ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರುವೇಕೆರೆ: ಹರ್ಷ ತಂದ ಕೃತಿಕ ಮಳೆ

Published 14 ಮೇ 2024, 9:16 IST
Last Updated 14 ಮೇ 2024, 9:16 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನಾದ್ಯಂತ ಭಾನುವಾರ ತಡ ರಾತ್ರಿಯಿಂದ ಮುಂಜಾನೆವರೆಗೆ ಸುರಿದ ಹದ ಮಳೆ ಭೂಮಿಗೆ ತಂಪೆರೆಯಿತು.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಧ್ಯರಾತ್ರಿ ಒಂದು ಗಂಟೆಗೆ ಗುಡುಗು, ಮಿಂಚಿನೊಂದಿಗೆ ಪ್ರಾರಂಭವಾದ ಬಿರುಸಿನ ಮಳೆ ಮುಂಜಾನೆ ಸೊನೆ ಮಳೆಯೊಂದಿಗೆ ನಿಂತಿತು.

ಭಾನುವಾರ ರಾತ್ರಿ ಪಟ್ಟಣ ಹಾಗೂ ಕಸಬಾ ವ್ಯಾಪ್ತಿ 10.8 ಸೆಂ.ಮೀಟರ್ ಹೆಚ್ಚು ಮಳೆಯಾಗಿರುವ ಕಾರಣ ಹಾವಾಳ, ತಾವರೇಕೆರೆ, ಮುನಿಯೂರು, ಬಾಣಸಂದ್ರ, ಸೂಳೇಕೆರೆ, ಮಾದಿಹಳ್ಳಿ, ಅರಳೀಕೆರೆ, ಸೋಮೇನಹಳ್ಳಿ ಗ್ರಾಮಗಳಲ್ಲಿ ಭೂಮಿ ಹದವಾಗಿವೆ.

ದಂಡಿನಶಿವರ ಹೋಬಳಿ ವ್ಯಾಪ್ತಿಯ ಹುಲ್ಲೇಕೆರೆ, ಅಮ್ಮಸಂದ್ರ, ದಂಡಿನಶಿವರ, ದುಂಡಾ, ಬೀಸ್ನಹಳ್ಳಿ, ದೊಂಬರನಹಳ್ಳಿ, ಅಕ್ಕಳಸಂದ್ರ ಗೊಲ್ಲರಹಟ್ಟಿ, ಹೆಗ್ಗೆರೆ, ಸಂಪಿಗೆ ಯಲದಬಾಗಿ, ತಳವಾರನಹಳ್ಳಿ, ದ್ಯಾಮಸಂದ್ರ, ಮಾಸ್ಥಿಗೊಂಡನಹಳ್ಳಿ, ಮಾಯಸಂದ್ರ ಗ್ರಾಮದ ಸುತ್ತಮುತ್ತ, ವಡವನಹಳ್ಳಿ, ತುಂಬೆಪುರ, ಮುಗಳೂರು, ತೂಬಿನಕಟ್ಟೆ, ಮಲ್ಲದೇವನಹಳ್ಳಿ, ಸೊರವನಹಳ್ಳಿ, ದಾಸೀಹಳ್ಳಿ, ದಬ್ಬೇಘಟ್ಟ ಹೋಬಳಿಯಲ್ಲಿ ಭರಣಿ ಮಳೆ ಸರಿಯಾಗಿ ಬಾರದಿದ್ದರೂ ಕೃತ್ತಿಕೆ ಮಳೆ ತಂಡಗ, ಅಬುಕನಹಳ್ಳಿ, ಅರೆಮಲ್ಲೇನಹಳ್ಳಿ, ಗೋವಿಂದಘಟ್ಟ ಮತ್ತು ಮಾವಿನಹಳ್ಳಿಗಳಲ್ಲಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ತಾಲ್ಲೂಕಿನಾದ್ಯಂತೆ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತೋಟ ಸಾಲು, ಅಡಿಕೆ ಸಾಲು, ಬಾಳೆ ಮತ್ತು ಹೊಲಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿದೆ. ಇದರಿಂದ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವುದು ತಪ್ಪಿದೆ.

ಮಳೆಯಿಲ್ಲದೆ ತೆಂಗಿನ ಮರದ ಗರಿಗಳು ಬಾಡಿದ್ದವು. ಎಳನೀರಿನ ಅರಳುಗಳು ಉದುರುತ್ತಿದ್ದವು. ಕೆಂಪು ಮೂತಿ ಕೀಟದ ಹಾವಳಿ ಹೆಚ್ಚಾಗಿತ್ತು. ಅಡಿಕೆ ಮತ್ತು ಬಾಳೆ ಗಿಡಿದ ಎಲೆಗಳು ಮಳೆಯಿಲ್ಲದೆ ಸೊರಗಿದ್ದವು ಈ ಮಳೆಯಿಂದ ತೆಂಗು, ಅಡಿಕೆ ಮತ್ತು ಬಾಳೆ ಗಿಡಗಳು ಸೊಂಪಾಗಿ ಬೆಳೆಯಲು ಸಹಕಾರಿ ಎನ್ನುತ್ತಾರೆ ರೈತ ಬಸವರಾಜು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಪ್ಯಾಕ್ಟರಿ ಆಸ್ಪತ್ರೆಯ ಮುಂಭಾಗದ ಬೃಹತ್ ನೀಲಗಿರಿ ಮರ ಬುಡ ಸಮೇತ ಧರೆಗೆ ಉರುಳಿದೆ. ಅದರ ಕೊಂಬೆಗಳು ವಿದ್ಯುತ್ ಲೈನ್ ಮೇಲೆ ಬಿದ್ದು 2 ಕಂಬ ಮುರಿದಿವೆ. ಮಾದಪಟ್ಟಣ ಗೇಟ್‌ನಲ್ಲಿ ಮರ ರಸ್ತೆ ಮೇಲೆ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ತಂಡಗ ಬೆಸ್ಕಾಂ ವ್ಯಾಪ್ತಿ ಮರ ಬಿದ್ದು 6 ವಿದ್ಯುತ್ ಕಂಬ ಮುರಿದಿವೆ. ಪಟ್ಟಣದ ಎಪಿಎಂ ಕಾಂಪೌಂಡ್ ಮಳೆಗೆ ನೆನೆದು ರಸ್ತೆಗೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT