ್ಷದ ಅವಧಿ 2023 ಸೆಪ್ಟೆಂಬರ್ 8ಕ್ಕೆ ಕೊನೆಗೊಂಡಿದೆ. ಅವಧಿ ಮುಗಿದು ನಾಲ್ಕು ತಿಂಗಳಿಗೆ ಬಂದಿದ್ದು, ಹೊಸದಾಗಿ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಕೌನ್ಸಿಲ್‌ನ ಪ್ರಸಕ್ತ ಅವಧಿ 2023 ಜನವರಿ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಜನವರಿ ನಂತರ ಮಹಾನಗರ ಪಾಲಿಕೆಗೆ ಹೊಸದಾಗಿ ಚುನಾವಣೆ ನಡೆಯಬೇಕಿದೆ. ಕೌನ್ಸಿಲ್ ಅವಧಿ ಕೊನೆಗೊಳ್ಳುವ ಹಂತಕ್ಕೆ ಬಂದಿರುವುದರಿಂದ ಮೇಯರ್ ಆಯ್ಕೆಗೆ ಚುನಾವಣೆ ನಡೆಸಲು ಸರ್ಕಾರ ಮನಸ್ಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ಮೇಯರ್ ಅಧಿಕಾರ ಅವಧಿ ಪೂರ್ಣಗೊಂಡ ತಕ್ಷಣ ಆಯ್ಕೆ ಪ್ರಕ್ರಿಯೆ ನಡೆಸಿದ್ದರೆ ಹೊಸದಾಗಿ ಆಯ್ಕೆಯಾದವರಿಗೆ ನಾಲ್ಕೈದು ತಿಂಗಳ ಅವಧಿಯ ಅಧಿಕಾರವಾದರೂ ಸಿಗುತಿತ್ತು. ಸರ್ಕಾರದ ನಿರುತ್ಸಾಹದಿಂದ ಮತ್ತೊಬ್ಬರಿಗೆ ಸಿಗಬೇಕಿದ್ದ ಅವಕಾಶವನ್ನು ಕಿತ್ತುಕೊಂಡಂತಾಗಿದೆ ಎಂದು ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಮ್ಮೆ ಕೌನ್ಸಿಲ್ ಅಸ್ತಿತ್ವಕ್ಕೆ ಬಂದ ನಂತರ ಐದು ವರ್ಷ ಅಧಿಕಾರ ಅವಧಿ ಇರುತ್ತದೆ. ವರ್ಷಕ್ಕೆ ಒಬ್ಬರಂತೆ ಐದು ವರ್ಷಕ್ಕೆ ಐವರು ಮೇಯರ್ ಸ್ಥಾನ ಅಲಂಕರಿಸಬೇಕಿತ್ತು. ಪ್ರಸಕ್ತ ಕೌನ್ಸಿಲ್ ಅವಧಿಯಲ್ಲಿ ನಾಲ್ವರಿಗೆ ಮಾತ್ರ ಮೇಯರ್ ಸ್ಥಾನ ಸಿಕ್ಕಂತಾಗಿದ್ದು, ಸರ್ಕಾರದ ನಿರ್ಧಾರದಿಂದಾಗಿ ಮತ್ತೊಬ್ಬರು ಅವಕಾಶದಿಂದ ವಂಚಿತರಾಗಿದ್ದಾರೆ.

ಹಿಂದೆಯೂ ಇದೇ ಸ್ಥಿತಿ:

ಎಂ.ಪ್ರಭಾವತಿ ಅವರಿಗಿಂತ ಹಿಂದೆ ಮೇಯರ್ ಆಗಿದ್ದ ಬಿ.ಜಿ.ಕೃಷ್ಣಪ್ಪ ಸಹ ಆರು ತಿಂಗಳ ಕಾಲ ಹೆಚ್ಚುವರಿಯಾಗಿ ಅಧಿಕಾರ ಅನುಭವಿಸಿದ್ದರು. 2022 ಫೆಬ್ರುವರಿ 26ಕ್ಕೆ ಅವರ ಅಧಿಕಾರ ಅವಧಿ ಕೊನೆಗೊಂಡಿದ್ದರೂ, ಸೆಪ್ಟೆಂಬರ್ 8ರ ವರೆಗೆ ಅಧಿಕಾರದಲ್ಲಿ ಮುಂದುವರಿದಿದ್ದರು. ಈ ಸಂರ್ಭದಲ್ಲೂ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲು ನಿಧಾನಗತಿ ನಡೆ ಅನುಸರಿಸಿತ್ತು. ಮೀಸಲಾತಿ ವಿವಾದ ಕೋರ್ಟ್ ಮೆಟ್ಟಿಲೇರಿದ ಕಾರಣಕ್ಕೆ ಮೇಯರ್ ಆಯ್ಕೆ ಪ್ರಕ್ರಿಯೆ ಮುಂದಕ್ಕೆ ಹೋಗಿತ್ತು. ಹಾಗಾಗಿ ಕೃಷ್ಣಪ್ಪ ಅವರಿಗೆ 6 ತಿಂಗಳು ಹೆಚ್ಚುವರಿ ಕಾಲಾವಕಾಶ ಸಿಕ್ಕಿತ್ತು.

ಸಭೆ ವಿವಾದ:

ಮೇಯರ್ ಎಂ.ಪ್ರಭಾವತಿ ಅವರ ಅಧಿಕಾರ ಅವಧಿ ಮುಗಿದ ನಂತರ ಸಾಮಾನ್ಯ ಸಭೆ ನಡೆಸಲು ಮುಂದಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಅವಧಿ ಮುಗಿದ ನಂತರ ಪ್ರಭಾವತಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಬೇಕೆ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ. ಈ ಸಂಬಂಧ ಸ್ಪಷ್ಟನೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ.

‘ಅಧಿಕಾರ ಅವಧಿ ಮುಗಿದಿದ್ದರೂ ಮೇಯರ್ ಸ್ಥಾನದಲ್ಲಿ ಮುಂದುವರಿದಿದ್ದು ಸಭೆ ನಡೆಸಬಹುದು’ ಎಂದು ಕೆಲವು ಸದಸ್ಯರು ವಾದಿಸುತ್ತಿದ್ದರೆ, ಮತ್ತೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಿಯಮದ ಪ್ರಕಾರ ಮೇಯರ್ ಅವಧಿ ಒಂದು ವರ್ಷಕ್ಕೆ ಮುಗಿಯುತ್ತದೆ. ಅವಧಿ ಮುಗಿದ ನಂತರ ತಾಂತ್ರಿಕವಾಗಿ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂಬ ಕಾರಣಕ್ಕೆ ಸಾಮಾನ್ಯ ಸಭೆ ನಡೆಸಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ.

ಕಾಲಾವಧಿ;ಮೇಯರ್

ಮೊದಲ ಅವಧಿ;ಲಲಿತಾ ರವೀಶ್

2ನೇ ಅವಧಿ;ಫರಿದಾ ಬೇಗಂ

3ನೇ ಅವಧಿ;ಬಿ.ಜಿ.ಕೃಷ್ಣಪ್ಪ

4ನೇ ಅವಧಿ;ಎಂ.ಪ್ರಭಾವತಿ

ನಾಲ್ವರಿಗಷ್ಟೇ ಸಿಕ್ಕ ಮೇಯರ್ ಪಟ್ಟ ಮತ್ತೊಬ್ಬರಿಗೆ ತಪ್ಪಿದ ಅವಕಾಶ ಜನವರಿಗೆ ಕೌನ್ಸಿಲ್ ಅವಧಿ ಅಂತ್ಯ

‘ಸ್ಪಷ್ಟನೆ ಕೇಳಲಾಗಿದೆ’

ಹೊಸದಾಗಿ ಮೇಯರ್ ಆಯ್ಕೆ ಆಗದಿರುವುದರಿಂದ ಪ್ರಭಾವತಿ ಅವರೇ ಸದ್ಯಕ್ಕೆ ಮುಂದುವರಿದಿದ್ದಾರೆ. ಅಧಿಕಾರ ಅವಧಿ ಮುಗಿದಿರುವುದರಿಂದ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಬೇಕೆ? ಬೇಡವೆ? ಎಂಬ ಬಗ್ಗೆ ಸ್ಪಷ್ಟನೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ. ಬಿ.ವಿ.ಅಶ್ವಿಜ ಪಾಲಿಕೆ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT