ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳಿಗೆ ಬೇಡವಾದ ಪೋಷಕರು: ವೃದ್ಧಾಶ್ರಮಗಳಲ್ಲಿ ಹೆಚ್ಚಿದ ಹಿರಿಯ ನಾಗರಿಕರ ಸಂಖ್ಯೆ

ಮೈಲಾರಿ ಲಿಂಗಪ್ಪ
Published 13 ಮೇ 2024, 5:53 IST
Last Updated 13 ಮೇ 2024, 5:53 IST
ಅಕ್ಷರ ಗಾತ್ರ

ತುಮಕೂರು: ತಂದೆ–ತಾಯಂದಿರನ್ನು ಹೆತ್ತ ಮಕ್ಕಳೇ ಮನೆಯಿಂದ ಆಚೆ ಹಾಕುತ್ತಿದ್ದು, ಹಿರಿಯ ಜೀವಗಳಿಗೆ ವೃದ್ಧಾಶ್ರಮಗಳು ಆಸರೆಯಾಗುತ್ತಿವೆ. ಜಿಲ್ಲೆಯಲ್ಲಿ ವೃದ್ಧಾಶ್ರಮಗಳಿಗೆ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ವೃದ್ಧಾಪ್ಯದ ಸಮಯದಲ್ಲಿ ಮಕ್ಕಳ ಆರೈಕೆಯಲ್ಲಿ ಇರಬೇಕಾದ ಹಿರಿಯರು ‘ಅನಾಥ’ರಾಗುತ್ತಿದ್ದಾರೆ. ಕುಟುಂಬದ ಸದಸ್ಯರ ಜತೆಗೆ ಬದುಕು ಸವೆಸಬೇಕು. ಮಕ್ಕಳು, ಮೊಮ್ಮಕ್ಕಳ ಮಧ್ಯೆಯೇ ಜೀವನ ಕಳೆಯಬೇಕು ಎಂದು ಬಯಸುವವರು ಈಗ ನಾಲ್ಕು ಗೋಡೆಗಳಿಗೆ ಸೀಮಿತವಾಗುತ್ತಿದ್ದಾರೆ. ಮಕ್ಕಳು ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ತಮ್ಮ ತಂದೆ–ತಾಯಂದಿರನ್ನು ಆಶ್ರಮದಲ್ಲಿ ಬಿಟ್ಟು ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಾಯಧನ ಪಡೆಯುವ 6 ವೃದ್ಧಾಶ್ರಮಗಳಿವೆ. ಇವುಗಳಲ್ಲಿ 194 ಜನ ಹಿರಿಯರು ಬದುಕು ದೂಡುತ್ತಿದ್ದಾರೆ. ಪ್ರತಿಯೊಂದರಲ್ಲಿ 25 ಜನರನ್ನು ಸೇರಿಸಿಕೊಳ್ಳಬೇಕು. ಆದರೆ ಎಲ್ಲ ಕಡೆಗಳಲ್ಲಿ ಇದಕ್ಕಿಂತ ಜಾಸ್ತಿ ಸಂಖ್ಯೆಯ ವೃದ್ಧರು ಆಶ್ರಮಗಳಿಗೆ ದಾಖಲಾಗಿದ್ದಾರೆ.

ಮಧುಗಿರಿ, ಪಾವಗಡದಲ್ಲಿ ತಲಾ 2, ತುಮಕೂರು ಮತ್ತು ತಿಪಟೂರಿನಲ್ಲಿ ತಲಾ ಒಂದು ವೃದ್ಧಾಶ್ರಮ ಇದೆ. ತುಮಕೂರು ನಗರದಲ್ಲಿರುವ ವೃದ್ಧಾಶ್ರಮದಲ್ಲಿ 50 ಜನ ಹಿರಿಯ ನಾಗರಿಕರಿದ್ದಾರೆ. ಮಿತಿಗಿಂತ ಜಾಸ್ತಿ ಜನರು ಇಲ್ಲಿ ಸೇರಿದ್ದಾರೆ. ಮಧುಗಿರಿಯ 2 ಆಶ್ರಮಗಳಲ್ಲಿ 58, ಪಾವಗಡದಲ್ಲಿ 58 ಮತ್ತು ತಿಪಟೂರಿನಲ್ಲಿ 28 ಜನ ವೃದ್ಧರ ಆರೈಕೆ ನಡೆಯುತ್ತಿದೆ.

ಅತ್ತೆ–ಸೊಸೆ ಜಗಳ, ಇಬ್ಬರ ಮಧ್ಯೆ ಮನಸ್ತಾಪದಿಂದ ಅತ್ತೆ ವೃದ್ಧಾಶ್ರಮ ಸೇರುತ್ತಿದ್ದಾರೆ. ಆಸ್ತಿ–ಅಂತಸ್ತು ಇದ್ದವರೂ, ಶ್ರೀಮಂತರು, ಉದ್ಯೋಗದಲ್ಲಿದ್ದು, ನೆಮ್ಮದಿಯ ಜೀವನ ಸಾಗಿಸುತ್ತಿರುವವರು ತಮ್ಮ ಪೋಷಕರನ್ನು ವೃದ್ಧಾಶ್ರಮಗಳಲ್ಲಿ ಬಿಟ್ಟು ಹೋಗುತ್ತಿದ್ದಾರೆ. ‘ಬುದ್ಧಿವಂತರು’ ಎಂದು ಕರೆಸಿಕೊಳ್ಳುವ ಜನರೇ ಹೆತ್ತವರನ್ನು ಆಶ್ರಮಗಳಲ್ಲಿ ಬಿಡುತ್ತಿದ್ದಾರೆ. ವಿದ್ಯಾವಂತರು ಹೆಚ್ಚಿದಂತೆ ವೃದ್ಧಾಶ್ರಮಕ್ಕೆ ಸೇರುವ ಹಿರಿಯರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ.

ಶೇ 90 ರಷ್ಟು ವೃದ್ಧರು ಮಕ್ಕಳಿಗೆ ಮದುವೆ ಮಾಡಿದ ನಂತರ ವೃದ್ಧಾಶ್ರಮದ ಕಡೆ ಹೆಜ್ಜೆ ಹಾಕುತ್ತಿದ್ದಾರೆ. ಹಿರಿಯರೇ ಮನೆಗೆ ಭಾರ ಅಂತ ತಮ್ಮ ಮಕ್ಕಳು ಭಾವಿಸುತ್ತಿದ್ದಾರೆ. ಅವರನ್ನು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷ್ಯ ತೋರುವುದು ಜಾಸ್ತಿಯಾಗುತ್ತಿದೆ. ಇದರಿಂದ ಕೆಲವರು ತಾವೇ ವೃದ್ಧಾಶ್ರಮಗಳಿಗೆ ಬಂದರೆ, ಮತ್ತೆ ಕೆಲವರನ್ನು ತಮ್ಮ ಮಕ್ಕಳೇ ತಂದು ಸೇರಿಸುತ್ತಿದ್ದಾರೆ.

‘ಮಕ್ಕಳೇ ಪೋಷಕರನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದ ಹಲವು ಪ್ರಸಂಗಗಳನ್ನು ಕಂಡಿದ್ದೇವೆ. ಎಲ್ಲ ಇದ್ದವರೂ ಏನೂ ಇಲ್ಲದಂತೆ ಆಶ್ರಮಗಳಲ್ಲಿ ಬದುಕುತ್ತಿದ್ದಾರೆ. ವಲ್ಲದ ಮನಸ್ಸಿನಿಂದ ವೃದ್ಧಾಶ್ರಮದಲ್ಲಿ ಇರುತ್ತಾರೆ’ ಎಂದು ಅಧಿಕಾರಿಯೊಬ್ಬರು ಬೇಸರದಿಂದಲೇ ಮಾತನಾಡಿದರು.

₹11.50 ಲಕ್ಷ ಸಹಾಯಧನ

ಜಿಲ್ಲೆಯಲ್ಲಿರುವ 6 ಆಶ್ರಮಗಳಿಗೆ ಪ್ರತಿ ವರ್ಷ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ತಲಾ ₹11.50 ಲಕ್ಷ ಸಹಾಯಧನ ನೀಡಲಾಗುತ್ತದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವೇತನ ಅಗತ್ಯ ಸೌಲಭ್ಯಗಳಿಗೆ ಬೇಕಾದ ಅನುದಾನವೂ ಸರ್ಕಾರದಿಂದ ಬರುತ್ತಿದೆ. ತುಮಕೂರು ಹೊರ ವಲಯದ ಮೈದಾಳದಲ್ಲಿ ಸರ್ಕಾರದಿಂದ ಸಹಾಯಧನ ಪಡೆಯದೆ 2 ಆಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಗೆ ದಾಖಲಾಗುವ ವೃದ್ಧರಿಗೆ ಪ್ರತಿ ತಿಂಗಳು ಇಂತಿಷ್ಟು ಎಂದು ಶುಲ್ಕ ನಿಗದಿ ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT