ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಶ್ರೀನಿವಾಸ್‌ಗೆ ಒಲಿದ ನಿಗಮ

ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ
Published 27 ಜನವರಿ 2024, 5:31 IST
Last Updated 27 ಜನವರಿ 2024, 5:31 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಜಿಲ್ಲೆಯಿಂದ ಅವರೊಬ್ಬರಿಗೆ ನಿಗಮ, ಮಂಡಳಿಯಲ್ಲಿ ಅಧಿಕಾರ ಸಿಕ್ಕಂತಾಗಿದೆ.

ತಿಪಟೂರು ಶಾಸಕ ಕೆ.ಷಡಾಕ್ಷರಿ ಸಹ ನಿಗಮ, ಮಂಡಳಿಯಲ್ಲಿ ಅವಕಾಶ ಸಿಗಬಹುದು ಎಂದು ಕಾದು ಕುಳಿತಿದ್ದರು. ಮೊದಲ ಕಂತಿನಲ್ಲಿ ಅವಕಾಶ ಸಿಗದೆ ನಿರಾಶರಾಗಿದ್ದಾರೆ. ಪ್ರಸ್ತುತ 34 ಶಾಸಕರನ್ನು ವಿವಿಧ ನಿಗಮ, ಮಂಡಳಿಗೆ ನೇಮಕ ಮಾಡಿದ್ದು, ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ಮುಂದಿನ ಹಂತದಲ್ಲಿ ಶಾಸಕರಿಗೆ ಅವಕಾಶ ಸಿಗುವುದು ಕಡಿಮೆ ಎಂದು ಹೇಳಲಾಗುತ್ತಿದ್ದು, ಷಡಾಕ್ಷರಿ ಅವರಿಗೂ ಅವಕಾಶ ಸಿಗುವುದು ಕಷ್ಟಕರ ಎಂದೇ ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್‌ನಲ್ಲಿ ಇದ್ದ ಶ್ರೀನಿವಾಸ್ ಅವರಿಗೆ ದಳಪತಿಗಳ ಜತೆ ಭಿನ್ನಾಭಿಪ್ರಾಯ ಮೂಡಿತ್ತು. ಪಕ್ಷದಿಂದ ಅಂತರ ಕಾಯ್ದುಕೊಂಡು ಹೊರ ಬಂದಿದ್ದರು. ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿ, ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದರು. ಈಗ ನಿಗಮದ ಸ್ಥಾನ ಸಿಕ್ಕಿದೆ.

‘ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಅವಕಾಶ ನೀಡಲಾಗುತ್ತಿದೆ. ಶ್ರೀನಿವಾಸ್ ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿ ಆಗಿರಬಹುದು. ಆದರೆ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಜಿಲ್ಲೆಗೆ ಅವರ ಕೊಡುಗೆಯಾದರೂ ಏನು? ಪಕ್ಷಾಂತರ ಮಾಡಿ ಬಂದರು. ಇಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಪಕ್ಷಕ್ಕಾಗಿ ದುಡಿದವರು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಪಕ್ಷಾಂತರಿಗಳಿಗೆ ಮಣೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಕ್ಕಾಗಿ ದುಡಿದವರು, ಸಂಘಟನೆಯಲ್ಲಿ ತೊಡಗಿಸಿಕೊಂಡವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯಿಂದ 8 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗಲು ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮವಿದೆ. ಈ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ. ಶಾಸಕರಾಗಿರುವುದೇ ಒಂದು ಅಧಿಕಾರ ಸ್ಥಾನ. ಈಗ ಮತ್ತೊಂದು ಅಧಿಕಾರ ಸ್ಥಾನ ನೀಡಲಾಗಿದೆ. 8 ಮಂದಿ ಗೆಲ್ಲಿಸಲು ನೆರವಾದ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡಬೇಕಿತ್ತು ಎಂದು ಹೆಸರು ಹೇಳಲು ಬಯಸದ ಮತ್ತೊಬ್ಬ ಮುಖಂಡ ಆಕ್ರೋಶ ಹೊರ ಹಾಕಿದರು.

ಮೊದಲ ಕಂತಿನಲ್ಲಿ ಶಾಸಕರಿಗೆ ಮಾತ್ರ ಅವಕಾಶ ನೀಡಿದ್ದು, ಮುಂದಿನ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT