ಮಂಗಳವಾರ, ಅಕ್ಟೋಬರ್ 26, 2021
20 °C
ತಹಶೀಲ್ದಾರ್‌ಗೆ ಸ್ಥಳ ಪರಿಶೀಲನೆ ನಡೆಸಲು ಗ್ರಾಮಸ್ಥರ ಪಟ್ಟು

ಕೆರೆ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ರಾಸಾಯನಿಕ ತ್ಯಾಜ್ಯದಿಂದಾಗಿ ನಾಶವಾಗುತ್ತಿರುವ ತಾಲ್ಲೂಕಿನ ಗೊಟ್ಟಿಕೆರೆ ಸಂರಕ್ಷಣೆಗೆ ಆಗ್ರಹಿಸಿ ಗ್ರಾಮಸ್ಥರು ಮತ್ತು ಜೆಡಿಎಸ್ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರಾದ ಮಹಾದೇವ್‌ ಮಾತನಾಡಿ, ಗೊಟ್ಟಿಕೆರೆ ಕೆರೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತ್ಯಾಜ್ಯಗಳಿಂದ ಕುಲುಷಿತಗೊಂಡಿದೆ. ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಮತ್ತು ಕೆಲ ಕಾರ್ಖಾನೆಯವರು ರಾಜಕಾಲುವೆಯನ್ನು ಮುಚ್ಚಿ ತ್ಯಾಜ್ಯಗಳನ್ನು ಹರಿಯಬಿಡುತ್ತಿರುವುದರಿಂದ ಗೊಟ್ಟಿಕೆರೆ ನೀರು ಜನ, ಜಾನುವಾರು ಬಳಕೆಗೆ ಯೋಗ್ಯವಾಗಿಲ್ಲ ಎಂದರು.

ಕೆರೆ ವ್ಯಾಪ್ತಿಯ ಕಲ್ಲನಾಯಕನಹಳ್ಳಿ, ಅಂಚೇಪಾಳ್ಯ, ಚನ್ನತಿಮ್ಮನಪಾಳ್ಯ, ಮುದುಗೆರೆಪಾಳ್ಯ, ಯಲ್ಲಯ್ಯನಪಾಳ್ಯ, ಶಂಭಗೌಡನಪಾಳ್ಯದ ಅಂತರ್ಜಲದ ಮೇಲೂ ಪರಿಣಾಮ ಬೀರುತ್ತಿದೆ. ಕೊಳವೆಬಾವಿಗಳ ನೀರು ಕಲುಷಿತಗೊಂಡಿದೆ. ಮೊದಲಿಗೆ ಅಂತರಗಂಗೆ ಬೆಳೆದು ಕೆರೆಯನ್ನು ಸಂಪೂರ್ಣ ಆವರಿಸಿಕೊಂಡಿತ್ತು. ನಂತರ ರಾಸಾಯನಿಕ ತ್ಯಾಜ್ಯದಿಂದ ಅಂತರ ಗಂಗೆ ನಾಶವಾಗಿ, ಕೆರೆಯಲ್ಲಿಯೇ ಕೊಳೆತು ಕೆಟ್ಟ ವಾಸನೆ ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗದ ಕಾರಣ ಪ್ರತಿಭಟನೆ ನಡೆಸುವಂತಾಗಿದೆ
ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿ, ಕೆರೆಗಳನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೆರೆ, ಪರಿಸರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಕಂದಾಯ, ಆರೋಗ್ಯ, ಪಂಚಾಯಿತಿ ಮತ್ತು ಪರಿಸರ ಇಲಾಖೆ ಅಧಿಕಾರಿಗಳ ಸಮನ್ವಯತೆ ಕೊರತೆ ಮತ್ತು ಇಚ್ಛಾಶಕ್ತಿ ಕೊರತೆಯಿಂದ ಕೆರೆ ನಾಶವಾಗುತ್ತಿವೆ ಎಂದು ದೂರಿದರು.

ಮನವಿ ಸ್ವೀಕರಿಸಲು ಬಂದ ತಹಶೀಲ್ದಾರ್ ಮಹಬಲೇಶ್ವರ್ ಜತೆ ಪ್ರತಿಭಟನಕಾರರು ವಾಗ್ವಾದ ನಡೆಸಿದರು. ಕೆರೆಯ ಸ್ಥಳ ಪರಿಶೀಲನೆ ಮಾಡಬೇಕು ಎಂದು ಪಟ್ಟು ಹಿಡಿದ ಕಾರಣ ತಹಶೀಲ್ದಾರ್ ಕೆರೆಯನ್ನು ಗ್ರಾಮಸ್ಥರ ಜತೆ
ಪರಿಶೀಲಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಗ್ರಾಮಸ್ಥರಾದ ರೇವಣ್ಣ ಗೌಡ, ಲಿಂಗೇಗೌಡ, ರಾಮಣ್ಣ, ಮಂಜುನಾಥ್, ಮುರಳಿ ಮೋಹನ್, ರಂಗ, ರಮೇಶ್, ಶಿವರಾಜು, ಮಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.