ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ವ ಮುಂಗಾರು ಬಿತ್ತನೆ ಚುರುಕು

Published 17 ಮೇ 2024, 7:23 IST
Last Updated 17 ಮೇ 2024, 7:23 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಅಲ್ಲಲ್ಲಿ ಪೂರ್ವ ಮುಂಗಾರು ಬೀಜ ಬಿತ್ತನೆ ಕಾರ್ಯದಲ್ಲಿ ರೈತರ ಸಕ್ರಿಯರಾಗಿದ್ದಾರೆ.

ರೈತರು ಪ್ರತಿ ವರ್ಷ ಭರಣಿ ಮಳೆಗೆ ಪೂರ್ವ ಮುಂಗಾರು ಬಿತ್ತನೆ ಮಾಡುವುದು ವಾಡಿಕೆ. ಆದರೆ ಈ ಬಾರಿ ಕೆಲವೆಡೆ ಮಾತ್ರ ಭರಣಿ ಸೋನೆ ಮಳೆಯಾದ ಪರಿಣಾಮ ಬಿತ್ತನೆಗೆ ಅನುಕೂಲವಾಗಲಿಲ್ಲ.

ಕಳೆದ ಮೂರು ದಿನಗಳಿಂದ ಸುರಿದ ಕೃತಿಕ ಹದ ಮಳೆಯಿಂದ ರೈತರಲ್ಲಿ ಸಂತಸ ಮೂಡಿ ಭೂಮಿ ಹದ ಮಾಡಿಕೊಳ್ಳುತ್ತಿದ್ದು, ಕೆಲ ರೈತರು ಪೂರ್ವ ಮುಂಗಾರು ಬೀಜ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ತಾಲ್ಲೂಕಿನಲ್ಲಿ ದನಗಳಿಂದ ಉಳುಮೆ ಮಾಡಿಸುವುದು ವಿರಳವಾಗಿದ್ದರೂ ಟ್ರ್ಯಾಕ್ಟರ್ ಉಳುಮೆಗೆ ಬೇಡಿಕೆ ಹೆಚ್ಚಿದೆ. ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ಜೋಳ, ತೋಗರಿ, ಮುಸುಕಿನ ಜೋಳ, ರಸಗೊಬ್ಬರ, ಅಪ್ಪ ಸೆಣಬುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಳಿಂದ ರೈತರು ಬರುತ್ತಿದ್ದಾರೆ ಎಂದು ಗೊಬ್ಬರದಂಗಡಿ ಮಾಲೀಕ ಡಿ.ಎಸ್.ಕೈಲಾಸಂ ತಿಳಿಸಿದರು.

‘ಭರಣಿ ಮಳೆ ಸರಿಯಾಗಿ ಬೀಳಲಿಲ್ಲ ಹಾಗಾಗಿ 15ರಿಂದ 20 ದಿನ ಪೂರ್ವ ಮುಂಗಾರು ಬಿತ್ತನೆಗೆ ಹಿನ್ನೆಡೆಯಾಗಿದ್ದರೂ ರೈತರು ಕೃತಿಕೆ ಮಳೆಗೆ ಬಿತ್ತನೆ ಮಾಡುತ್ತಿದ್ದಾರೆ. ಈ ಮಳೆಗೆ ಹೆಸರು ಕಾಳು ಇಳುವರಿ ಸಮರ್ಪಕವಾಗಿ ಬರುವುದಿಲ್ಲ ಕಾಳುಗಳು ಚನ್ನಾಗಿ ಕಟ್ಟುವುದಿಲ್ಲ. ಮುಂದಿನ ಮಳೆಗಳು ಉತ್ತಮವಾಗಿ ಬಿದ್ದರಷ್ಟೇ ಹೆಸರು ಕಾಳು ಸಿಗುತ್ತವೆ’ ಎನ್ನುತ್ತಾರೆ ರೈತ ಜಯಣ್ಣ'

ತಾಲ್ಲೂಕಿನಲ್ಲಿ ಹೆಸರು 1,300, ಅಲಸಂದೆ 1,100, ಉದ್ದು 50, ತೊಗರಿ 380 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ಸಾಮಾನ್ಯ ವರ್ಗದವರಿಗೆ 5 ಕೆ.ಜಿ ಹೆಸರು ಕಾಳಿಗೆ ₹805, ಅಲಸಂದೆ ₹550 ಮತ್ತು ತೊಗರಿ ₹770 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 5 ಕೆ.ಜಿ ಹೆಸರಿಗೆ ₹742.5, ಅಲಸಂದೆ ₹487.5, ಮತ್ತು ತೊಗರಿ ₹777.5  ರಿಯಾಯಿತ ದರದಲ್ಲಿ ವಿತರಣೆ ಮಾಡಲಾಗುತ್ತಿದ್ದು ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಗಿರೀಶ್ ತಿಳಿಸಿದರು.

‘ಈ ಬಾರಿ ಸರ್ಕಾರ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿರುವ ಬಿತ್ತನೆ ಬೀಜದ ಬೆಲೆಗೂ, ಖಾಸಗಿ ಅಂಗಡಿ ಬೆಲೆಯಷ್ಟೇ ಇದ್ದು ಬಡ ರೈತರು ಸಾವಿರಾರು ರೂಪಾಯಿ ಕೊಟ್ಟು ಖರೀದಿಸಲು ಸಾದ್ಯವಾಗುತ್ತಿಲ್ಲ’ ಎಂದು ರೈತ ತೊರೆಮಾವಿನಹಳ್ಳಿ ಚಂದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT