ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಾಸ್ಪತ್ರೆಯಲ್ಲಿ ಕಾರ್ಮಿಕರ ನಿರ್ಲಕ್ಷ್ಯ

ಕನಿಷ್ಠ ವೇತನಕ್ಕೆ ದುಡಿಯುತ್ತಿರುವ ಕಾರ್ಮಿಕರು, ಸಂಬಳ ಪಾವತಿಗೆ ಅಧಿಕಾರಿಗಳು ತಾತ್ಸಾರ
Published 11 ಮಾರ್ಚ್ 2024, 6:37 IST
Last Updated 11 ಮಾರ್ಚ್ 2024, 6:37 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಆಸ್ಪತ್ರೆಯ ಸ‌್ವಚ್ಛತೆಗಾಗಿ ದುಡಿಯುವ ಪೌರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಮನೆಯ ಬಾಡಿಗೆ, ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸಲು ಆಗದೆ ಕಾರ್ಮಿಕರು ಪರದಾಡುತ್ತಿದ್ದಾರೆ. ಸಾಲ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ.

ಕಳೆದ ಎರಡು ತಿಂಗಳ ವೇತನ ಪಾವತಿಯಾಗದೆ ಕಾರ್ಮಿಕರು ಸಂಕಷ್ಟ ಅನುಭವಿಸಿದ್ದರು. ಈಚೆಗೆ ಒಂದು ತಿಂಗಳ ಸಂಬಳ ನೀಡಿದ್ದು, ಮತ್ತೊಂದು ತಿಂಗಳ ವೇತನ ಬಾಕಿ ಉಳಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಒಟ್ಟು 28 ಮಂದಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಆಸ್ಪತ್ರೆಗೆ ಈ ಸಂಖ್ಯೆ ಸಾಲುತ್ತಿಲ್ಲ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಒತ್ತಡವೂ ಜಾಸ್ತಿಯಾಗಿದೆ.

ಆಸ್ಪತ್ರೆಯ ವಾರ್ಡ್‌ಗಳು, ಶೌಚಾಲಯ ಸ್ವಚ್ಛತೆ, ಪಾರ್ಕ್‌ ನಿರ್ವಹಣೆ ಸೇರಿದಂತೆ ವಿವಿಧ ಕೆಲಸಕ್ಕೆ ಇವರನ್ನು ನೇಮಿಸಿಕೊಳ್ಳಲಾಗಿದೆ. ಒಬ್ಬರಿಗೆ ₹15 ಸಾವಿರ ಸಂಬಳ ನೀಡಲಾಗುತ್ತದೆ. ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದ ವೇತನ ಸಿಗುತ್ತಿಲ್ಲ. ಕನಿಷ್ಠ ಸಂಬಳಕ್ಕೆ ದುಡಿಯುತ್ತಿದ್ದಾರೆ.

15 ರಿಂದ 20 ವರ್ಷ ಕೆಲಸ ಮಾಡಿದರೂ ಅವರನ್ನು ಕಾಯಂಗೊಳಿಸಿಲ್ಲ. ಕಾಯಂ ಮಾಡಿದರೆ ಹೆಚ್ಚಿನ ಸಂಬಳ, ಅಗತ್ಯ ಸೌಲಭ್ಯ ಕಲ್ಪಿಸಬೇಕಾಗುತ್ತದೆ ಎಂದು ಲೆಕ್ಕ ಹಾಕಿ, ಗುತ್ತಿಗೆ ಆಧಾರದಲ್ಲಿಯೇ ದುಡಿಸಿಕೊಳ್ಳುತ್ತಿದ್ದಾರೆ. ಇಡೀ ಆಸ್ಪತ್ರೆಗೆ ಇವರೇ ಆಧಾರವಾಗಿದ್ದಾರೆ. ಕಾರ್ಮಿಕರು ಇಲ್ಲದಿದ್ದರೆ ಆಸ್ಪತ್ರೆ ಗಬ್ಬು ನಾರುತ್ತದೆ. ಹೆಚ್ಚಿನ ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಬರುವ ಅಲ್ಪ ವೇತನದಲ್ಲಿಯೇ ಮನೆ ನಡೆಸಿಕೊಂಡು ಹೋಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಆಸ್ಪತ್ರೆಯ ನಿರ್ವಹಣೆಯಲ್ಲಿ ಸ್ವಲ್ಪ ಹೆಚ್ಚು–ಕಡಿಮೆಯಾದರೆ ಕೆಲಸಗಾರರ ಮೇಲೆ ರೇಗಾಡುವ ಅಧಿಕಾರಿಗಳು ಅವರಿಗೆ ಸರಿಯಾಗಿ ಸಂಬಳ ಸಿಗುತ್ತಿದೆಯೇ ಎಂಬುವುದರ ಬಗ್ಗೆ ಮಾತ್ರ ಗಮನ ಹರಿಸುವುದಿಲ್ಲ. ‘ಗುತ್ತಿಗೆ ನೀಡಿದ್ದೇವೆ, ಅವರೇ ನೋಡಿಕೊಳ್ಳುತ್ತಾರೆ’ ಎಂದು ಕೈ ತೊಳೆದುಕೊಳ್ಳುತ್ತಾರೆ. ಅಧಿಕಾರಿಗಳು, ಗುತ್ತಿಗೆ ಪಡೆದವರ ನಿರ್ಲಕ್ಷ್ಯದಿಂದ ಕಾರ್ಮಿಕರು ಬಡವಾಗುತ್ತಿದ್ದಾರೆ.

ತಾತ್ಸಾರ ಭಾವನೆ ಸಲ್ಲ ಕಾರ್ಮಿಕರ ವಿಷಯದಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಎಲ್ಲ ಕೆಲಸಗಳನ್ನು ಗುತ್ತಿಗೆ ನೀಡಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇಡೀ ಆಸ್ಪತ್ರೆಯ ‘ಜೀವಾಳ’ ಆಗಿರುವ ಗುತ್ತಿಗೆ ಕಾರ್ಮಿಕರ ಬಗ್ಗೆ ಈ ತಾತ್ಸಾರ ಭಾವನೆ ಸಲ್ಲದು.
ಎನ್‌.ಕೆ.ಸುಬ್ರಮಣ್ಯ ಜಿಲ್ಲಾ ಕಾರ್ಯದರ್ಶಿ ಸಿಐಟಿಯು

‘ಅಧಿಕಾರಿಗಳು, ಗುತ್ತಿಗೆ ಪಡೆದ ಸಂಸ್ಥೆಯವರ ಬಳಿ ನಮ್ಮ ಸಮಸ್ಯೆ ಹೇಳಿಕೊಂಡರೆ ‘ಇಷ್ಟ ಇದ್ದರೆ ಕೆಲಸ ಮಾಡಿ, ಇಲ್ಲ ಎಂದರೆ ಬಿಟ್ಟು ಹೋಗಿ’ ಎನ್ನುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಮಸ್ಯೆ ಆಲಿಸುವ ಮನಸ್ಥಿತಿ ಯಾರಿಗೂ ಇಲ್ಲವಾಗಿದೆ’ ಎಂದು ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

‘ನೇರ ಪಾವತಿಯಡಿ ತಂದು, ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಲು ಆಗುತ್ತಿಲ್ಲ’ ಎಂದು ಮತ್ತೊಬ್ಬ ಕಾರ್ಮಿಕ ಅಸಮಾಧಾನ ವ್ಯಕ್ತಪಡಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT